Advertisement

Aroma lamp: ಒತ್ತಡ ನಿವಾರಿಸುವ ಸುವಾಸಿತ ದೀಪ

02:47 PM Mar 10, 2024 | Team Udayavani |

ಕವಿದ ಕತ್ತಲ ನಡುವೆ ಬೆಳಕೊಂದು ಪ್ರಜ್ವಲಿಸುತಿಹುದು, ಬಳಿಹೋಗಲು ಭಯವಿರಲು, ಕತ್ತಲೆಯು ಕದಲಿ ಹಿಂತಿರುಗುತಿಹುದು.  ನಮ್ಮ ಬದುಕಿನ ಬಹಳಷ್ಟು ಕ್ಷಣಗಳು ನಮಗರಿವಿಲ್ಲದೆಯೇ ಕಳೆದುಹೋಗುತ್ತಿದ್ದರೂ ಸಾಗುವ ಹಾದಿಯಲ್ಲಿನ ಚಿಂತನೆಗಳ ಕಿಡಿ ಮತ್ತೆ ಹೊಸ ಲೋಕವನ್ನು ಕಣ್ಣ ಮುಂದೆ ತೆರೆದಿಡುತ್ತದೆ. ಭಾರತದಲ್ಲಿ ಬೆಳಕನ್ನು ಪೂಜಿಸುವ ಸಂಸ್ಕೃತಿ ಇದೆ.

Advertisement

ಬೆಳಕಿನ ಮೂಲವನ್ನು ಹುಡುಕಿ ಹೋಗುತ್ತಿರಲು ಕತ್ತಲಾದರೆ, ಎಲ್ಲಿಯ ಹುಡುಕಾಟ ಎನ್ನುವ ವಿಚಾರ ಮನಸ್ಸಿಗೆ ತಳಮಳ ಉಂಟುಮಾಡಬಹುದು. ಅಂದರೆ ಬೆಳಕು ಕೇಂದ್ರೀಕೃತ ಬಿಂದು. ಅದೇ ಬೆಳಕಿನಲ್ಲಿ ದೇಹವನ್ನು ನಿರ್ವಹಿಸುವ ಆರೋಗ್ಯವರ್ಧಕ ಮೇಣದಬತ್ತಿಯ ಪಾತ್ರವೂ ವಿಶೇಷವಾದುದು.

ಅದೊಂದು ಕಾಲಘಟ್ಟದಲ್ಲಿ ಬಿದಿರಿನ ಬೊಂಬುಗಳನ್ನು ಉರಿಸಿ ಕತ್ತಲೆಯನ್ನು ನಿವಾರಿಸಿಕೊಳ್ಳುತ್ತಿದ್ದ ದಿನಗಳಿದ್ದವು. ಕಾಲಾನಂತರ ದೀಪಗಳು ಬದುಕಿನ ಸಮೀಪಕ್ಕೆ ಬಂದು, ಒಂದಷ್ಟು ಕಾಲ ಆಳಿ, ಅನಂತರ ಹೊಸತನಕ್ಕೆ ಬಾಗಿಲು ತೆರೆದಿಟ್ಟವು. ಈಗ ಝಗಮಗಿಸುವ ಬೆಳಕಿನ ಕಿರಣಗಳು ಜನರಿಗೆ ದಾರಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ಬೆಳಕಿನ ಸುತ್ತ ಸುತ್ತಿದಂತೆ ಮನಸ್ಸಿಗೆ ಬಹಳ ಹತ್ತಿರವಾಗುವುದು ಹಣತೆ ಹಾಗೂ  ಮೇಣದಬತ್ತಿ. ಹಣತೆ ಬೆಳಕಿನ ರಾಯಭಾರಿಯಾದರೆ ಮೇಣದಬತ್ತಿ ಬೆಳಕಿನ ರೂವಾರಿ. ಮೇಣದಬತ್ತಿ ಒಂದಷ್ಟು ಹಿನ್ನೆಲೆಗಳನ್ನು ಹೊತ್ತು ಬಂದ ಬೆಳಕಿನ ಬಿಂಬ. ಅಂತಹ ಮೇಣದಬತ್ತಿಗಳನ್ನು ಬೆಳಕಿನ ಮೂಲವಾಗಿ ಶತಮಾನಗಳಿಂದಲೇ ಬಳಸಲಾಗುತ್ತಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಮೇಣದಬತ್ತಿಗಳು ಜನರ ಮನೋ ವಿಶ್ರಾಂತಿ ಮತ್ತು ಕ್ಷೇಮದ ಕಾರಣಕ್ಕಾಗಿ  ಬಹಳ ಪ್ರಚಲಿತ ಉತ್ಪನ್ನವಾಗಿ ಬಳಕೆಯಲ್ಲಿದೆ. ಮೇಣದಬತ್ತಿಗಳ ಚಿಕಿತ್ಸಕ ಮತ್ತು ವೈದ್ಯಕೀಯ  ಪ್ರಯೋಜನಗಳಿಗಾಗಿ ಮೇಣದಬತ್ತಿಗಳ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಕಂಡುಬರುತ್ತಿದೆ.

Advertisement

ಬಹುಪಯೋಗಿ ಮೇಣದ ಬತ್ತಿ

ಕತ್ತಲಿನಲ್ಲಿ ಬೆಳಕಿನ ಮೂಲವಾಗಿ ಎಷ್ಟು ಪ್ರಸಿದ್ಧವೋ, ಅದೇ ರೀತಿ ಮನಃಶಾಂತಿ ಹಾಗೂ ಒತ್ತಡ ನಿವಾರಕವಾಗಿ ಈ ಮೇಣದಬತ್ತಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಮನೆಯ ಅಂದ ಹೆಚ್ಚಿಸುವಲ್ಲಿ ಹಾಗೂ ಕಲಾತ್ಮಕ ಶೈಲಿಯಲ್ಲಿ ಮನೆಬಳಕೆಯ ಉತ್ಪನ್ನಗಳಾಗಿ ಮೇಣದಬತ್ತಿಗಳನ್ನು ಬಳಸಲಾಗುತ್ತದೆ. ಮನೆಯ ವಾತಾವರಣ ಸುಧಾರಿಸುವ ಸಲುವಾಗಿ ಮತ್ತು ಅಲಂಕಾರದಲ್ಲಿ ಮೇಣದಬತ್ತಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಆರೋಗ್ಯವರ್ಧಕ ಗುಣಗಳ ಪರಿಮಳಯುಕ್ತ ಮೇಣದಬತ್ತಿಗಳು ಪ್ರಸನ್ನ ಸುವಾಸನೆಯಿಂದ ಹಿಡಿದು ಗಾಳಿಯ ಗುಣಮಟ್ಟವನ್ನು ಸುಧಾರಿಸುವಂತಹ ಸಾಮರ್ಥ್ಯ ಹೊಂದಿವೆ. ಆಧುನಿಕ ಯುಗದ ಆಗುಹೋಗುಗಳನ್ನು ಗಮನಿಸುವಾಗ ಒತ್ತಡದ ಬದುಕಿನ ಜಂಜಾಟ ಕಾಣಸಿಗುವುದು ಸಾಮಾನ್ಯ. ಅಂತಹ ಒತ್ತಡ ಕಡಿಮೆ ಮಾಡುವುದರಲ್ಲಿ  ಮೇಣದಬತ್ತಿಗಳ ಪಾತ್ರ ಬಹಳ ದೊಡ್ಡದು.

ನಿದ್ರಾಹೀನತೆಗೆ ರಾಮಬಾಣವಾಗಿ ಕಾರ್ಯನಿರ್ವಹಿಸಿ, ನೆಮ್ಮದಿಯ ನಿದ್ರೆಗೆ ನೆರವಾಗುತ್ತದೆ. ಕೆಲವೊಂದು ಮೇಣದ ಬತ್ತಿಯಲ್ಲಿ ಆಯುರ್ವೇದದ ಗುಣಗಳಿರುತ್ತವೆ. ಅವುಗಳು ಮನಸ್ಸನ್ನು ನಿರಾಳಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಸುವಾಸನೆಯು ಮನಸ್ಸಿನ ಉತ್ಸಾಹವನ್ನು ಹೆಚ್ಚಿಸುತ್ತದೆ.

ಉಡುಗೊರೆಗೂ ಬಳಕೆ

ನೈಸರ್ಗಿಕ ಮತ್ತು ಪರಿಸರ ಸ್ನೇಹಿಯಾಗಿರುವ ಈ ಉತ್ಪನ್ನಗಳು ಅಲಂಕಾರಿಕ ಮತ್ತು ಉಡುಗೊರೆಯಾಗಿ ಮೇಣದಬತ್ತಿಗಳ ಮಾರುಕಟ್ಟೆಯನ್ನು ವೃದ್ಧಿಸುವತ್ತ ಹೆಜ್ಜೆ ಹಾಕುತ್ತಿದೆ.  ಮೇಣದಬತ್ತಿಗಳ ಉತ್ಪಾದನೆಯಲ್ಲಿ, ತಯಾರಿಕೆಯ ಸಂದರ್ಭದಲ್ಲಿ  ವಿಶೇಷ ರೀತಿಯಲ್ಲಿ ಪ್ಯಾಕಿಂಗ್‌ ಹಾಗು ವಿನ್ಯಾಸಗಳ ಮೂಲಕ ಜನರ ಮನಗೆಲ್ಲುವ  ಪ್ರಯತ್ನ ಕಂಡುಬರುತ್ತದೆ.

ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸಲು ಮೇಣದಬತ್ತಿಯ ರೂಪದಲ್ಲಿ ಅರೋಮಾಥೆರಪಿ ಅಥವಾ ಸಸ್ಯಜನ್ಯ ಸಾರಭೂತ ತೈಲಗಳು ಮತ್ತು ಇತರ ಸಸ್ಯದ ಸಾರಗಳನ್ನು ಬಳಸಲಾಗುತ್ತದೆ. ಲ್ಯಾವೆಂಡರ್‌, ಯೂಕಲಿಪ್ಟಸ್‌, ಕ್ಯಾಮೊಮೈಲ್‌ ಮತ್ತು ಶ್ರೀಗಂಧದಂತಹ ಸೌಮ್ಯ ರೀತಿಯ ಪರಿಮಳಗಳೊಂದಿಗೆ ಮೇಣದಬತ್ತಿಗಳು  ಸುವಾಸನೆಯಿಂದ ಕೂಡಿರುತ್ತವೆ, ಮನಸ್ಸು ತೇಜಸ್ಸಿನಿಂದ ಕೂಡಿರುವಂತಹ ಗುಣಗಳಿಗಾಗಿ ಹೆಚ್ಚು ಮೆಚ್ಚುಗೆ ಪಡೆದಿವೆ.

ಕೆಲವು ಮೇಣದಬತ್ತಿಗಳ ಹರಳುಗಳು ಅಥವಾ ಚಿಕಿತ್ಸಕ ಗುಣಲಕ್ಷಣಗಳನ್ನು ಹೊಂದಿರುವ ಇತರ ನೈಸರ್ಗಿಕ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಇದಕ್ಕೆ ಪುಷ್ಟಿ ಎನ್ನುವಂತೆ ಕೆಲವೆಡೆ ಬಣ್ಣ ಬಣ್ಣ ದ ಮೇಣದಬತ್ತಿ ತಯಾರಿಸಿ ಆ ಮೂಲಕ ಹೊಸ ಅನುಭೂತಿ ನೀಡುವ ಪ್ರಯತ್ನಗಳನ್ನೂ ನಡೆಸಲಾಗುತ್ತದೆ.

ಚಂದನ್‌ ನಂದರಬೆಟ್ಟು

ಮಡಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next