ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ತಿಂಗಳು ಎಂದೇ ಹೇಳಬೇಕು. ಒಂದೆಡೆ ಒಂದರ ಹಿಂದೊಂದು ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸರದಿಯಲ್ಲಿರುವಾಗ, ಮತ್ತೂಂದೆಡೆ ಅನೇಕ ಚಿತ್ರಗಳು ತಮ್ಮ ಚಿತ್ರದ ಪ್ರಮೋಶನ್ ಕಾರ್ಯಗಳನ್ನೂ ಆಗಸ್ಟ್ ತಿಂಗಳಿನಿಂದಲೇ ಶುರು ಮಾಡುತ್ತಿವೆ.
ಅದರಲ್ಲೂ ಸದ್ಯದ ಮಟ್ಟಿಗಂತೂ ಕನ್ನಡ ಸಿನಿಪ್ರಿಯರ ಚಿತ್ತ ಆಗಸ್ಟ್ 9ರತ್ತ ನೆಟ್ಟಿದೆ. ದರ್ಶನ್ ಅಭಿನಯದ “ಕುರುಕ್ಷೇತ್ರ’ ಆ.9 ರಂದು ತೆರೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತು. ಅದೇ ದಿನ ಮತ್ತೂಂದು ಬಹುನಿರೀಕ್ಷಿತ ಚಿತ್ರ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಮೊದಲ ಹಾಡು ಕೂಡ ಬಿಡುಗಡೆಯಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ದಿನಂದೇ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
“ಭರಾಟೆ’ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದು, ಸುಪ್ರೀತ್ ನಿರ್ಮಾಣ ಮಾಡಿದ್ದಾರೆ. ಶ್ರೀಮುರಳಿ ಅವರಿಗೆ ಶ್ರೀಲೀಲಾ ಜೋಡಿಯಾಗಿ ನಟಿಸಿದ್ದಾರೆ. ಇನ್ನು “ಭರಾಟೆ’ ಚಿತ್ರದ ಮೊದಲ ಹಾಡಿನ ಬಿಡುಗಡೆಯ ಸುದ್ದಿ ಸಹಜವಾಗಿಯೇ ಶ್ರೀಮುರಳಿ ಅಭಿಮಾನಿಗಳಲ್ಲಿ ಖುಷಿಯನ್ನು ಹೆಚ್ಚಿಸಿದೆ.
ಇದು ಶ್ರೀಮುರಳಿ ಅವರ ಚಿತ್ರದ ವಿಷಯವಾದರೆ, ಆಗಸ್ಟ್ 2 ರಂದು ಪ್ರಜ್ವಲ್ ದೇವರಾಜ್ ಅಭಿನಯದ “ಅರ್ಜುನ್ ಗೌಡ’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. “ಲಕ್ಕಿ’ ಶಂಕರ್ ನಿರ್ದೇಶನದ ಈ ಚಿತ್ರವನ್ನು ರಾಮು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಅರ್ಜುನ್ ಗೌಡ’ ಚಿತ್ರದ ಪೋಸ್ಟರ್ ಕೂಡ ಸಾಕಷ್ಟು ಸದ್ದು ಮಾಡಿದ್ದು, ಟೀಸರ್ ಹೇಗೆಲ್ಲಾ ಇರಬಹುದು ಎಂಬ ಬಗ್ಗೆ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇದರ ನಡುವೆಯೇ ಇನ್ನು ಅನೇಕ ಹೊಸಬರ ಚಿತ್ರಗಳ ಟೀಸರ್, ಟ್ರೇಲರ್, ಹಾಡುಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೆ ತಯಾರಾಗಿದ್ದು, ಇಷ್ಟೊಂದು ಚಿತ್ರಗಳ ಅಬ್ಬರದಲ್ಲಿ ಎಷ್ಟು ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗುತ್ತವೆ ಅನ್ನೋದು ಆಗಸ್ಟ್ ಅಂತ್ಯದೊಳಗೆ ಗೊತ್ತಾಗಲಿದೆ.