ಮಹಾರಾಷ್ಟ್ರ: ಭಾರೀ ಮಳೆಯಿಂದಾಗಿ ಪುಣೆ ಮತ್ತು ಕೊಲ್ಹಾಪುರ್ ದಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ಹಲವು ಮನೆಗಳು ಜಲಾವೃತಗೊಂಡಿದ್ದು, ಜಿಲ್ಲೆಯಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸ್ಥಳೀಯ ಅಧಿಕಾರಿಗಳ ರಕ್ಷಣಾ ಕಾರ್ಯಾಚರಣೆ ನೆರವು ನೀಡಲು ಸೇನೆ ಆಗಮಿಸುವಂತೆ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವ್ಸೇ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ ಮುಂಬೈಗೆ ಆಗಮಿಸಬೇಕಾಗಿದ್ದ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ವಿಮಾನ ಸಂಚಾರದ ಪುನರಾರಂಭದ ಬಗ್ಗೆ ಅಪ್ ಡೇಟ್ಸ್ ನೀಡುವುದಾಗಿ ವಿಮಾನ ಸಂಸ್ಥೆಗಳು ತಿಳಿಸಿದೆ.
ಮುಂಬೈ, ಪುಣೆ ಮತ್ತು ಥಾಣೆಯ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಸಿ, ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಡೆಪ್ಯುಟಿ ಮುಖ್ಯಮಂತ್ರಿ ಅಜಿತ್ ಪವಾರ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಈಗಾಗಲೇ ರೆಡ್ ಅಲರ್ಟ್ ಘೋಷಿಸಿದ್ದು, ಶುಕ್ರವಾರ ಬೆಳಗ್ಗೆವರೆಗೆ ಜನರು ಅನವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ ಎಕ್ಸ್ ಮೂಲಕ ಮನವಿ ಮಾಡಿಕೊಂಡಿದೆ. ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ.