ಅಲ್ಲಿದ್ದ ಪೋಸ್ಟರ್ ಮೇಲೆ “ಪಾರ್ಟ್ 1′ ಅಂತ ಬರೆಯಲಾಗಿತ್ತು. ಸಾಮಾನ್ಯವಾಗಿ ಚಿತ್ರದ ಸಕ್ಸಸ್ ಬಳಿಕ “ಪಾರ್ಟ್ 2′ ಅನೌನ್ಸ್ ಮಾಡೋದು ವಾಡಿಕೆ. ಆದರೆ, ಆ ಪೋಸ್ಟರ್‌ನಲ್ಲಿ ಇದ್ದ “ಪಾರ್ಟ್ 1′ ಬರಹ, “ಪಾರ್ಟ್ 2′ ಚಿತ್ರವೂ ಬರುತ್ತೆ ಎಂಬ ಸೂಚನೆ ನೀಡಿತ್ತು. ಅದಕ್ಕೆ ಕಾರಣ, ಕ್ಲೈಮ್ಯಾಕ್ಸ್ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಆ ಚಿತ್ರದ ಹೆಸರು “ಅಟೆಂಪ್ಟ್ ಟು ಮರ್ಡರ್’. ಅದನ್ನು ಶಾರ್ಟ್ ಆಗಿ “ಎಟಿಎಂ’ ಎಂದು ಕರೆದುಕೊಳ್ಳುತ್ತೆ ತಂಡ. ಇದು ಹೊಸಬರ ಫಸ್ಟ್ ಅಟೆಂಪ್ಟ್. ಹಾಗಾಗಿ ಎಲ್ಲರಿಗೂ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ. ಅದೇ ಖುಷಿಯಿಂದ ಎಲ್ಲರೂ ಚಿತ್ರದ ಬಗ್ಗೆ ಹೇಳುತ್ತಾ ಹೋದರು.
ನಿರ್ದೇಶಕ ಅಮರ್‌ಗೆ ಇದು ಮೊದಲ ಚಿತ್ರ. ಒಂದಷ್ಟು ಶಾರ್ಟ್ ಫಿಲ್ಮ್ ಮಾಡಿ, ಬೆರಳೆಣಿಕೆ ಸಿನಿಮಾಗಳಿಗೆ ಸಿಜಿ ಕೆಲಸ ಮಾಡುತ್ತ, ಸಂಕಲನ ಮಾಡಿಕೊಂಡಿದ್ದ ಅವರಿಗೆ ಎಲ್ಲೋ ಒಂದು ಕಡೆ ನಿರ್ದೇಶನ ಮಾಡುವ ಆಸೆ ಇತ್ತು. ಅವರ ಆಸೆ ಈಡೇರಿಸಿದ್ದು, ಎಸ್. ನಾರಾಯಣ ಮತ್ತು ಎಸ್.ವಿ. ಕೃಷ್ಣಮೂರ್ತಿ ಸಹೋದರರು. ಅಮರ್ ಹಾಗೂ ಅವರ ಗೆಳೆಯ ಶ್ರೀಹರಿ ಕಥೆ ಹೇಳಿದಾಗ, ನಿರ್ಮಾಪಕರಿಗೆ ಸಿನಿಮಾ ಮಾಡುವ ಆಸೆಯಾಗಿ, ಈಗ ಚಿತ್ರೀಕರಣ ಮುಗಿಸಿ,
ರಿಲೀಸ್‌ಗೆ ರೆಡಿಯಾಗಿದ್ದಾರೆ.
ಅಮರ್ ಹೇಳುವಂತೆ, ಇದೊಂದು ನೈಜ ಘಟನೆಯ ಎಳೆ ಇಟ್ಟುಕೊಂಡು ಮಾಡಿರುವ ಚಿತ್ರವಂತೆ. ಇಲ್ಲಿ ಮರ್ಡರ್ ಅಟೆಂಪ್ಟ್ ಆಗುತ್ತೆ, “ಯಾರೂ ಸಾಯಲ್ಲ. ಎಲ್ಲೂ ರಕ್ತ ಚೆಲ್ಲುವುದಾಗಲಿ, ಬುಲೆಟ್ ಸೌಂಡ್ ಆಗಲಿ ಇಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಪ್ರೇಮಕಥೆಯ ಎಳೆಯೂ ಸೇರಿಕೊಂಡಿದೆ. ಹಾಗಂತ, ಇದು ಯಾವ ಸಿನಿಮಾದ ಸ್ಫೂರ್ತಿಯೂ ಅಲ್ಲ. ಮಹಿಳೆ ಮೇಲೆ ಮರ್ಡರ್ ಅಟೆಂಪ್ಟ್ ನಡೆಯುತ್ತೆ, ಆಮೇಲೆ ಏನೆಲ್ಲಾ ನಡೆಯುತ್ತೆ ಎಂಬುದರ ಮೇಲೆ ಕಥೆ ಸಾಗಲಿದೆ. ಬೆಂಗಳೂರು, ಮೈಸೂರು, ಹೆಸರಘಟ್ಟ, ಬನ್ನೇರುಘಟ್ಟ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ’ ಅಂತ ವಿವರ ಕೊಟ್ಟರು ಅಮರ್.
“ಲಕ್ಷ್ಮೀಬಾರಮ್ಮ’ ಹಾಗೂ “ಗೃಹಲಕ್ಷ್ಮೀ’ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಚಂದು ಈ ಚಿತ್ರದ ನಾಯಕ. ಅವರಿಗೆ ಇದು ಮೊದಲ ಚಿತ್ರ. “ನಾನು ಅವಕಾಶಕ್ಕಾಗಿ ಎರಡು ವರ್ಷಗಳಿಂದಲೂ ಬಾಗಿಲು ತಟ್ಟುತ್ತಲೇ ಇದ್ದೆ. ಕಿರುತೆರೆಯಲ್ಲಿ ಒಳ್ಳೇ ಅವಕಾಶ ಸಿಕ್ಕಿತು. ಈಗ ಹೀರೋ ಆಗುವ ಅವಕಾಶವೂ ಒದಗಿದೆ. ಒಂದು ಅಟೆಂಪ್ಟ್ ಟು ಮರ್ಡರ್ ವಿಷಯವನ್ನು ಹೀಗೂ ಹೇಳಬಹುದಾ ಎಂಬ ಅಚ್ಚರಿ ಆಯ್ತು. ಇಲ್ಲಿ ಲವ್ ಕೂಡ ಇದೆ. ಸಸ್ಪೆನ್ಸ್, ಥ್ರಿಲ್ಲರ್‌ನಲ್ಲೆ ಚಿತ್ರ ಸಾಗಲಿದೆ. ಹೊಸಬರೇ ಸೇರಿ ಮಾಡಿರುವ ಚಿತ್ರವಿದು ನಿಮ್ಮೆಲ್ಲರ ಸಹಕಾರ ಇರಲಿ ಅಂದರು ಚಂದು.
ಇಲ್ಲಿ ಇಬ್ಬರು ನಾಯಕಿಯರಿದ್ದಾರೆ. ಶೋಭಿತಾ ಹಾಗೂ ಹೇಮಲತಾ. ಈ ಪೈಕಿ ಶೋಭಿತಾಗೆ ಇದು ಎರಡನೇ ಸಿನಿಮಾ. ಅವರಿಗೆ ಇಲ್ಲಿ ಐಟಿ ಕಂಪೆನಿಯ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಎರಡು ವರ್ಷ ಗ್ಯಾಪ್ ಬಳಿಕ ಸಿಕ್ಕ ಸಿನಿಮಾ ಕಥೆ, ಪಾತ್ರ ಚೆನ್ನಾಗಿದೆ. ಹೊಸತಂಡ ಅಂತ ಅನಿಸಿಲ್ಲ. ಇದೊಂದು ಹೊಸಬಗೆಯ ಚಿತ್ರ’ ಅಂದರು ಶೋಭಿತಾ.
ಹೇಮಲತಾಗೂ ಇದು ಮೊದಲ ಚಿತ್ರವಂತೆ. ಸಾಕಷ್ಟು ಕಥೆ ಬಂದರೂ, ಒಪ್ಪದೆ, ಈ ಕಥೆ ಒಪ್ಪಿಕೊಂಡರಂತೆ, ಕಾರಣ, ನಿರ್ದೇಶಕರು ಹೆಣೆದಿರುವ ಕಥೆಯಂತೆ. ಅವರು ತೆರೆಯ ಮೇಲೆ ಅಷ್ಟೊಂದು ಚೆನ್ನಾಗಿ ಕಾಣೋದನ್ನು ಕಂಡು ಅವರಿಗೇ ಅಚ್ಚರಿಯಾಗಿದೆಯಂತೆ. ಅಂದಹಾಗೆ, ಅವರಿಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ.
ಇನ್ನು, ವಿನಯ್ ಎಂಬ ಮತ್ತೂಬ್ಬ ಯುವ ನಟ ಕೂಡ ಇಲ್ಲಿ ನಟಿಸಿದ್ದಾರೆ. ಎಸ್.ಕೆ.ರಾವ್ ಕ್ಯಾಮೆರಾ ಹಿಡಿದರೆ, ರವಿದೇವ್ ಹಾಗೂ ಜೀತ್ ದೇವ್ ಸಂಗೀತ ನೀಡಿದ್ದಾರೆ.