ನವದೆಹಲಿ:ವರ್ಷಂಪ್ರತಿ ಜನವರಿ 15ರಂದು ಭಾರತದಲ್ಲಿ ಸೇನಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇನಾ ದಿನಾಚರಣೆ ಹೇಗೆ ಆಚರಿಸಲಾಗುತ್ತಿದೆ, ಸೇನಾ ದಿನ ಎಂದರೇನು, ಯಾಕೆ ಇದನ್ನು ಆಚರಿಸಲಾಗುತ್ತಿದೆ ಎಂಬ ಕುರಿತ ಕಿರು ವಿವರ ಇಲ್ಲಿದೆ…
1949ರ ಜನವರಿ 15ರಂದು ಭಾರತೀಯ ಸೇನೆಯ ಮೊದಲ ಜನರಲ್ ಫೀಲ್ಡ್ ಮಾರ್ಷಲ್ ಆಗಿ ಕೆಎಂ ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 15ನ್ನು ಐತಿಹಾಸಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಆರ್ಮಿಯ ಕೊನೆಯ ಬ್ರಿಟಿಷ್ ಕಮಾಂಡರ್ ಜನರಲ್ ಸರ್ ಫ್ರಾನ್ಸಿಸ್ ರೋಬರ್ಟ್ ರಾಯ್ ಬುಚರ್ ಅವರ ನಂತರ ಭಾರತದ ಮೊದಲ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ಆರ್ಮಿ ಡೇ ಹೇಗೆ ಆಚರಿಸಲಾಗುತ್ತಿದೆ:
ಭಾರತೀಯ ಸೇನೆಯಲ್ಲಿ ಸೇನಾ ದಿನಾಚರಣೆಯನ್ನು ಅದ್ದೂರಿಯಾಗಿ ಜನವರಿ 15ರಂದು ಆಚರಿಸಲಾಗುತ್ತಿದೆ. ಇಂದು ಸೇನಾ ಕಮಾಂಡ್ ಗಳ ಪ್ರಧಾನ ಕಚೇರಿಯಲ್ಲಿ ಸಾಂಪ್ರದಾಯಿಕ ಸೇನಾ ದಿನಾಚರಣೆಯ ಪರೇಡ್ ನಡೆಯಲಿದೆ. ಅಲ್ಲದೇ ದಿಲ್ಲಿ ಕಂಟೋನ್ಮೆಂಟ್ ನ ಮೈದಾನದಲ್ಲಿ ನಡೆಯಲಿರುವ ಪರೇಡ್ ನಲ್ಲಿ ಆರ್ಮಿ ಜನರಲ್ ಎಂಎಂ ನರಾವಣೆ ಹಾಗೂ ಸೇನಾ ವರಿಷ್ಠರು ಭಾಗವಹಿಸಿ ಪರಿಶೀಲನೆ ನಡೆಸಲಿದ್ದಾರೆ. ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಯೋಧರಿಂದ ಬೈಕ್ ಸ್ಟಂಟ್, ವೈಮಾನಿಕ ಕಸರತ್ತು ಪ್ರದರ್ಶನ ನಡೆಯಲಿದೆ. ಇಂದು ಶೌರ್ಯ ಪ್ರಶಸ್ತಿ, ಸೇನಾ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.
2020ರ ವಿಶೇಷ:
ಈ ವರ್ಷದ ಸೇನಾ ದಿನಾಚರಣೆ ವಿಶೇಷತೆ ಎಂದರೆ ಸೇನಾ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಮಹಿಳಾ ಸೇನಾಧಿಕಾರಿ ಕ್ಯಾಪ್ಟನ್ ತಾನಿಯಾ ಶರ್ಗಿಲ್ ಪಥಸಂಚಲನ ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಈ ಪರೇಡ್ ನಲ್ಲಿ ದೇಶಿಯ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಲಿದೆ.