ಲಕ್ನೋ: ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳು ಯುದ್ಧಕ್ಕೆ ಸಜ್ಜಾಗಬೇಕಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಗುರುವಾರ(ಸೆ 5) ಕರೆ ನೀಡಿದ್ದಾರೆ.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಉನ್ನತ ಕಮಾಂಡರ್‌ಗಳ ಮೊದಲ ಜಂಟಿ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರಕ್ಷಣ ಸಚಿವರು” ಉಕ್ರೇನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಬಾಂಗ್ಲಾದೇಶದ ಪರಿಸ್ಥಿತಿ ಉಲ್ಲೇಖಿಸಿ “ಅನಿರೀಕ್ಷಿತ” ಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಸೇನಾ ಅಧಿಕಾರಿಗಳನ್ನು ಉತ್ತೇಜಿಸಿದರು.
”ಭಾರತವು ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಶಾಂತಿಯನ್ನು ಕಾಪಾಡಲು ಸಶಸ್ತ್ರ ಪಡೆಗಳು ಯುದ್ಧಕ್ಕೆ ಸನ್ನದ್ಧವಾಗಿರಬೇಕು” ಎಂದು ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಜಂಟಿ ಮಿಲಿಟರಿ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.
ಪೂರ್ವ ಲಡಾಖ್‌ನ ಗಡಿಯ (LAC) ಉದ್ದಕ್ಕೂ ಚೀನದೊಂದಿಗೆ ನಾಲ್ಕು ವರ್ಷಗಳ ಗಡಿ ರೇಖೆ ವಿವಾದ ಮತ್ತು ಪರಿಸ್ಥಿತಿಯ ವಿಚಾರ ಪ್ರಸ್ತಾವಿಸಿದರು. ”ಜಾಗತಿಕ ಚಂಚಲತೆಯ ಹೊರತಾಗಿಯೂ, ಭಾರತವು ಅಪರೂಪದ ಶಾಂತಿ ಲಾಭಾಂಶವನ್ನು ಅನುಭವಿಸುತ್ತಿದೆ ಮತ್ತು ಅದು ಶಾಂತಿಯುತವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಹೆಚ್ಚುತ್ತಿರುವ ಸವಾಲುಗಳಿಂದಾಗಿ ನಾವು ಜಾಗರೂಕರಾಗಿರಬೇಕು ಎಂದರು.
”ಅಮೃತ ಕಾಲದ ಸಮಯದಲ್ಲಿ ನಾವು ನಮ್ಮ ಶಾಂತಿಯನ್ನು ಅಖಂಡವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ನಾವು ನಮ್ಮ ವರ್ತಮಾನದತ್ತ ಗಮನ ಹರಿಸಬೇಕು, ಪ್ರಸ್ತುತ ನಮ್ಮ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಮತ್ತು ಭವಿಷ್ಯದತ್ತ ಗಮನ ಹರಿಸಬೇಕು. ಇದಕ್ಕಾಗಿ, ನಾವು ಬಲವಾದ ಮತ್ತು ದೃಢವಾದ ರಾಷ್ಟ್ರೀಯ ಭದ್ರತಾ ಘಟಕವನ್ನು ಹೊಂದಿರಬೇಕಾಗಿದೆ” ಎಂದು ರಾಜನಾಥ್ ಸಿಂಗ್ ಹೇಳಿದರು.