Advertisement

ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಯಲ್ಲಿ 2 ಕೋಟಿ  ಕಳವು-ಇಬ್ಬರ ಬಂಧನ

08:59 PM Apr 07, 2022 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ವಿನ್ಯಾಸಕಾರನ ಮನೆಗೆ ನುಗ್ಗಿ ಬರೋಬರಿ ಎರಡು ಕೋಟಿ ರೂ. ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಕಳ್ಳರು ಕುಮಾರಸ್ವಾಮಿ ಲೇಔಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಸುಬ್ರಹ್ಮಣ್ಯಪುರ ನಿವಾಸಿ ಸುನೀಲ್‌ ಕುಮಾರ್‌ ಅಲಿಯಾಸ್‌ ತೊರೆ(35) ಮತ್ತು ಬೆಂಗಳೂರು ಗ್ರಾಮಾಂತರದ ಕೆಬ್ಬೆಹಳ್ಳಿ ನಿವಾಸಿ ದಿಲೀಪ್‌(23) ಬಂಧಿತರು.

ಆರೋಪಿಗಳಿಂದ 1.88 ಕೋಟಿ ರೂ. ಮೌಲ್ಯದ ನಗದು, 12 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ  ಜಪ್ತಿ ಮಾಡಲಾಗಿದೆ. ಆರೋಪಿಗಳು ಸಂದೀಪ್‌ ಲಾಲ್‌ ಎಂಬವರ ಮನೆಗೆ ನುಗ್ಗಿ ಎರಡು ಕೋಟಿ ರೂ. ನಗದು, 190 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಸುನೀಲ್‌ ಮತ್ತು ದಿಲೀಪ್‌ ಆಟೋ ಚಾಲಕರಾಗಿದ್ದು, ಆರೋಪಿಗಳು ಈ ಹಿಂದೆಯೂ ಕಳ್ಳತನ, ಡ್ರಗ್ಸ್‌ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಇತ್ತೀಚೆಗೆ ಮಾಗಡಿ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ದಿಲೀಪ್‌ ಜೈಲು ಸೇರಿದ್ದ. ಅದೇ ವೇಳೆ ಉತ್ತರ ವಿಭಾಗ ಠಾಣೆಯೊಂದರಲ್ಲಿ ದಾಖಲಾಗಿದ್ದ ಕಳವು ಪ್ರಕರಣದಲ್ಲಿ ಸುನೀಲ್‌ಕೂಡ ಜೈಲು ಸೇರಿದ್ದ. ಈ ವೇಳೆ ಇಬ್ಬರು ಸ್ನೇಹಿತರಾಗಿದ್ದಾರೆ. ನಂತರ ಜಾಮೀನು ಪಡೆದು ಹೊರಬಂದ ಆರೋಪಿಗಳು ಪರಸ್ಪರ ಭೇಟಿಯಾಗಿದ್ದರು. ಈ ವೇಳೆ ಸುನೀಲ್‌, ತನ್ನೊಂದಿಗೆ ಸೇರಿಕೊಂಡರೆ ಹೊಸ ಜೀವನ ಆರಂಭಿಸಬಹುದು ಎಂದು  ದಿಲೀಪ್‌ಗೆ ಭರವಸೆ ನೀಡಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಆಟೋ ಚಾಲಕನಾಗಿದ್ದ ಸುನೀಲ್‌, ಒಮ್ಮೆ ಜೆ.ಪಿ.ನಗರದಿಂದ ಕುಮಾರಸ್ವಾಮಿ ಲೇಔಟ್‌ಗೆ ಪ್ರಯಾಣಿಕರೊಬ್ಬರನ್ನು  ದೂರುದಾರ ಸಂದೀಪ್‌ ಲಾಲ್‌ ಮನೆ ಮುಂದೆ ಡ್ರಾಪ್‌ ನೀಡಿದ್ದ. ಆಗ ಸಂದೀಪ್‌ ಲಾಲ್‌, ತಂದೆ ಮನಮೋಹನ್‌ ಲಾಲ್‌ಗೆ ವ್ಯಕ್ತಿಯೊಬ್ಬ ಕಂತೆ-ಕಂತೆ ನೋಟುಗಳನ್ನು ಕೊಡುತ್ತಿದ್ದನ್ನು ಸುನೀಲ್‌ ನೋಡಿದ್ದ. ನಂತರ ದೀಲಿಪ್‌ ಕರೆಸಿಕೊಂಡಿದ್ದ ಸುನೀಲ್‌, ಇಬ್ಬರು ಆಟೋದಲ್ಲಿ ಸಂದೀಪ್‌ ಲಾಲ್‌ ಮನೆ ಬಳಿ ಬಂದು, ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದರು.

Advertisement

ಮಾ.28ರಂದು ಸಂದೀಪ್‌ ಲಾಲ್‌ ಚೆನ್ನೈಗೆ ಹೋಗಿದ್ದರು. ಹೀಗಾಗಿ ತಂದೆ ಮನಮೋಹನ್‌ ಲಾಲ್‌, ಮನೆಗೆ ಬೀಗ ಹಾಕಿಕೊಂಡು ಕೂಗಳತೆ ದೂರಲ್ಲಿರುವ ತಮ್ಮ ಮನೆಗೆ ಹೋಗಿದ್ದಾರೆ. ಅದನ್ನು ಅರಿತ ಆರೋಪಿಗಳು ಅದೇ ದಿನ ರಾತ್ರಿ ಕಬ್ಬಿಣದ ರಾಡ್‌ನಿಂದ ಬೀಗ ಮುರಿದು ಒಳ ನುಗ್ಗಿದ್ದಾರೆ.

2 ಕೋಟಿ ಕಂಡು ಬೆರಗಾದ ಆರೋಪಿಗಳು! :

ಮನೆಯೊಳಗೆ ಸುಮಾರು ಒಂದು ಗಂಟೆಗಳ ಕಾಲ ಶೋಧಿಸಿದರೂ ಆರೋಪಿಗಳಿಗೆ ನಗದು ಸಿಕ್ಕಿರಲಿಲ್ಲ. 190 ಗ್ರಾಂ ಚಿನ್ನಾಭರಣ ಸಿಕ್ಕಿತ್ತು. ಕೆಲ ಹೊತ್ತಿನ ಬಳಿಕ ಮನೆಯ ಬೀರುವಿನ ಪಕ್ಕದ ಸಜ್ಜೆ ಮೇಲೆ ಮೂಟೆಗಳನ್ನು ಗಮನಿಸಿದ್ದಾರೆ. ಅದನ್ನು ತೆರೆದು ನೋಡಿದಾಗ  2 ಕೋಟಿ ರೂ. ನಗದು ಸಿಕ್ಕಿದ್ದು, ಇಬ್ಬರು ಬೆರಗಾಗಿದ್ದಾರೆ. ಒಂದೆರಡು ಲಕ್ಷ ರೂ. ಸಿಗಬಹುದೆಂದು ಊಹಿಸಿದ್ದ ಆರೋಪಿಗಳಿಗೆ ಏಕಾಏಕಿ ಎರಡು ಕೋಟಿ ರೂ. ಸಿಕ್ಕಿದ ಕೂಡಲೇ ಮೂಟೆ ಕಟ್ಟಿಕೊಂಡು, ಮನೆಯಲ್ಲಿದ್ದ ವಿದೇಶಿ ಬ್ರ್ಯಾಂಡ್‌ನ‌ ಮದ್ಯದ ಬಾಟಲಿ ಕಂಡು ಅದನ್ನು ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಮನೆಯಲ್ಲಿ ಹಂಚಿಕೆ, ಗೋವಾ ಪ್ರವಾಸ :

ಸುಬ್ರಹ್ಮಣ್ಯಪುರದಲ್ಲಿರುವ ಸುನೀಲ್‌ ಮನೆಗೆ ಹೋದ ಇಬ್ಬರು, ಏಣಿಕೆ ಮಾಡದೆ ಕಂತೆ-ಕಂತೆ ಹಣವನ್ನೇ ಸಮಾನಾಗಿ ಹಣ ಹಂಚಿಕೊಂಡಿದ್ದಾರೆ. ದಿಲೀಪ್‌ ತನ್ನ ಕೆಬ್ಬೆಹಳ್ಳಿಗೆ ಹೋಗಿದ್ದು, ಮನೆಯವರಿಗೆ ಚಿನ್ನಾಭರಣ ಕೊಡಿಸಿದ್ದ. ಬಳಿಕ ಇಬ್ಬರು ತಾವು ಮಾಡಿಕೊಂಡಿದ್ದ ಸಾಲ ತೀರಿಸಿಕೊಂಡಿದ್ದಾರೆ. ಗೋವಾಗೆ ಎರಡು ದಿನಗಳ ಕಾಲ ಪ್ರವಾಸಕ್ಕೆ ಹೋಗಿದ್ದು, ಎಲ್ಲ ರೀತಿಯ ಮೋಜು-ಮಸ್ತಿ ಮಾಡಿಕೊಂಡು ಜೀವನ ಕಳೆದಿದ್ದಾರೆ. ಸ್ವಲ್ಪ ಹಣವನ್ನು ವಕೀಲರ ಶುಲ್ಕ ಪಾವತಿಸಿದ್ದಾರೆ. ಅನಂತರ ಮಲೆಮಹದೇಶ್ವರ ಬೆಟ್ಟ ಹಾಗೂ ಇತರೆ ದೇವಾಲಯಗಳಿಗೆ ಹರಕೆ ಎಂದು ಒಂದಿಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಬೆರಳಚ್ಚು ಕೊಟ್ಟ ಸುಳಿವು! :

ಕಳ್ಳತನ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಕೈಗೊಂಡ ಕುಮಾರಸ್ವಾಮಿ ಲೇಔಟ್‌ ಠಾಣಾಧಿಕಾರಿ ಶಿವಕುಮಾರ್‌ ನೇತೃತ್ವದ ತಂಡಕ್ಕೆ ಬೆರಳಚ್ಚು ಪತ್ತೆಯಾಗಿತ್ತು. ನಂತರ ಬೇರೆ ಠಾಣೆಗಳಲ್ಲಿದ್ದ ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಪರಿಶೀಲಿಸಿದಾಗ ಸುನೀಲ್‌ ಪತ್ತೆಯಾಗಿದ್ದ. ನಂತರ ಆತನನ್ನು ಬಂಧಿಸಿ, ವಿಚಾರಣೆ ನಡೆಸಿ ದಿಲೀಪ್‌ನನ್ನು ಬಂಧಿಸಿ, ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಇಡಿ,ಐಟಿಗೆ ಮಾಹಿತಿ :

ರಿಯಲ್‌ ಎಸ್ಟೇಟ್‌ ಹಾಗೂ ವಿನ್ಯಾಸಕರರಾಗಿರುವ ಸಂದೀಪ್‌ ಲಾಲ್‌, ಕೋಟ್ಯಂತರ ರೂ. ಅನ್ನು ಚೀಲದಲ್ಲಿ ತುಂಬಿ ಇಡುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೊದಲು ದೂರಿನಲ್ಲಿ ಕೋಟ್ಯಂತರ ರೂ. ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕೇವಲ ಒಂದೆರಡು ಲಕ್ಷರೂ. ಎಂದಿದ್ದರು. ಇದೀಗ ಕೋಟ್ಯಂತರ ರೂ. ಸಿಕ್ಕಿದ್ದರಿಂದ ಹಣದ ಮೂಲದ ಬಗ್ಗೆ ಮಾಹಿತಿ ಕೇಳಿದ್ದಾರೆ. ಮತ್ತೂಂದೆಡೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದು, ಹಣವನ್ನು ಕೋರ್ಟ್‌ ಸುಪರ್ದಿಗೆ ಕೊಡಲಾಗುತ್ತದೆ. ನಂತರ ಐಟಿಯಿಂದ ಪ್ರಮಾಣ ಪತ್ರ ತಂದು ಹಣ ಬಿಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next