ಬೆಂಗಳೂರು: ದೆಹಲಿಯಿಂದ ವಿಮಾನದಲ್ಲಿ ಬಂದು ಐಷಾರಾಮಿ ಪ್ರದೇಶಗಳಲ್ಲಿ ಸುತ್ತಾಡಿ ಮನೆ ಕಳವು ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿ ಮೂಲದ ಮಿಂಚು ಬಿಸ್ವಾಸ್ (30), ಹರೀಶ್ ಚಂದ್ರ (32), ಚಂದ್ರಬಾನು (28), ಜಸ್ವೀರ್ (35) ಬಂಧಿತರು. 78.65 ಲಕ್ಷ ರೂ. ಮೌಲ್ಯದ 1.430 ಕೆ.ಜಿ. ಚಿನ್ನಾಭರಣ ಹಾಗೂ ವಜ್ರದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯಕ್ತ ಸತೀಶ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಾಲರ್ಸ್ ಕಾಲೋನಿ ನಿವಾಸಿ ನೆಟಲ್ ಲೂಯೀಸ್ ಎಂಬುವರ ಜುಲೈ 29ರಂದು ಮನೆಗೆ ಬೀಗ ಹಾಕಿಕೊಂಡು ಮಕ್ಕಳ ಮನೆಗೆ ಹೋಗಿದ್ದರು. ಅದೇ ದಿನ ಕಳ್ಳರು ಮನೆಯ ಮುಂಬಾಗಿಲ ಡೋರ್‌ಲಾಕ್ ಮುರಿದು ಚಿನ್ನ ದೋಚಿದ್ದರು. ಘಟನಾ ಸ್ಥಳದ ಸುತ್ತ-ಮುತ್ತಲ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಅಲ್ಲದೆ, ಆರೋಪಿಗಳು ರೈಲು ಮತ್ತು ಬಸ್‌ಗಳಲ್ಲಿ ದೆಹಲಿ ಕಡೆ ಹೋಗಿದ್ದಾರೆ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಜಾಡು ಹಿಡಿದು ವಿಮಾನದಲ್ಲಿ ತೆರಳಿ ಕನ್ಯಾಕುಮಾರಿ-ಆಗ್ರಾ ಹೈವೇಯಲ್ಲಿ ಆರೋಪಿ ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್‌ನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಇವರ ಮಾಹಿತಿ ಮೇರೆಗೆ ಪ್ರಮುಖ ಆರೋಪಿ ಮಿಂಟೋ ಬಿಸ್ವಾಸ್‌ನನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ವಿಮಾನದಲ್ಲಿ ಬಂದು, ರೈಲು, ಬಸ್‌ನಲ್ಲಿ ಎಸ್ಕೇಪ್: ಕಳವು ಮಾಡಲೆಂದೇ ಜುಲೈ 24ರಂದು ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದು, ಒಂದು ಸೆಕೆಂಡ್ ಹ್ಯಾಂಡ್ ಆಕ್ಟೀವಾ ವಾಹನ ಖರೀದಿಸಿದ್ದರು. ಬಳಿಕ ಐಷಾರಾಮಿ ಕಾಲೋನಿಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು. ಅದೇ ದಿನ ತಡರಾತ್ರಿ ಆ ಮನೆ ಬಳಿ ಬಂದು ಡೋರ್ ಲಾಕ್ ಮುರಿದು ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು ಮಾಡಿ, ರೈಲು ಅಥವಾ ಬಸ್‌ನಲ್ಲಿ ಪರಾರಿಯಾಗುತ್ತಿದ್ದರು.
ಆರೋಪಿಗಳ ವಿರುದ್ಧ ದೆಹಲಿ, ಕೇರಳ, ರಾಜಸ್ಥಾನದ ವಿವಿಧ ಠಾಣೆ ಹಾಗೂ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಜೆ.ಸಿ.ನಗರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್, ಠಾಣಾಧಿಕಾರಿ ಎ.ಗುರುಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕಳ್ಳತನ ಬಳಿಕ ರೈಲು, ಬಸ್‌ನಲ್ಲಿ ವಾಪಸ್:
ಕೃತ್ಯ ಎಸಗಿದ ಬಳಿಕ ಆರೋಪಿಗಳು ಎರಡು ತಂಡಗಳಾಗಿ ಬೇರೆಯಾಗುತ್ತಿದ್ದರು. ಒಂದು ತಂಡ ರೈಲಿನಲ್ಲಿ, ಮತ್ತೂಂದು ತಂಡ ಬಸ್‌ನಲ್ಲಿ ವಾಪಸ್ ದೆಹಲಿಗೆ ಹೋಗುತ್ತಿತ್ತು. ಪ್ರಮುಖ ಆರೋಪಿ ಮಿಂಟು ಬಿಸ್ವಾಸ್ ಚಿನ್ನಾಭರಣಗಳನ್ನು ಕೊಂಡೊಯ್ದು ವಿಲೇವಾರಿ ಮಾಡುತ್ತಿದ್ದ. ಬಂದ ಹಣದಲ್ಲಿ ನಾಲ್ವರು ಹಂಚಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು. ಆರೋಪಿಗಳ ಪೈಕಿ ಮಿಂಟು ಬಿಸ್ವಾಸ್ ಹೊಟ್ಟೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ಬಂಧಿಸಿದಾಗಲೆಲ್ಲಾ ಹೊಟ್ಟೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದ. ಹೀಗಾಗಿ ಪೊಲೀಸರು ಸಾಮಾನ್ಯವಾಗಿ ಬಂಧಿಸಿ, ಜೈಲಿಗೆ ಕಳುಹಿಸುತ್ತಿದ್ದರು. ಆದರೆ, ಸಂಜಯನಗರ ಪೊಲೀಸರು ಆರೋಪಿಯ ನಾಟಕವನ್ನು ಬಯಲು ಮಾಡಿ, ಬೇರೆಡೆ ಅಡಮಾನ ಇಟ್ಟಿದ್ದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.