Advertisement

ಅರಸಯ್ಯ ಕೊಲೆ ಆರೋಪಿಗಳ ಬಂಧನ

12:58 PM Aug 16, 2018 | |

ಬೆಂಗಳೂರು: ಇತ್ತೀಚೆಗಷ್ಟೇ ಮಂಡ್ಯದ ಶ್ರೀರಂಗಪಟ್ಟಣದ ಬಳಿ ರೌಡಿಶೀಟರ್‌ ಅರಸಯ್ಯನನ್ನು ಹತ್ಯೆಗೈದ ಮತ್ತೂಬ್ಬ ರೌಡಿಶೀಟರ್‌ ಪಳನಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರದ ಸತೀಶ್‌ ಅಲಿಯಾಸ್‌ ಮಚ್ಚಿ (33), ಶೇಖರ್‌ ಅಲಿಯಾಸ್‌ ಕುಳ್ಳ (27) ಮತ್ತು ಉದಯ್‌ಕುಮಾರ್‌ ಅಲಿಯಾಸ್‌ ಉದಿ(34) ಬಂಧಿತರು.

Advertisement

ಆರೋಪಿಗಳ ವಿರುದ್ಧ ನಾಗಮಂಗಲ ಠಾಣೆ, ಕೆ.ಪಿ.ಅಗ್ರಹಾರ, ವೈಯಾಲಿಕಾವಲ್‌ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್‌ ಪಳನಿ ತನ್ನ ಸಹಚರಾರದ ಮೋನಿ, ಚಂದ್ರು ಸೇರಿ 8 ಮಂದಿ ಜತೆ ಶ್ರೀರಂಗಪಟ್ಟಣದ ಸಾತನೂರು ಪೊಲೀಸರಿಗೆ ಶರಣಾಗಿದ್ದಾನೆ.

2013ರಲ್ಲಿ ರೌಡಿಶೀಟರ್‌ ಪಳನಿ ಸಹೋದರ ರಂಗನಾಥ್‌ನನ್ನು ಅರಸಯ್ಯ ಮತ್ತು ಸಹಚರರು ಹತ್ಯೆಗೈದಿದ್ದರು. ಬಳಿಕ 2016ರಲ್ಲಿ ಪಳನಿಯ ಸಹಚರ ಜಲ್ಲಿ ವೆಂಕಟೇಶ್‌ನನ್ನು ಬನಶಂಕರಿ ವೃತ್ತದಲ್ಲಿ ಸೈಕಲ್‌ ರವಿ ಜತೆ ಸೇರಿಕೊಂಡು ಅರಸಯ್ಯ ಹತ್ಯೆಗೈದಿದ್ದ.

ಈ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅರಸಯ್ಯನ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ.11ರಂದು ಶ್ರೀರಂಗಪಟ್ಟಣ ಸಾತನೂರಿನ ಮಾರಿಯಮ್ಮ ದೇವಾಲಯದಿಂದ ವಾಪಸ್‌ ಬರುವಾಗ ನಡುರಸ್ತೆಯಲ್ಲೇ ದಾರುಣವಾಗಿ ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದಿಂದ ಸಂಚು: ಪ್ರಭಾವಿ ರಾಜಕಾರಣಿಗಳ ಜತೆ ಗುರುತಿಸಿಕೊಂಡಿದ್ದ ರೌಡಿ ಅರಸಯ್ಯ ಪ್ರಾಣ ಭಯದಿಂದ ಐದಾರು ಮಂದಿ ಅಂಗರಕ್ಷಕರ  ಜತೆ ಓಡಾಡುತ್ತಿದ್ದ. ಆದರೆ, ಪ್ರತಿ ಅಮವಾಸ್ಯೆಯಂದು ಶ್ರೀರಂಗಪಟ್ಟಣದ ಸಾತನೂರಿನ ಮಹಾಕಾಳಿ ದೇವಾಲಯಕ್ಕೆ ಹೋಗುವಾಗ ಒಬ್ಬನೇ ಹೋಗುತ್ತಿದ್ದ. ಜತೆಗೆ ಇದೇ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷನಾಗಿದ್ದರಿಂದ ತನ್ನ ಬೆಂಬಲಿಗರನ್ನು ಕರೆದೊಯ್ಯುತ್ತಿರಲಿಲ್ಲ.  ಈ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು ಕಳೆದೊಂದು ವರ್ಷದಿಂದ ಸಂಚು ರೂಪಿಸಿದ್ದು, ನಾಲ್ಕೈದು ಬಾರಿ ವಿಫ‌ಲ ಯತ್ನ ನಡೆಸಿದ್ದರು.

Advertisement

ಭೀಮಾನ ಅಮವಾಸ್ಯೆಯಂದು ಕೊಲೆ: ಪ್ರತಿ ಅಮವಾಸ್ಯೆಗೆ ಯಾವುದೇ ಭದ್ರತೆ ಇಲ್ಲದೆ ಒಬ್ಬನೇ ಹೋಗುವ ಅರಸಯ್ಯ ಈ ಬಾರಿಯ ಭೀಮನ ಅಮವಾಸ್ಯೆಯ ವಿಶೇಷ ಪೂಜೆಗೂ ಏಕಾಂಗಿಯಾಗಿ ಹೋಗುತ್ತಿದ್ದ. ಈ ಮಾಹಿತಿ ತಿಳಿದ ಪಳನಿ ಮತ್ತು ತಂಡ ಬೆಂಗಳೂರಿನಿಂದಲೇ ಹಿಂಬಾಲಿಸಿದೆ.

ಬಳಿಕ ಅರಸಯ್ಯ ಪೂಜೆ ಮುಗಿಸುವವರೆಗೂ ಕಾದು ಒಬ್ಬನೇ ಕಾರಿನಲ್ಲಿ ಹಿಂದಿರುಗುವಾಗ ಶ್ರೀರಂಗಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್‌ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ಪಳನಿ ಸೇರಿ ಸುಮಾರು 15 ಮಂದಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ತಮ್ಮ ವಿರುದ್ಧ ಬೆಂಗಳೂರಿನ ಸಿಸಿಬಿ ಹಾಗೂ ಮಂಡ್ಯ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಬುಧವಾರ ಬೆಳಗ್ಗೆಯೇ ಪಳನಿ ತನ್ನ 8 ಮಂದಿ ಸಹಚರರ ಜತೆ ಸೇರಿ ಸಾತನೂರು ಠಾಣೆಯಲ್ಲಿ ಶರಣಾಗಿದ್ದು, ಸತೀಶ್‌, ಶೇಖರ್‌ ಮತ್ತು ಉದಯ್‌ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಬಿನ್ನಿಸ್ಟೋನ್‌ ಗಾರ್ಡ್‌ನ್‌ ಬಳಿ ತಲೆಮರೆಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next