ಬೆಂಗಳೂರು: ಅಮೃತಹಳ್ಳಿಯಲ್ಲಿ ಪೊಲೀಸರ ವೇಷ ಧರಿಸಿಕೊಂಡು ಅಪಹರಿಸಿದ್ದ ಗುಜರಿ ವ್ಯಾಪಾ ರಿಯು ತಪ್ಪಿಸಿಕೊಳ್ಳಲು ಮುಂದಾದಾಗ ಬೆನ್ನತ್ತಿ ಹಿಡಿಯಲು ಹೋಗಿ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಯಲಹಂಕ ಠಾಣೆಯ ರೌಡಿ ಮುಜಮಿಲ್ ಅಲಿಯಾಸ್ ಮುಜ್ಜು, ಸೈಯದ್ ಶಿಫಾಸ್ ಹಾಗೂ ಯೂಸುಫ್ ಬಂಧಿತರು.
ಬಾಗಲೂರಿನ ಮೆಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ನಲ್ಲಿ ತನ್ನ ಹವಾ ಸೃಷ್ಟಿಸಲು ರೌಡಿ ಮುಜಾಮಿಲ್ ಹಫ್ತಾ ವಸೂಲಿಗೆ ಮುಂದಾಗಿದ್ದ. ಚಿಂದಿ ಆಯುವುದಕ್ಕೂ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ತನ್ನ ಸಹಚರರಿಗೆ ಹಫ್ತಾ ಕೊಡಲು ನಿರಾಕರಿಸಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಅಪಹರಿಸಲು ಸಂಚು ರೂಪಿಸಿದ್ದ. ಅದರಂತೆ ಮಧ್ಯರಾತ್ರಿ ಕಾರಿನಲ್ಲಿ ಬಂದು ಪೊಲೀಸರೆಂದು ಹೇಳಿ ಕಾರಿನಲ್ಲಿ ಗುಜರಿ ವ್ಯಾಪಾರಿಯನ್ನು ಅಪಹರಿಸಿ ಸ್ವಲ್ಪ ದೂರ ಹೋದಾಗ ಆರೋಪಿಗಳ ಬಗ್ಗೆ ಗುಜುರಿ ವ್ಯಾಪಾರಿಗೆ ಅನುಮಾನ ಮೂಡಿತ್ತು.
ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಗುಜರಿ ವ್ಯಾಪಾರಿ ಓಡುತ್ತಿದ್ದಾಗ ಆತನನ್ನು ಆರೋಪಿಗಳು ಹಿಂಬಾಲಿಸಿದ್ದರು. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಅಸಲಿ ಪೊಲೀಸರು ಗುಜರಿ ವ್ಯಾಪಾರಿಯನ್ನು ಆರೋಪಿಗಳು ಹಿಂಬಾಲಿಸಿಕೊಂಡು ಓಡುತ್ತಿರುವುದನ್ನು ಗಮನಿಸಿದ್ದರು. ಓಡುತ್ತಿದ್ದ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ನಕಲಿ ಪೊಲೀಸರ ಅಸಲಿ ಅಂಗತಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಾಗಿದೆ.
■ ಉದಯವಾಣಿ ಸಮಾಚಾರ