Advertisement
ಚೀನದೊಂದಿಗೆ ನಮ್ಮ ಉನ್ನತ ಮಿಲಿಟರಿ ಅಧಿಕಾರಿಗಳು ನಡೆಸಿದ ನಿರಂತರ ಮಾತುಕತೆಯ ಕಾರಣದಿಂದಾಗಿ ಉಭಯ ರಾಷ್ಟ್ರಗಳು ಪ್ಯಾಂಗಾಂಗ್ ಸರೋವರದ ತಟದಿಂದ ಸೇನೆ ಹಿಂದೆಗೆದುಕೊಳ್ಳಲು ಪರಸ್ಪರ ಸಮ್ಮತಿ ಸೂಚಿಸಿವೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ಯಾಂಗಾಂಗ್‌ನ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಸೇನೆ ವಾಪಸಾತಿ ಕುರಿತಾಗಿಭಾರತ-ಚೀನಗಳ ನಡುವೆ ಮಹತ್ವದ ಒಪ್ಪಂದವಾಗಿದೆ. ಇದರ ಭಾಗವಾಗಿ ಈಗಾಗಲೇ ವಾಪಸಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ದಂಡೆಯ ಫಿಂಗರ್ 4ರಲ್ಲಿದ್ದ ಪಿಎಲ್‌ಎ ತುಕಡಿಗಳು ಫಿಂಗರ್ 8ರಲ್ಲಿ ಸ್ಥಾಪನೆಗೊಳ್ಳಲಿವೆ. ಭಾರತೀಯ ಸೇನೆ ಫಿಂಗರ್ 3ರ ತನ್ನ ಶಾಶ್ವತ ನೆಲೆಯಾದ ಧನ್‌ಸಿಂಗ್ ಥಾಪಾ ಪೋಸ್ಟ್‌ನಲ್ಲಿ ಬೀಡು ಬಿಡಲಿದೆ. ಈ ಕುರಿತಾಗಿ 9ನೇ ಸುತ್ತಿನ ಮಾತುಕತೆಯಲ್ಲಿ ಒಪ್ಪಂದ ಏರ್ಪಟ್ಟಿದೆ ಎಂದು ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
Related Articles
ಚೀನದೊಂದಿಗಿನ ಮಾತುಕತೆಯ ಸಂದರ್ಭ ಭಾರತ ಯಾವ ವಿಚಾರದಲ್ಲೂ ರಾಜಿ ಆಗಿಲ್ಲ. ತನ್ನ ಭೂಪ್ರದೇಶದ ಒಂದಿಂಚು ಜಾಗವನ್ನೂ ಭಾರತ ಯಾರಿಗೂ ಬಿಟ್ಟುಕೊಟ್ಟಿಲ್ಲ ಎಂದು ಸಿಂಗ್ ಸ್ಪಷ್ಪ ಪಡಿಸಿದ್ದಾರೆ. ರಾಜತಾಂತ್ರಿಕವಾಗಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಮುಂದುವರಿಯಲಿವೆ ಎಂದು ಅವರು ಹೇಳಿದ್ದಾರೆ.
Advertisement
“45 ಪಿಎಲ್‌ಎ ಸೈನಿಕರ ಸಾವು’ಕಳೆದ ವರ್ಷ ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ಭಾರತದ ವೀರ ಯೋಧರ ಜತೆಗೆ ನಡೆದ ಘರ್ಷಣೆಯಲ್ಲಿ ಚೀನದ 45 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿಸಂಸ್ಥೆ “ಟಿಎಎಸ್‌ಎಸ್’ ಗುರುವಾರ ವರದಿ ಮಾಡಿದೆ. ಭಾರತದ 20 ಮಂದಿ ಯೋಧರೂ ಹುತಾತ್ಮರಾಗಿದ್ದರು ಎಂಬ ಅಂಶವನ್ನು ಅದು ದೃಢಪಡಿಸಿದೆ. ಅಮೆರಿಕ ಮತ್ತು ಇತರ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳ ವರದಿ ಉಲ್ಲೇಖೀಸಿ ಈ ಅಂಶ ವರದಿ ಮಾಡಿರುವುದಾಗಿ ಅದು ಹೇಳಿ ಕೊಂಡಿದೆ. ಗಾಲ್ವಾನ್ ಘರ್ಷಣೆಯಲ್ಲಿ ತನ್ನ ಕಡೆ ಎಷ್ಟು ಯೋಧರು ಸತ್ತಿದ್ದಾರೆ ಎಂಬ ಬಗ್ಗೆ ಬೀಜಿಂಗ್ ದೀರ್ಘಕಾಲದಿಂದ ಮೌನ ತಳೆದಿತ್ತು. ವಾಪಸಾತಿಯ ವೀಡಿಯೋ ಬಿಡುಗಡೆ
ಲಡಾಖ್‌ನ ಪ್ಯಾಂಗಾಂಗ್ ಸರೋವರ ವ್ಯಾಪ್ತಿಯ ಪ್ರದೇಶದಿಂದ ಸೇನೆಗಳು ವಾಪಸಾಗುತ್ತಿರುವ ಬಗ್ಗೆ ಭಾರತದ ರಕ್ಷಣ ಸಚಿವಾಲಯ ದೃಢ ಪಡಿಸಿದೆ. ಅದಕ್ಕೆ ಪೂರಕವಾಗಿರುವ ವೀಡಿಯೋವನ್ನೂ ಬಿಡುಗಡೆ ಮಾಡ ಲಾಗಿದೆ. ಮುಂಚೂಣಿ ನೆಲೆಗಳಿಂದ ಮೂಲ ನೆಲೆಗಳಿಗೆ ಸೇನಾ ವಾಹನಗಳು, ಸಿಬಂದಿ ವಾಪಸಾಗುತ್ತಿದ್ದಾರೆ. ಈ ಬಗ್ಗೆ ಫೆ. 8, 9ರಂದು ಚುಶೂಲ್‌ನಲ್ಲಿ ಮಾತುಕತೆ ನಡೆದಿತ್ತು. ಬರೋಬ್ಬರಿ 9 ತಿಂಗಳ ಬಿಕ್ಕಟ್ಟಿನ ಬಳಿಕ ಈ ಬೆಳವಣಿಗೆ ನಡೆದಿದೆ. ಇದು ವರೆಗೆ ಒಟ್ಟು 9 ಸುತ್ತಿನ ಮಾತುಕತೆಗಳು ನಡೆದಿವೆ.