Advertisement

ಐವರು ಸರಗಳ್ಳರ ಬಂಧನ: 13 ಲಕ್ಷ ಮೌಲ್ಯದ ಚಿನ್ನಾಭರಣ ವಶ

09:47 AM Feb 25, 2019 | |

ವಿಜಯಪುರ: ನಗರದಲ್ಲಿ ನಡೆದಿದ್ದ 10 ಸರಗಳ್ಳತನ ಪ್ರಕರಣ ಪತ್ತೆ ಮಾಡಿರುವ ಪೊಲೀಸರು, ಕಳ್ಳತನ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಎರಡು ಪ್ರತ್ಯೇಕ ತಂಡಗಳ ಐವರನ್ನು ಬಂಧಿಸುವ ಮೂಲಕ 13,46,000 ರೂ. ಮೌಲ್ಯದ ವಸ್ತುಗಳನ್ನು ಜಫ್ತು ಮಾಡಿಕೊಂಡಿದ್ದಾರೆ.

Advertisement

ರವಿವಾರ ಚಿಂತನ ಹಾಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸರಗಳ್ಳರ ಬಂಧನ ಮಾಹಿತಿ ನೀಡಿದ ಎಸ್ಪಿ ಪ್ರಕಾಶ ನಿಕ್ಕಂ, ಗಾಂಧಿ ಚೌಕ್‌ ಪೊಲೀಸ್‌ ಠಾಣಾ ಪೊಲೀಸರು ಗಸ್ತು ಸಮಯದಲ್ಲಿ ಬಂಧಿಸಿರುವ ನವಬಾಗ ನಿವಾಸಿ ತೌಸೀಪ್‌ ಖಾಜಾಸಾಬ ಬಾಗವಾನ (21) ಹಾಗೂ ಹಕೀಂಚೌಕ್‌ ನಿವಾಸಿ ಅಜಮಾನ್‌ ಇಮಿಯಾಜ್‌ ಖುರೇಷಿ (22) ಎಂದು ಗುರುತಿಸಲಾಗಿದೆ. ಸದರಿ ಆರೋಪಿಗಳು ಆದರ್ಶನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 1 ಹಾಗೂ ಗಾಂಧಿಚೌಕ್‌ ಠಾಣೆ ವ್ಯಾಪ್ತಿಯಲ್ಲಿ 3 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಬಂಧಿ ತರಿಂದ 99 ಗ್ರಾಂ
ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ ಬೈಕ್‌ ಸೇರಿದಂತೆ 3.46 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇನ್ನು ಗೋಲಗುಮ್ಮಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂದಿರಾನಗರ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸೆರೆ ಸಿಕ್ಕಿರುವ ಮೂವರು ಸರಗಳ್ಳತನದ ಆರೋಪಿಗಳನ್ನು ಪುಲಕೇಶಿ ನಗರ ನಿವಾಸಿ ಮೊಹ್ಮದ್‌ ಖಾಲೀದ್‌ ಮೊಹ್ಮದ ಶಫಿಕ್‌ ಇನಾಮದಾರ (24), ರಜಪೂತ ಗಲ್ಲಿ ನಿವಾಸಿ ಅಮಿತ್‌ ರಾಮನಗೌಡ ಜಂಬಗಿ (21) ಹಾಗೂ ಕೆಎಚ್‌ಬಿ ನಿವಾಸಿ ಮೊಹ್ಮದ್‌ ಆರೋಫ್‌ ಶೇಖ ಅಮೀರ್‌ ಯರನಾಳ (21) ಎಂದು ಗುರುತಿಸಲಾಗಿದೆ. 

ಸದರಿ ಆರೋಪಿಗಳು ಜಲನಗರ, ಎಪಿಎಂಸಿ, ಆದರ್ಶನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಸರಗಳ್ಳತನ ಪ್ರಕರಣ, ಗೋಲಗುಮ್ಮಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ 210 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ 3 ಮೋಟಾರ್‌ ಸೈಕಲ್‌ ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಫ್ತು ಮಾಡಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ವಶಕ್ಕೆ ಪಡೆದಿರುವ ಚಿನ್ನಾಭರಣಗಳನ್ನು ಅವುಗಳ ಮಾಲೀಕರಿಗೆ ಪೊಲೀಸ್‌ ಅಧಿಕಾರಿಗಳು ಹಸ್ತಾಂತರಿಸಿದರು. ನಗರದ ಜನತೆಯ ನಿದ್ದೆಗೆಡಿಸಿದ್ದ ಸರಗಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಎಎಸ್‌ಪಿ ನೇಮಗೌಡ ಹಾಗೂ ಡಿವೈಎಸ್‌ಪಿ ಅಶೋಕ ನೇತೃತ್ವದ ತನಿಖಾ ತಂಡ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ಸುನೀಲ ಕಾಂಬಳೆ, ಟಿ.ಬಿ. ನೀಲಗಾರ, ಸಂಜಯಕುಮಾರ ಕಲ್ಲೂರ, ವಿನೋದ ದೊಡಮನಿ, ಆರೀಫ್‌ ಮುಶಾಪುರಿ, ಸತೀಶ ಕಣಮೇಶ್ವರ, ಸಿಬ್ಬಂದಿಗಳಾದ ಆರ್‌.ಎ. ಪತ್ತಾರ, ಬಿ.ಕೆ. ಗುಡಿಮನಿ, ಎಚ್‌.ಎಚ್‌. ಜಮಾದಾರ, ಎನ್‌.ಕೆ.ಮುಲ್ಲಾ, ಎಚ್‌.ಎಚ್‌. ಮುಲ್ಲಾ, ಎಂ.ಆರ್‌. ಮಾಳಗೊಂಡ, ಆರ್‌. ಎಸ್‌. ಪೂಜಾರಿ, ಎಸ್‌.ವಿ. ಜೋಗಿನ, ವಿ.ಎನ್‌. ಶಹಾಪುರ, ಬಿ.ಎಂ. ಪವಾರ, ಎಸ್‌.ಎಸ್‌. ಮಾಳೇಗಾಂವ, ಪುಂಡಲೀಕ ಬಿರಾದಾರ, ಶಿವು ಅಳ್ಳಿಗಿಡದ, ಸಿದ್ದು ದಾನಪ್ಪಗೋಳ, ಬಿ.ಎಂ. ಶೇಖ್‌, ಸಂಜಯ ಬಡಚಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಎಸ್ಪಿ ಪ್ರಕಾಶ ನಿಕ್ಕಂ, ಬಹುಮಾನ ಘೋಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next