ದಾವಣಗೆರೆ: ವಾಟರ್ ಸರ್ವೀಸ್‌ಗೆ ಬಿಟ್ಟಿರುವಂತಹ ಕಾರುಗಳನ್ನೇ ಕದ್ದು ಮಾರಾಟ ಮಾಡುತ್ತಿದ್ದ ಗೋವಾದ ಮೂವರನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು, ಆರೋಪಿಗಳಿಂದ 67 ಲಕ್ಷ ಮೌಲ್ಯದ 4 ಕಾರು ವಶಪಡಿಸಿಕೊಂಡಿದ್ದಾರೆ.
ಮಡಗಾವ್ ನಿವಾಸಿ ವಾಸೀಂ ಸೈಯದ್(32), ಮೂಲತಃ ರಾಣೆಬೆನ್ನೂರಿನ ಈಗ ಗೋವಾದಲ್ಲಿ ವಾಸ ಮಾಡುವ ಶಫಿಶೇಖ್ (25), ಮಡಗಾವ್ ದ ಆಟೋಕನ್ಸ್‌ಲ್ಟೆನ್ಸಿ ವ್ಯವಹಾರದಾರ ನಜೀರ್ ಅಹ್ಮದ್ ಬಂಧಿತರು. ಇನ್ನೋವಾ ಕ್ರಿಸ್ಟಾ, ಡಸ್ಟರ್, ಮಾರುತಿ ಬ್ರಿಜಾ, ಹೊಂಡೈ ಕ್ರೆಟಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಕಾರು ಕದ್ದು, ಮಾರಾಟ ಮಾಡಿರುವ ಸಂಶಯ ಇದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಮನೂರು ಗ್ರಾಮದ ನಾಗಮ್ಮ ಕೇಶವಮೂರ್ತಿ ಬಡಾವಣೆ ನಿವಾಸಿ ಅಂಜಿನಪ್ಪ ಎಂಬುವರು ಖರೀದಿಸಿದ್ದ ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ಜೂ.14 ರಂದು ಬೆಳಗ್ಗೆ ಶಾಮನೂರು ರಸ್ತೆಯಲ್ಲಿರುವ ತನುಶ್ರೀ ವಾಟರ್ ಸರ್ವೀಸ್ ಪಾಯಿಂಟ್‌ನಲ್ಲಿ ವಾಟರ್ ಸರ್ವೀಸ್‌ಗೆ ಬಿಟ್ಟಿದ್ದರು. ಮಧ್ಯಾಹ್ನ 1.30ರ ಸಮಯದಲ್ಲಿ ಕಾರನ್ನು ತೆಗೆದುಕೊಂಡು ಬರಲು ಹೋದಾಗ ಕಾರು ಇರಲಿಲ್ಲ. ಕಾರಿನ ಬಗ್ಗೆ ವಿಚಾರಿಸಿದಾಗ ಯಾರೋ ಅಪರಿಚಿತರು ಸರ್ವೀಸ್ ಸ್ಟೇಷನ್‌ನ ರಾಕೇಶ್ ಎಂಬುವರಿಂದ ಕೀ ಪಡೆದುಕೊಂಡು ಕಾರು ತೆಗೆದುಕೊಂಡು ಹೋಗಿರುವ ವಿಷಯ ಗೊತ್ತಾಯಿತು. ಅಂಜಿನಪ್ಪ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಎಂದು ತಿಳಿಸಿದರು.
ಕಾರು ಕಳವಿನ ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ಕಾರು ತೆಗೆದುಕೊಂಡು ಹೋಗಿರಬಹುದಾದ ಮಾರ್ಗಗಳಲ್ಲಿ ಪರಿಶೀಲನೆ ನಡೆಸಿದಾಗ ಬಂಕಾಪುರ ಕ್ರಾಸ್ ಟೋಲ್‌ನಲ್ಲಿ ಅಂಜಿನಪ್ಪನವರ ಕಾರನ್ನು ಯಾರೋ ಅಪರಿಚಿತರು ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಯಿತು. ಅದೇ ರೀತಿ ಎಲ್ಲಾ ಕಡೆ ಪರಿಶೀಲಿಸಿದಾಗ ಕೊನೆಗೆ ಮಡಗಾವ್ ನಿವಾಸಿ ವಾಸೀಂ ಸೈಯದ್ ಕಾರು ತೆಗೆದುಕೊಂಡು ಹೋಗಿದ್ದು ಪತ್ತೆಯಾಯಿತು. ಕೂಡಲೇ ಅವನನ್ನು ಬಂಧಿಸಲಾಯಿತು. ಅವನು ನೀಡಿದ ಮಾಹಿತಿ ಆಧರಿಸಿ ಇನ್ನುಳಿದ ಇಬ್ಬರನ್ನು ಬಂಧಿಸಿ, ನಾಲ್ಕು ಕಾರು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಎಸ್ಪಿ ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿ ವಾಸೀಂ ಸೈಯದ್, ವಾಟರ್ ಸರ್ವೀಸ್ ಸ್ಟೇಷನ್‌ಗಳಲ್ಲಿ ಬಿಟ್ಟ ಕಾರು ಗುರಿಯಾಗಿಟ್ಟುಕೊಂಡು ವಾಟರ್ ಸರ್ವೀಸ್ ಸ್ಟೇಷನ್ ಮಾಲಿಕರಿಗೆ ಯಾಮಾರಿಸಿ ಕಾರು ಕದ್ದು ಮಾರಾಟ ಮಾಡುತ್ತಿದ್ದ. ವಾಟರ್ ಸರ್ವೀಸ್ ಸ್ಟೇಷನ್ ಗೆ ಕಾರನ್ನು ಬಿಟ್ಟಾಗ ಸಾಮಾನ್ಯವಾಗಿ ಅಷ್ಟಾಗಿ ಗಮನ ನೀಡುವುದಿಲ್ಲ. ಯಾರಾದರೂ ಬಂದು ಖಚಿತವಾಗಿ ಇಂತಹ ಕಾರು ಸರ್ವೀಸ್‌ಗೆ ಬಿಡಲಾಗಿತ್ತು ಎಂದು ಹೇಳಿ ತೆಗೆದುಕೊಂಡು ಹೋಗುತ್ತಾರೆ. ಕಾರು ಮಾಲೀಕರು ತಮ್ಮ ಚಾಲಕರೋ, ಸಂಬಂಧಿಕರು, ಪರಿಚಿತರನ್ನು ಕಳಿಸುವುದನ್ನೇ ಬಂಡವಾಳ ಮಾಡಿಕೊಂಡು ಕಾರು ಕದಿಯುತ್ತಿದ್ದ ಎಂದು ತಿಳಿಸಿದರು. ಪ್ರಕರಣದ 3ನೇ ಆರೋಪಿ ನಜೀರ್ ಅಹ್ಮದ್ ವಿಮಾ
ಕಂಪನಿ ಸ್ವಾಧೀನದ ಹಳೆಯ ಕಾರು ಖರೀದಿಸುತ್ತಿದ್ದ.
ನಂತರ ಅದೇ ಕಂಪನಿ, ಮಾಡೆಲ್, ಬಣ್ಣದ ಕಾರುಗಳ ಕದ್ದು, ವಿಮಾ ಕಂಪನಿಯಿಂದ ಖರೀದಿಸಿದ್ದ ನಂಬರ್ ಪ್ಲೇಟನ್ನು ಕದ್ದ ಕಾರಿಗೆ ಹಾಕಿ, ಆ ಕಾರಿನ ಡಾಕ್ಯುಮೆಂಟ್ ತೋರಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಕದ್ದ ಕಾರುಗಳ ಇಂಜಿನ್, ಚೆಸ್ಸಿ ನಂಬರ್ ಬದಲಾಯಿಸಿ ಮಾರಾಟ ಮಾಡಿರುವ ಬಗ್ಗೆಯೂ ಸಂಶಯ ಇದೆ. ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರ ಉಪಾಧೀಕ್ಷಕ ಎಂ. ಬಾಬು, ಸಿಪಿಐ ಇ. ಆನಂದ್, ವಿದ್ಯಾನಗರ ಪಿಎಸ್‌ಐಗಳಾದ ಸಿದ್ದೇಗೌಡ, ಎಂ.ಡಿ. ಸಿದ್ದೇಶ್, ರೇವಣಸಿದ್ದಪ್ಪ ಸಿಬ್ಬಂದಿ ಕೆ.ಎಲ್. ತಿಪ್ಪೇಸ್ವಾಮಿ, ಆಂಜನೇಯ, ಲೋಕಾನಾಯ್ಕ, ಮಂಜುನಾಥ್, ಸೈಯದ್ ಅಲಿ, ನರೇಂದ್ರಸ್ವಾಮಿ, ದ್ಯಾಮೇಶ್, ಸುರೇಶ್, ವಿಶ್ವನಾಥ್, ವೆಂಕಟೇಶ್, ಚೇತನ್, ಆಂಜನೇಯ, ರಾಮಚಂದ್ರ ಜಾಧವ್,
ರಮೇಶ್, ರಾಮಚಂದ್ರಪ್ಪ ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿದರು. ಹೆಚ್ಚುವರಿ ಅಧೀಕ್ಷಕ ಟಿ.ಎಸ್. ಉದೇಶ್, ಸಿಪಿಐ ಇ. ಆನಂದ್ ಸುದ್ದಿಗೋಷ್ಠಿಯಲ್ಲಿದ್ದರು.