Advertisement

ಆರೈಕೆದಾರರ ಯೋಗಕ್ಷೇಮ ಯಾರು ನೋಡಿಕೊಳ್ಳುತ್ತಾರೆ?

04:01 PM Jul 18, 2021 | Team Udayavani |

ಪ್ರತೀ ವರ್ಷವೂ ಎಪ್ರಿಲ್‌ 2ರಂದು ಆಟಿಸಂ ಅರಿವು ದಿನವನ್ನು ಆಚರಿ ಸಲಾಗುತ್ತದೆ. ಆಟಿಸಂ ಪೀಡಿತ ಮಕ್ಕಳ ಬಗ್ಗೆ ಅರಿವು, ಅವರ ಸಾಮಾಜಿಕ ಸ್ವೀಕೃತಿಗೆ ವಿವಿಧ ಕಾರ್ಯಕ್ರಮಗಳು, ಅಭಿಯಾನಗಳು, ಶಿಬಿರಗಳನ್ನು ಆಯೋಜಿ ಸಲಾಗುತ್ತದೆ. ಆಟಿಸಂ ಪೀಡಿತರು ಸಮಾಜದಲ್ಲಿ ಎಲ್ಲರಂತೆ ಬದುಕುವಂತಹ ಸನ್ನಿವೇಶವನ್ನು ಸೃಷ್ಟಿಸುವುದಕ್ಕಾಗಿ ಈ ದಿನವನ್ನು ಉಪಯೋಗಿಸಲಾಗುತ್ತದೆ. ಇದು ಇಂತಹ ಮಕ್ಕಳ ಲಾಲನೆ ಪಾಲನೆಯಲ್ಲಿ ಒಳಗೊಳ್ಳುವ ಜನರತ್ತ ನಾವು ಗಮನ ಹರಿಸುವಂತೆ ಮಾಡುತ್ತದೆ, ಇಂತಹ ಮಕ್ಕಳ ಹೆತ್ತವರು ಆಟಿಸಂಪೀಡಿತ ಮಗುವನ್ನು ಹೊಂದಿರುವುದರ ಬಗ್ಗೆ ಸಮಾಜದಲ್ಲಿ ಎದುರಿಸುವ ಪರಿಸ್ಥಿತಿಯ ಬಗ್ಗೆ, ಅವರ ಮಾನಸಿಕ ಆರೋಗ್ಯ, ದೈನಿಕ ಬದುಕಿನ ಬಗ್ಗೆ ಅವಲೋಕಿಸುವಂತೆ ಮಾಡುತ್ತದೆ.

Advertisement

ಭಾರತದಲ್ಲಿ 2ರಿಂದ 9 ವರ್ಷ ವಯೋಮಾನದ ಪ್ರತೀ 65 ಮಕ್ಕಳಲ್ಲಿ ಒಂದು ಮಗು ಆಟಿಸಂ ಹೊಂದಿರುತ್ತದೆ. ಇದೊಂದು ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಪರಿಣಾಮಕಾರಿ ಸಂವಹನಕ್ಕೆ ಅಡೆತಡೆಗಳನ್ನು ಒಡ್ಡುತ್ತದೆ, ಆಲೋಚನೆ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಮಕ್ಕಳಲ್ಲಿ ಎರಡು ವರ್ಷಗಳಷ್ಟು ಸಣ್ಣ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ ಪತ್ತೆಹಚ್ಚಬಹುದಾಗಿದೆ. ಅದು ಪತ್ತೆಯಾದ ಬಳಿಕ ವಿವಿಧ ಬಗೆಯ ತೆರಪಿಗಳು, ಚಿಕಿತ್ಸೆಗಳು ಮತ್ತು ಇತರ ವೃತ್ತಿಪರ ಒಳಗೊಳ್ಳುವಿಕೆಯ ಮೂಲಕ ಆಟಿಸಂ ಹೊಂದಿರುವ ಮಗು ಸ್ವತಂತ್ರ ಮತ್ತು ಕಾರ್ಯನಿರ್ವಹಣೆ ಮಾಡಬಲ್ಲ ವಯಸ್ಕನಾಗಿ ಸಮಾಜವನ್ನು ಪ್ರವೇಶಿಸುವುದನ್ನು ಸಾಧ್ಯ ಮಾಡಲಾಗುತ್ತದೆ. ಜಾಗತಿಕವಾಗಿ ಆಟಿಸಂ ಬಗ್ಗೆ ವಿವಿಧ ನಮೂನೆಯ ಮೂಢನಂಬಿಕೆಗಳು ಚಾಲ್ತಿಯಲ್ಲಿದ್ದು, ಇದು ಆಟಿಸಂ ಹೊಂದಿರುವ ಮಕ್ಕಳು ಮತ್ತು ಅವರ ಹೆತ್ತವರನ್ನು ನೋವು, ಚಿಂತೆಗೀಡು ಮಾಡುತ್ತದೆ.

ಆಟಿಸಂ ಹೊಂದಿರುವ ಮಕ್ಕಳ ಹೆತ್ತವರ ಪ್ರಯತ್ನಗಳು ಅಪೂರ್ವವಾದವುಗಳು, ಈ ಬಗ್ಗೆ ಎರಡು ಮಾತಿಲ್ಲ. ಅವರ ಬದುಕು ಹೆಚ್ಚುಕಡಿಮೆ ಅವರ ಆಟಿಸಂ ಹೊಂದಿರುವ ಮಕ್ಕಳ ಸುತ್ತಲೇ ಸುತ್ತುತ್ತಿರುತ್ತದೆ. ಅವರ ದೈನಿಕ ಜೀವನವು ಆಟಿಸಂ ಪೀಡಿತ ಮಗುವಿನ ಚಿಕಿತ್ಸೆಯ ವೇಳಾಪಟ್ಟಿ, ಮನೆಯಲ್ಲಿ ಮಾಡಬೇಕಾದ ಚಟುವಟಿಕೆಗಳು, ಅವರು ಪೂರ್ಣ ಸ್ವಾವಲಂಬನೆ ಗಳಿಸುವವರೆಗೆ

ಅವರ ದೈನಿಕ ಚಟುವಟಿಕೆಗಳಾದ ಸ್ನಾನ ಮಾಡುವುದು, ಊಟ ಮಾಡುವುದು, ಬಟ್ಟೆ ಬರೆ ಧರಿಸುವುದು ಮತ್ತಿತರ ಚಟುವಟಿಕೆಗಳಲ್ಲಿ ಸಹಾಯ ಮಾಡುವುದು, ಈ ನಡುವೆ ಸ್ವಂತ ಉದ್ಯೋಗ ಅಥವಾ ಮನೆಗೆಲಸಗಳನ್ನು ನಿಭಾಯಿಸುವುದು, ಇನ್ನೊಂದು ಮಗು ಇದ್ದರೆ ಅದರ ಲಾಲನೆ ಪಾಲನೆ – ಹೀಗೆ ನಿಬಿಡವಾಗಿರುತ್ತದೆ.

ಆರೈಕೆದಾರರ ಯೋಗಕ್ಷೇಮ ಯಾರು ನೋಡಿಕೊಳ್ಳುತ್ತಾರೆ?

Advertisement

ಈ ರೀತಿಯ ತೀವ್ರ ಒತ್ತಡದ ಬದುಕು ಮತ್ತು ಸಾಕಷ್ಟು ಸಮಯವನ್ನು ಬೇಡುವ ದೈನಿಕ ಚಟುವಟಿಕೆಗಳು, ಇತರ ಅಂಶಗಳಾದ ಕಡಿಮೆ ಸಾಮಾಜಿಕ ಬೆಂಬಲ, ಆರ್ಥಿಕ ಹಿನ್ನೆಲೆ, ವಿರಾಮದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಮಯ ಸಿಗದೇ ಇರುವುದು, ಕುಟುಂಬದ ಇತರ ಸದಸ್ಯರು ಮತ್ತು ಗೆಳೆಯ-ಗೆಳತಿಯರ ಜತೆಗೆ ಸಂಪರ್ಕ-ಸಂಬಂಧವನ್ನು ಚೆನ್ನಾಗಿರಿಸಿಕೊಳ್ಳಲು ಸಮಯ ಸಾಲದೆ ಇರುವುದು ಹೆತ್ತವರ ಒಟ್ಟಾರೆ ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ.

ಆಟಿಸಂ ಪೀಡಿತ ಮಕ್ಕಳ ಬಹುತೇಕ ತಾಯಂದಿರು ಖನ್ನತೆ, ನಿದ್ರಾಹೀನತೆ, ಉದ್ವಿಗ್ನತೆ ಹಾಗೂ ಮಗುವಿನ ಆರೋಗ್ಯ ಸಮಸ್ಯೆಗೆ ತನ್ನನ್ನು ತಾನು ಹಳಿದುಕೊಳ್ಳುವಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. 2015ರಲ್ಲಿ ನಿಶಿ ತ್ರಿಪಾಠಿ ಎಂಬವರು ನಡೆಸಿದ ಅಧ್ಯಯನದ ಪ್ರಕಾರ, ತಾಯಂದಿರ ಖನ್ನತೆಯು ಅವರ ಆಟಿಸಂಪೀಡಿತ ಮಗುವಿನ ಅನಾರೋಗ್ಯದ ತೀವ್ರತೆಯ ಜತೆಗೆ ಸಂಬಂಧ ಹೊಂದಿರುತ್ತದೆ. ಆಟಿಸಂ ಉಂಟಾಗುವುದಕ್ಕೆ ವಂಶವಾಹಿ ಕಾರಣಗಳು ಒಂದು ಅಂಶವಾಗಿದ್ದು, ನಿರ್ದಿಷ್ಟ ಕಾರಣಗಳು ಇನ್ನೂ ತಿಳಿಯದೆ ಇರುವುದರಿಂದ ಸಾಮಾಜಿಕ ನಂಬಿಕೆಗಳು ಮಗುವಿನ ಅನಾರೋಗ್ಯಕ್ಕೆ ತಾಯಿಯನ್ನೇ ಹೆಚ್ಚು ಹೊಣೆಗಾರೆಯನ್ನಾಗಿ ಕಾಣುತ್ತವೆ, ಇದಕ್ಕೆ ಹೋಲಿಸಿದರೆ ತಂದೆಯ ಭಾರ ಕಡಿಮೆಯಾಗಿರುತ್ತದೆ. ಕಾಲಾನುಕ್ರಮದಲ್ಲಿ ಲಿಂಗ ಆಧಾರಿತ ಧೋರಣೆಗಳು ಕಡಿಮೆಯಾಗುತ್ತಿದ್ದು, ಈಚೆಗಿನ ವರ್ಷಗಳಲ್ಲಿ ತಂದೆಯೂ ಈ ಒತ್ತಡ, ಮಾನಸಿಕ ಹೊರೆಯನ್ನು ಅನುಭವಿಸುವುದು ಹೆಚ್ಚುತ್ತಿದೆ. ಆದರೆ ಇದು ಆರ್ಥಿಕ ಹೊರೆ, ಮಗುವಿನ ಆರೈಕೆಯಲ್ಲಿ ಪಾತ್ರ ಮತ್ತು ಬೆಂಬಲಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. 2018ರಲ್ಲಿ ಇಲ್ಯಾಸ್‌ ಎಂಬವರು ನಡೆಸಿದ ಅಧ್ಯಯನದ ಪ್ರಕಾರ, ಆಟಿಸಂ ಪೀಡಿತ ಮಕ್ಕಳಿರುವ ಕುಟುಂಬಗಳಲ್ಲಿ ಸಹಜ ಆರೋಗ್ಯ ಹೊಂದಿರುವ ಮಕ್ಕಳ ಕುಟುಂಬಗಳಿಗಿಂತ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.

ವಿಶೇಷ ಅಗತ್ಯಗಳುಳ್ಳ ಮಗುವಿನ ಭಾರೀ ಆರೈಕೆ ಮತ್ತು ಲಾಲನೆಪಾಲನೆಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿಯಾಗುವ ಪ್ರಮುಖ ಅಂಶಗಳಲ್ಲಿ ಭಾವನಾತ್ಮಕ ಹತಾಶೆಯೂ ಒಂದಾಗಿದೆ. ಇಂತಹ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳಿಂದಾಗಿ ಹೆತ್ತವರ ಪಾಲ್ಗೊಳ್ಳುವಿಕೆ ಮತ್ತು ಬದುಕಿನ ಇತರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಇಂತಹ ವಿಚಾರಗಳನ್ನು ಸರಿಯಾಗಿ ಗುರುತಿಸಿ ನಿಭಾಯಿಸದೆ ಇದ್ದಾಗ ಅದು ಮಗುವಿನ ಆರೈಕೆಯ ಶೈಲಿ ಮತ್ತು ತಂತ್ರಗಳ ಮೇಲೆ, ಒಟ್ಟಾರೆ ಮಾನಸಿಕ ಆರೋಗ್ಯದ ಮೇಲೆ, ಸಹಿಸಿಕೊಳ್ಳುವ ಮಟ್ಟದ ಮೇಲೆ, ಕೆಲಸದಲ್ಲಿ ಸಂತೃಪ್ತಿಯ ಮೇಲೆ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ನೇತ್ಯಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ.

ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಆಟಿಸಂಪೀಡಿತ ಮಗುವಿನ ಆಕ್ಯುಪೇಶನಲ್‌ ಕಾರ್ಯನಿರ್ವಹಣೆ ಮತ್ತು ಎಎಸ್‌ಡಿ ಸಂತೃಪ್ತಿ ಹಾಗೂ ಮಕ್ಕಳ ಹೆತ್ತವರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿರುತ್ತಾರೆ. ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ರೋಗಿ ಕೇಂದ್ರಿತ ಮತ್ತು ಕುಟುಂಬ ಕೇಂದ್ರಿತ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಾರೆ, ಮಗು ಮತ್ತು ಅದರ ಹೆತ್ತವರ ಅಗತ್ಯಗಳ ಆಧಾರದಲ್ಲಿ ಸೃಷ್ಟಿಸಲಾದ ಗುರಿ ಮತ್ತು ಚಿಕಿತ್ಸೆಗಳ ಆಧಾರದಲ್ಲಿ ಕೆಲಸ ಮಾಡುತ್ತಾರೆ ಮತ್ತು ಆಕ್ಯುಪೇಶನಲ್‌ ನಿರ್ವಹಣೆ ಹಾಗೂ ಸಂತೃಪ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತಾರೆ. ಇದು ಆರೋಗ್ಯಕರ ಹವ್ಯಾಸಗಳು ಮತ್ತು ನಡವಳಿಕೆಗಳನ್ನು ಹಾಗೂ ಕೌಶಲಗಳನ್ನು ರೂಪಿಸುವ ವಿವಿಧ ಬಗೆಯ ಸಮಸ್ಯಾ ಪರಿಹಾರ ತಂತ್ರಗಳು ಮತ್ತು ಪರಿಣಾಮಕಾರಿ ನಿಭಾವಣ ತಂತ್ರಗಳನ್ನು ಒಳಗೊಂಡಿರುತ್ತದೆ. ಇವುಗಳಿಂದಾಗಿ ಮಗುವನ್ನು ಸ್ವ-ಆರೈಕೆಯಲ್ಲಿ ಸ್ವಾವಲಂಬಿಯನ್ನಾಗಿಸುವುದು, ಆ ಅವಧಿಯಲ್ಲಿ ಹೆತ್ತವರು ವಿಶ್ರಾಂತಿಯನ್ನು ಅನುಭವಿಸುವುದಕ್ಕೆ ಸಮಯ ನೀಡುವುದು, ಆ ಮೂಲಕ ಜೀವನದ ವಿವಿಧ ಪಾತ್ರಗಳಲ್ಲಿ ಭಾಗವಹಿಸುವ ಅವಕಾಶ ಒದಗುತ್ತದೆ. ಮಗು ಸ್ವಂತ ಶಕ್ತಿಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಶಕ್ತನಾಗುತ್ತಿರುವಂತೆಯೇ ಹೆತ್ತವರು ಕೂಡ ಉತ್ತಮ ಗುಣಮಟ್ಟದ ಜೀವನ ಮತ್ತು ಪರಿಣಾಮಕಾರಿಯಾದ ಆರೈಕೆಯ ಅಭ್ಯಾಸಗಳ ಜತೆಗೆ ಬದುಕಿನಲ್ಲಿ ಮುನ್ನಡೆಯುತ್ತಿರುತ್ತಾರೆ. ಸಮಯ ನಿರ್ವಹಣೆಯು ಒಂದು ಮೌಲ್ಯಯುತ ಕೌಶಲವಾಗಿದ್ದು, ಔದ್ಯೋಗಿಕ ಸಮತೋಲನ ಅಂದರೆ, ಉದ್ಯೋಗ, ದೈನಿಕ ಚಟುವಟಿಕೆಗಳು, ವಿಶ್ರಾಂತಿ ಮತ್ತು ವಿರಾಮಗಳ ನಡುವೆ ಉತ್ತಮ ಸಮತೋಲನವನ್ನು ಹೊಂದಲು ನೆರವಾಗುತ್ತದೆ. ಉತ್ತಮ ಸಮತೋಲನ ಹೊಂದಿರುವ ಜೀವನವು ಸಂತೃಪ್ತಿ ಮತ್ತು ಆದ್ಯತೆಯ ಕಾರ್ಯಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದನ್ನು ಖಾತರಿಪಡಿಸುತ್ತದೆ.

ಹಸ್ತಿ ದಿವೇಚಾ

ಸ್ನಾತಕೋತ್ತರ ವಿದ್ಯಾರ್ಥಿನಿ, ಆಕ್ಯುಪೇಶನಲ್ಥೆರಪಿ ವಿಭಾಗ

ಕೌಶಿಕ್ಸಾಹು

ಅಸಿಸ್ಟೆಂಟ್ಪ್ರೊಫೆಸರ್‌- ಹಿರಿಯ ಶ್ರೇಣಿ,

ಆಕ್ಯುಪೇಶನಲ್ಥೆರಪಿ ವಿಭಾಗ,

ಎಂಸಿಎಚ್ಪಿ, ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next