Advertisement

ಅರೋಗ್ಯ ಕರ್ನಾಟಕ : ಎಲ್ಲ ಯೋಜನೆ ಒಂದೇ ಸೂರಿನಡಿ

12:28 AM Jun 12, 2018 | Karthik A |

ಮಂಗಳೂರು/ಉಡುಪಿ: ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಕರ್ನಾಟಕ ಯೋಜನೆಗೆ ದ. ಕನ್ನಡ ಜಿಲ್ಲೆಯಲ್ಲಿ ನೋಂದಣಿ ನಡೆಯುತ್ತಿದೆ. ಮಾರ್ಚ್‌ ಅಂತ್ಯದಿಂದ ಬುಧವಾರದ ವರೆಗೆ ಒಟ್ಟು  10,007 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 7,871 ಮಂದಿ ಬಿಪಿಎಲ್‌, 2,136 ಮಂದಿ APL ಕುಟುಂಬದವರು. ದ.ಕ. ಜಿಲ್ಲೆಯಲ್ಲಿ ಪೈಲಟ್‌ ಯೋಜನೆಯಾಗಿ ಆರಂಭಗೊಂಡ ಇದು ಉಡುಪಿ ಜಿಲ್ಲೆಯಲ್ಲಿ ಶೀಘ್ರ ಜಾರಿಯಾಗಲಿದೆ.

Advertisement

ನೋಂದಣಿ ಹೇಗೆ?
ಈಗಾಗಲೇ ನೋಂದಣಿ ಪ್ರಕ್ರಿಯೆ ರಾಜ್ಯದ 10 ಕಡೆಗಳಲ್ಲಿ ನಡೆಯುತ್ತಿದ್ದು, ದ. ಕನ್ನಡದಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಯೂ ಒಂದಾಗಿದೆ. ಬಿಪಿಎಲ್‌ ಕುಟುಂಬದವರು BPL ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಪ್ರತಿ ತಂದು ನೋಂದಣಿ ಮಾಡಿಕೊಳ್ಳಬಹುದು. ತಂಬ್‌, ಅದಾಗದಿದ್ದಲ್ಲಿ ಆಧಾರ್‌ ಕಾರ್ಡ್‌ ಸ್ಕ್ಯಾನ್‌, ಇಲ್ಲವಾದಲ್ಲಿ ನೇರ ಬಿಪಿಎಲ್‌ ನಂಬರ್‌ ಸೈಟ್‌ಗೆ ನಮೂದಿಸಿ ಮೂರೇ ನಿಮಿಷಗಳಲ್ಲಿ ಕಾರ್ಡ್‌ ನೀಡಲಾಗುತ್ತದೆ.

APL ಪಡಿತರ ಚೀಟಿದಾರರಿಗೆ ಶೇ. 30 ಉಚಿತ ಸೇವೆ ಲಭ್ಯವಿದ್ದು, ಅವರಿಗೆ ಜನರಲ್‌ ಕಾರ್ಡ್‌ ನೀಡಲಾಗುತ್ತದೆ. BPLನವರು ಬಿಪಿಎಲ್‌ ಕಾರ್ಡ್‌ ನೀಡದೆ  ಆಧಾರ್‌ ಕಾರ್ಡ್‌ ಮಾತ್ರ ನೀಡಿದ್ದಲ್ಲಿ ಜನರಲ್‌ ಕಾರ್ಡ್‌ ನೀಡಲಾಗುತ್ತದೆ ಮತ್ತು ಅಂಥವರಿಗೆ ಪೂರ್ಣ ಉಚಿತ ಸೇವೆ ಸಿಗುವುದಿಲ್ಲ. ಕಾರ್ಡ್‌ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಅದಕ್ಕೆಂದೇ ಜಿಲ್ಲಾಸ್ಪತ್ರೆಗೆ ಬರಬೇಕೆಂದಿಲ್ಲ; ಚಿಕಿತ್ಸೆಗಾಗಿ ಬಂದಾಗ ಇದನ್ನು ಸಿಬಂದಿಯೇ ಮಾಡಿಸಿ ಕೊಡುತ್ತಾರೆ. ಕೇಳಿ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಜಿಲ್ಲಾ  ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರವೇಶ ಸ್ಥಳದಲ್ಲಿ 2, ಡಿಸ್ಟ್ರಿಕ್ಟ್ ಅರ್ಲಿ ಇಂಟರ್‌ವೆನ್ಶನ್‌ ಸೆಂಟರ್‌, ಮಕ್ಕಳ ಆಸ್ಪತ್ರೆ ಹಾಗೂ ಒಪಿಡಿ ವಿಭಾಗಗಳಲ್ಲಿ ತಲಾ ಒಂದು – ಹೀಗೆ 4 ಕೌಂಟರ್‌ ಗಳಲ್ಲಿ ನೋಂದಣಿ ನಡೆಯುತ್ತಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನೋಂದಣಿ ಆಗಲಿದೆ.

ಆಸ್ಪತ್ರೆಗಳು ನಿರಾಕರಿಸುವಂತಿಲ್ಲ
ಜಿಲ್ಲೆಯ 30 ಆಸ್ಪತ್ರೆಗಳು ಈಗಾಗಲೇ ಈ ಯೋಜನೆಯಡಿ ಒಪ್ಪಂದ ಮಾಡಿಕೊಂಡಿವೆ. ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯ ದೊರೆಯದಿದ್ದರೂ ಒಪ್ಪಂದವಾದ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತದೆ. ಸರಕಾರಿ ಆಸ್ಪತ್ರೆ ಸೂಚಿಸಿದ ಖಾಸಗಿ ಆಸ್ಪತ್ರೆಗೆ ರೋಗಿ ಸೂಚನಾಪತ್ರ ಮತ್ತು ಅರ್ಹತಾ ಕಾರ್ಡ್‌ನೊಂದಿಗೆ ದಾಖಲಾಗಬಹುದು. ಸರಕಾರಿ ಆಸ್ಪತ್ರೆಯ ಸೂಚನೆ ಮುಖಾಂತರ ಬಂದ ರೋಗಿಗೆ ಚಿಕಿತ್ಸೆ ನಿರಾಕರಿಸಿದಲ್ಲಿ, ದೂರು ಸಲ್ಲಿಸಲು ಅವಕಾಶವಿದೆ. ದೂರು ಆಧರಿಸಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಯೋಜನೆಯ ದ.ಕ. ಜಿಲ್ಲಾ ಸಂಯೋಜಕ ಜಗನ್ನಾಥ್‌ ಶಿರ್ಲಾಲು ತಿಳಿಸಿದ್ದಾರೆ. 

ಎಲ್ಲಿಯೂ ಕಾರ್ಡ್‌ ಪಡೆಯಬಹುದು
ಈಗಾಗಲೇ ಮಂಗಳೂರು, ಶಿವಮೊಗ್ಗ, ಮಂಡ್ಯ ಸಹಿತ ಹತ್ತು ಕಡೆಗಳಲ್ಲಿ ಅರ್ಹತಾ ಕಾರ್ಡ್‌ ನೀಡಲಾಗುತ್ತಿದ್ದು, ರಾಜ್ಯದ ಯಾವುದೇ ಭಾಗದ ಬಿಪಿಎಲ್‌ ಕಾರ್ಡ್‌ದಾರರು ಎಲ್ಲಿ ಬೇಕಾದರೂ ಕಾರ್ಡ್‌ ಮಾಡಿಸಿಕೊಳ್ಳಬಹುದು. ಆದರೆ ನೋಂದಣಿಗೆ ಮುನ್ನ ಡಿಕ್ಲರೇಶನ್‌ ಪತ್ರ ನೀಡಬೇಕಾಗುತ್ತದೆ.

Advertisement

2 ಲಕ್ಷ ರೂ.ಗಳ ಉಚಿತ ಚಿಕಿತ್ಸೆ
ಐವರು ಸದಸ್ಯರಿರುವ ಕುಟುಂಬದ ಎಲ್ಲರಿಗೂ ಅರ್ಹತಾ ಕಾರ್ಡ್‌ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ 1.5 ಲಕ್ಷ ರೂ. ಹಾಗೂ 50,000 ರೂ. ಹೆಚ್ಚುವರಿ ಹಣವನ್ನು ಚಿಕಿತ್ಸೆಗಾಗಿ ಖರ್ಚು ಮಾಡಲಾಗುತ್ತದೆ. ಕುಟುಂಬ ಸದಸ್ಯರಲ್ಲಿ  ಯಾರಾದರೂ ESI ಅಥವಾ ಇತರ ವಿಮಾ ಸೌಲಭ್ಯ ಹೊಂದಿದ್ದರೆ ಅವರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ.

ಹಲವು ಒಂದಾಗಿ ಆರೋಗ್ಯ ಕರ್ನಾಟಕ
ರಾಜ್ಯದಲ್ಲಿ ಬಡ ಜನರ ಆರೋಗ್ಯಕ್ಕಾಗಿ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ, ಹಿರಿಯ ನಾಗರಿಕರ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ಇಂದಿರಾ ಸುರಕ್ಷಾ ಯೋಜನೆಗಳನ್ನು ಸರಕಾರ ಈಗಾಗಲೇ ಜಾರಿಗೆ ತಂದಿದೆ. ಆದರೆ ಇವುಗಳ ಪ್ರಯೋಜನ ಪಡೆಯಲು ಜನಸಾಮಾನ್ಯರಿಗೆ ಹಲವು ಗೊಂದಲ ಎದುರಾಗುತ್ತಿದ್ದು, ದುರ್ಬಳಕೆಯೂ ನಡೆಯುತ್ತಿದೆ. ಇವನ್ನೆಲ್ಲ ನಿವಾರಿಸುವ ಸಲುವಾಗಿ ಎಲ್ಲ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಜನರಿಗೆ ಉಚಿತ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವುದು ಆರೋಗ್ಯ ಕರ್ನಾಟಕ ಯೋಜನೆಯ ಉದ್ದೇಶ. ಮುಂದೆ ಈ ಯಾವುದೇ ಯೋಜನೆಗಳು ಚಾಲ್ತಿಯಲ್ಲಿ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿವು
ಮಂಗಳೂರು:
ಜಿಲ್ಲಾ ಸರಕಾರಿ ವೆನ್‌ ಲಾಕ್‌ ಆಸ್ಪತ್ರೆ, ಲೇಡಿಗೋಶನ್‌ ಆಸ್ಪತ್ರೆ,  ಕೆಎಂಸಿ ಜ್ಯೋತಿ, ಕೆಎಂಸಿ ಅತ್ತಾವರ, ಯೇನಪೊಯ ಮೆಡಿಕಲ್‌ ಕಾಲೇಜು ಮಂಗಳೂರು, ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಓಂಕಾಲಜಿ, ಇಂಡಿಯಾನ ಆಸ್ಪತ್ರೆ, ಯೇನಪೊಯ ಸ್ಪೆಷಾಲಿಟಿ ಆಸ್ಪತ್ರೆ, ಪ್ರಸಾದ್‌ನೇತ್ರಾಲಯ, ಸೋಮಯಾಜಿ ಆಸ್ಪತ್ರೆ, ಒಮೇಗಾ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ಅಥೇನಾ ಆಸ್ಪತ್ರೆ, ಫಾ| ಮುಲ್ಲರ್‌ ಆಸ್ಪತ್ರೆ ಕಂಕನಾಡಿ, ಕಣಚೂರು ಆಸ್ಪತ್ರೆ ದೇರಳಕಟ್ಟೆ, ಫಾದರ್‌ ಮುಲ್ಲರ್‌ ಆಸ್ಪತ್ರೆ ತುಂಬೆ, ಎ.ಜೆ. ಆಸ್ಪತ್ರೆ, ಜ| ಕೆ.ಎಸ್‌. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ; ಬಂಟ್ವಾಳ ತಾಲೂಕು ಆಸ್ಪತ್ರೆ, ವಿಟ್ಲ ಸ. ಆ. ಕೇಂದ್ರ, ವಾಮದಪದವು ಸ.ಆ. ಕೇಂದ್ರ, ಎಸ್‌ಡಿಎಂ ಆಸ್ಪತ್ರೆ ಉಜಿರೆ, ಫಾ| ಎಲ್‌.ಎಂ. ಪಿಂಟೋ ಆಸ್ಪತ್ರೆ ಬದ್ಯಾರ್‌ ಬೆಳ್ತಂಗಡಿ, ಬೆನಕ ಆಸ್ಪತ್ರೆ ಬೆಳ್ತಂಗಡಿ, ಸುಳ್ಯ ತಾಲೂಕು ಆಸ್ಪತ್ರೆ, ಕೆವಿಜಿ ಮೆಡಿಕಲ್‌ ಕಾಲೇಜು ಸುಳ್ಯ, ಪ್ರಸಾದ್‌ ನೇತ್ರಾಲಯ ಸುಳ್ಯ, ಆಳ್ವಾಸ್‌ ಹೆಲ್ತ್‌ ಸೆಂಟರ್‌ ಮೂಡಬಿದಿರೆ, ಪ್ರಗತಿ ಆಸ್ಪತ್ರೆ ಪುತ್ತೂರು, ಆದರ್ಶ ಆಸ್ಪತ್ರೆ, ಚೇತನಾ ಆಸ್ಪತ್ರೆ, ಪುತ್ತೂರು

ಉಡುಪಿ ಜಿಲ್ಲೆಯ ಆಸ್ಪತ್ರೆಗಳಿವು 
ಉಡುಪಿ:
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಆದರ್ಶ, ಮಿತ್ರಾ, ನ್ಯೂಸಿಟಿ, ಹೈಟೆಕ್‌, ಪ್ರಸಾದ್‌ ನೇತ್ರಾಲಯ, ಮಂಜುನಾಥ ಕಣ್ಣಿನ ಆಸ್ಪತ್ರೆಗಳು; ಮಣಿಪಾಲದ ಕೆಎಂಸಿ ಆಸ್ಪತ್ರೆ; ಬ್ರಹ್ಮಾವರದ ಮಹೇಶ್‌ ಆಸ್ಪತ್ರೆ, ಕುಂದಾಪುರದ ಎನ್‌ಆರ್‌ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆ, ಶ್ರೀಮಾತಾ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ, ಸರ್ಜನ್ಸ್‌ ಆಸ್ಪತ್ರೆ, ಮಂಜುನಾಥ ಆಸ್ಪತ್ರೆ, ವಿನಯ ಆಸ್ಪತ್ರೆ, ನಿಟ್ಟೆ ಆಸ್ಪತ್ರೆ, ಕಾರ್ಕಳದ ಸ್ಪಂದನ ಆಸ್ಪತ್ರೆ.

ನಾಲ್ಕು ಹಂತದ ಚಿಕಿತ್ಸೆ
ನಾರ್ಮಲ್‌ ಸೆಕೆಂಡರಿ, ಸೆಕೆಂಡರಿ ಕಾಂಪ್ಲೆಕ್ಸ್‌, ಟರ್ಶರಿ, ಎಮರ್ಜೆನ್ಸಿ ಕೇರ್‌ ಎಂಬ ನಾಲ್ಕು ಹಂತದ ಚಿಕಿತ್ಸಾ ವ್ಯವಸ್ಥೆ ಈ ಯೋಜನೆಯಡಿ ಬರುತ್ತದೆೆ. ಜಿಲ್ಲಾ ಮತ್ತು ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಸಾಧ್ಯವಾಗುವ ಸಣ್ಣಪುಟ್ಟ ಸರ್ಜರಿಗಳು ಮೊದಲ ಎರಡು ಹಂತದ ಚಿಕಿತ್ಸೆಯಡಿ ಬರುತ್ತವೆ. ಟರ್ಶರಿ ಹಂತದಲ್ಲಿ ಬರುವ ಹೃದಯ, ಕ್ಯಾನ್ಸರ್‌, ನ್ಯೂರೋ ಸರ್ಜರಿ, ಯೂರಾಲಜಿ, ಕಿಡ್ನಿ ಸ್ಟೋನ್‌ ಸಹಿತ ವಿವಿಧ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ರೋಗಿಯ ಒಪ್ಪಿಗೆಯೊಂದಿಗೆ ಸರಕಾರಿ ಆಸ್ಪತ್ರೆಯಿಂದ ಸೂಚಿಸಲಾದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳಬಹುದು. ಹೀಗೆ ತೆರಳುವಾಗ ಆಯಾ ಸರಕಾರಿ ಆಸ್ಪತ್ರೆಯಿಂದ ಸೂಚನಾ ಪತ್ರ ಹಾಗೂ ಅರ್ಹತಾ ಕಾರ್ಡ್‌ ಜತೆಗೊಯ್ಯಬೇಕು. ಮೊದಲ ಮೂರು ಹಂತದ ಚಿಕಿತ್ಸೆಗಳಿಗೆ ಸರಕಾರಿ ಆಸ್ಪತ್ರೆಗೆ ಬಾರದೆ, ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಚಿಕಿತ್ಸೆ ಲಭಿಸದಿದ್ದರೆ ಅದಕ್ಕೆ ಸರಕಾರ ಹೊಣೆ ಆಗುವುದಿಲ್ಲ.

ತುರ್ತು ಚಿಕಿತ್ಸೆಗಳಾದ ರಸ್ತೆ ಅಪಘಾತ, ಸುಟ್ಟ ಗಾಯ, ಹೃದಯ ಸಂಬಂಧಿ ತುರ್ತು ಶಸ್ತ್ರಚಿಕಿತ್ಸೆ ಮುಂತಾದವುಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಈ ಸಂದರ್ಭದಲ್ಲಿ ಕಾರ್ಡ್‌ ಇಲ್ಲದಿದ್ದಲ್ಲಿ ಬಿಪಿಎಲ್‌ ಪಡಿತರ ಚೀಟಿಯನ್ನು ದಾಖಲೆಯನ್ನಾಗಿ ನೀಡಬಹುದು. ಯೋಜನೆಯಡಿ ಚಿಕಿತ್ಸೆ ಸಿಗುವ ಕೆಲವು ಕಾಯಿಲೆಗಳ ಪಟ್ಟಿ ಬಂದಿದ್ದು, ಸಂಪೂರ್ಣ ಮಾಹಿತಿ ಜಿಲ್ಲಾಸ್ಪತ್ರೆಗೆ ಇನ್ನಷ್ಟೆ ಬರಬೇಕಿದೆ.

ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಶೇ. 30 ಉಚಿತ ಸೇವೆ

Advertisement

Udayavani is now on Telegram. Click here to join our channel and stay updated with the latest news.

Next