ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಪ್‌ಕಾಮ್ಸ್ ನೆರವಿನಿಂದ ಪ್ರತಿ ವಾರ್ಡ್‌ನಲ್ಲಿ ತರಕಾರಿ ಮಾರಾಟ ಮಾಡಲು ಹಾಗೂ ಪ್ಯಾಕ್‌ಡ್ ಆಹಾರ ಮನೆ ಬಾಗಿಲಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಬುಧವಾರ ಜಿಲ್ಲಾ ಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈಗಾಗಲೇ ತರಕಾರಿ, ಹಾಲು ಹಣ್ಣು, ಮೀನು, ಮಾಂಸ, ದಿನಸಿ ವಸ್ತುಗಳಂತಹ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಜ್ವರ ಹಿನ್ನೆಲೆಯಲ್ಲಿ ಮಾ. 31ರವರೆಗೆ ಮಾತ್ರ ಚಿಕನ್ ಮಾರಾಟ ನಿರ್ಬಂ ಧಿಸಲಾಗಿದೆ. ಶುಕ್ರವಾರದ ಒಳಗಾಗಿ ಹಾಪ್‌ಕಾಮ್ಸ್ ವತಿಯಿಂದ ವಾಹನದ ಮೂಲಕ ಪ್ರತಿ ವಾರ್ಡ್‌ನಲ್ಲಿ ನಿಗದಿತ ದರದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮನೆ ಬಾಗಿಲಿಗೆ ಆಹಾರ ಪೂರೈಕೆ: ಹೊಟೇಲ್ ಗಳನ್ನು ಅವಲಂಬಿಸಿರುವವರನ್ನು ಗಮನದಲ್ಲಿರಿಸಿ ಮನೆ ಬಾಗಿಲಿಗೆ ಸಿದ್ಧ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಐದು ವಾರ್ಡ್‌ಗಳಿಗೆ ಒಬ್ಬರಂತೆ ಗುತ್ತಿಗೆದಾರರನ್ನು ಗುರುತಿಸಿ, ಆಯಾ ವಾರ್ಡ್‌ಗಳಲ್ಲಿ ಬೇಡಿಕೆ ಅನುಸರಿಸಿ ಆಹಾರ ಒದಗಿಸಲು ವ್ಯವಸ್ಥೆ ಮಾಡಬೇಕು. ಕೆಲವು ಸೀಮಿತ ಮೆನು ಸಿದ್ಧಪಡಿಸಿ, ದರವನ್ನು ನಿಗದಿಪಡಿಸಬೇಕು. ಆಹಾರ ವಿತರಿಸುವವರಿಗೆ ಗುರುತಿನ ಚೀಟಿ ನೀಡಲಾಗುವುದು. ಆಹಾರದ ಗುಣಮಟ್ಟವನ್ನು ಮಹಾನಗರ ಪಾಲಿಕೆ ಖಾತ್ರಿಪಡಿಸಬೇಕು. ಇತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಅಗತ್ಯವಿದ್ದರೆ ಈ ವ್ಯವಸ್ಥೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಗಳ ಹತ್ತಿರ ಇರುವ ಹೊಟೇಲ್‌ಗಳನ್ನು ತೆರೆದಿಟ್ಟು, ಆಹಾರ ತಿನಿಸುಗಳನ್ನು ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಲಾಗುವುದು. ಕುವೆಂಪು ರಸ್ತೆಯಲ್ಲಿರುವ ಇಂತಹ ಹೊಟೇಲ್ ಗಳನ್ನು ತೆರೆಯಲು ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾಡಳಿತ ಅನುಮತಿ ಅಗತ್ಯ: ಅಗತ್ಯವಿರುವವರಿಗೆ ಆಹಾರ ಸಾಮಗ್ರಿ, ಅವಶ್ಯಕ ವಸ್ತುಗಳನ್ನು ವಿತರಿಸಲು ಬಯಸುವ ಸರ್ಕಾರೇತರ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಈ ಕುರಿತು ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಅಂತವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು. ಎಂದು ತಿಳಿಸಿದರು.