ಅರ್ಜುನ್ ಸರ್ಜಾ ಅಭಿನಯದ 150ನೇ ಚಿತ್ರವಾದ “ವಿಸ್ಮಯ’ ಜುಲೈ ಏಳರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಭಾನುವಾರ ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿವೆ. ಈ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಒಂದು ಸ್ವಾರಸ್ಯಕರ ವಿಷಯವನ್ನು ಬಿಚ್ಚಿಟ್ಟರು. ಅದೇನೆಂದರೆ, ಒತ್ತಡದಿಂದಾಗಿ ಈ ಚಿತ್ರದಲ್ಲಿ ನಟಿಸುವುದಕ್ಕೆ ಅವರಿಗೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಕಥೆ ಕೇಳಿದ ಮೇಲೆ, ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳೋಣ ಎಂದು ಅವರಿದ್ದರಂತೆ.
ಆದರೆ, ನೋಡಿದರೆ ಅದು ಉಲ್ಟಾ ಆಗಿದೆ. ಕಥೆ ಕೇಳಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರು ನಟಿಸಿದ್ದೂ ಆಗಿದೆ. “ಕೆಲವೊಮ್ಮೆ ತುಂಬಾ ಒತ್ತಡಗಳಿರುತ್ತವೆ. ನಿರ್ಮಾಣ, ನಿರ್ದೇಶನ, ನಟನೆ … ಅಂತೆಲ್ಲಾ ಬಿಝಿಯಾಗಿರುತ್ತೇನೆ. ಆ ಸಂದರ್ಭದಲ್ಲಿ ಯಾರೋ ಚಿತ್ರ ಮಾಡಿಕೊಡಿ ಅಂತ ಬರುತ್ತಾರೆ. ಈಗಾಗಲೇ ಒತ್ತಡ ಇರುವುದರಿಂದ, ಇನ್ನೊಂದು ಚಿತ್ರ ಒಪ್ಪುವುದು ಕಷ್ಟ. ಅವರು ಸಹ ಸಾಕಷ್ಟು ಕಷ್ಟಪಟ್ಟು ಏನೋ ಕಥೆ ಮಾಡಿಕೊಂಡು, ಚಿತ್ರ ಮಾಡುವುದಕ್ಕೆ ಮುಂದೆ ಬಂದಿರುತ್ತಾರೆ.
ಅಂಥವರಿಗೆ ನೇರವಾಗಿ ಇಲ್ಲ ಎಂದು ಹೇಳುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ, ಒಮ್ಮೆ ಕಥೆ ಕೇಳಿ ಏನಾದರೂ ನೆಪ ಹೇಳಿ ಕಳಿಸೋಣ ಅಂತ ಅಂದುಕೊಂಡು, “ವಿಸ್ಮಯ’ ಕಥೆ ಕೇಳುವುದಕ್ಕೆ ಕುಳಿತೆ. ಅರುಣ್ ಹೇಳಿದ ಕಥೆ ಎಷ್ಟು ಇಷ್ಟವಾಯಿತು ಎಂದರೆ, ಕಥೆ ಕೇಳಿ ಮುಗಿಸುತ್ತಿದ್ದಂತೆ ತಕ್ಷಣ ಒಪ್ಪಿಕೊಂಡುಬಿಟ್ಟೆ. ಚಿತ್ರ ಒಪ್ಪಿದ ನಂತರ ಇದು ನನ್ನ 150ನೇ ಚಿತ್ರ ಎಂದು ಗೊತ್ತಾಯಿತು’ ಎನ್ನುತ್ತಾರೆ ಅರ್ಜುನ್. ಇದಕ್ಕೂ ಮುನ್ನ ಅವರಿಗೆ “ಜಂಟಲ್‌ಮಾÂನ್’ ಚಿತ್ರದ ಸಂದರ್ಭದಲ್ಲೂ ಹೀಗೇಯೇ ಆಗಿತ್ತಂತೆ.
“ಆಗ ನಾನು ಬಹಳ ಕೋಪದಲ್ಲಿದ್ದೆ. ನಾನು ನಟಿಸಿದ ಎಲ್ಲಾ ಸಿನಿಮಾಗಳು ಸೋತಿದ್ದವು. ಯಾರು ಸಹ ನನ್ನ ಜೊತೆಗೆ ಸಿನಿಮಾ ಮಾಡೋಕೆ ಮುಂದೆ ಬರುತ್ತಿರಲಿಲ್ಲ. ಆಗ ನಾನೇ “ಜೈ ಹಿಂದ್’ ಸಿನಿಮಾ ಮಾಡಿದೆ. ಅದಕ್ಕಾಗಿ ಒಂದು ಪ್ರಾಪರ್ಟಿಯನ್ನೂ ಮಾರಿದ್ದೆ. ಚಿತ್ರ ಸೂಪರ್ ಹಿಟ್ ಆಯ್ತು. ಆ ಸಂದರ್ಭದಲ್ಲಿ ಶಂಕರ್, “ಜಂಟಲ್‌ಮಾನ್’ ಕಥೆ ತಗೊಂಡು ಬಂದರು. ಅಷ್ಟರಲ್ಲಿ ನಾನೇ ಚಿತ್ರ ಮಾಡಿ ಗೆದ್ದಿದ್ದರಿಂದ, ನಾನ್ಯಾಕೆ ಬೇರೆಯವರ ಜೊತೆಗೆ ಮಾಡಬೇಕು ಎಂಬ ಭಾವನೆ ಬಂದಿತ್ತು.
ಆದರೆ, ಶಂಕರ್ ಸುಲಭವಾಗಿ ಬಿಡಲಿಲ್ಲ. ನನಗೆ ಕಥೆ ಹೇಳುವುದಕ್ಕೆ ಕಾದರು. ಒಮ್ಮೆ ಕಥೆ ಕೇಳಿ, ಆಮೇಲೆ ಬೇಡ ಅಂದರಾಯಿತು ಅಂತ ಕಥೆ ಕೇಳ್ಳೋಕೆ ಕೂತೆ. ಕಥೆ ಇಷ್ಟವಾಗಿ, ನಾನು ನಟಿಸಿದ್ದಷ್ಟೇ ಅಲ್ಲ, ಆ ಚಿತ್ರ ಸೂಪರ್ ಹಿಟ್ ಆಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಇನ್ನು ತಮ್ಮ 150ನೇ ಚಿತ್ರದ ಬಗ್ಗೆ ಅರ್ಜುನ್ ಸರ್ಜಾ ಎಕ್ಸೆ„ಟ್ ಆಗಿದ್ದರೂ, 150 ಎಂಬ ಮೈಲಿಗಲ್ಲು ತಮ್ಮ ಪಾಲಿಗೆ ಅಷ್ಟೇನೂ ಮಹತ್ವದಲ್ಲ ಎನ್ನುತ್ತಾರೆ.
“ಇವತ್ತು ನಾನು 150 ಸಿನಿಮಾಗಳನ್ನು ಮಾಡಿರಬಹುದು. ಆದರೆ, ಈಗಲೂ ಮೊದಲ ಸಿನಿಮಾಗಿದ್ದ ಭಯವೇ ಇದೆ. 150 ಸಿನಿಮಾಗಳನ್ನು ಮುಗಿಸಿರಬಹುದು. ಅದ್ಭುತ ಎನ್ನುವುದಿಲ್ಲ. ಏಕೆಂದರೆ, 149ನೇ ಸಿನಿಮಾಗೂ ನಾನು ಅಷ್ಟೇ ಕಷ್ಟಪಟ್ಟಿರುತ್ತೀನಿ. 150 ಅನ್ನೋದು ಒಂದು ಸಂಖ್ಯೆ. ಅದು ಸಾಧನೆ ಅನಿಸಲ್ಲ.
ಜ್ಯೂನಿಯರ್ ಆರ್ಟಿಸ್ಟ್‌ಗಳು ಸಹ ನೂರಾರು ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಇಷ್ಟು ಸಿನಿಮಾ ಮಾಡಿದೆ ಅನ್ನೋದು ಮುಖ್ಯವಲ್ಲ. ಯಾವ ತರಹದ ಸಿನಿಮಾಗಳನ್ನು ಮಾಡಿದೆ ಅನ್ನೋದು ಬಹಳ ಮುಖ್ಯ. ಮಾಡಿದ ಸಿನಿಮಾಗಳ ಕ್ವಾಲಿಟಿ ಹೇಗಿತ್ತು, ಆ ಸಿನಿಮಾಗಳು ಯಾವ ತರಹ ಪರಿಣಾಮ ಬೀರಿದವು ಅನ್ನೋದು ಬಹಳ ಮುಖ್ಯ. ಒಂದು ಸಿನಿಮಾದಿಂದ ನಾಲ್ಕು ಜನ ಬದಲಾದರೆ ಅದೇ ಹೆಮ್ಮೆ’ ಎನ್ನುತ್ತಾರೆ ಅರ್ಜುನ್.