ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅರ್ಜುನನಿಗೆ ಶುಕ್ರವಾರ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. ಆ.17ರಂದು ಅರಮನೆ ಪ್ರವೇಶಿಸಿದ್ದ ಅರ್ಜುನ ನೇತೃತ್ವದ ಮೊದಲ ತಂಡದ ಎಂಟು ಆನೆಗಳು
ಹಾಗೂ ಗುರುವಾರ ಸಂಜೆ ಅರಮನೆ ಪ್ರವೇಶಿಸಿದ ಎರಡನೇ ತಂಡದ ಏಳು ಆನೆಗಳು ಸೇರಿದಂತೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ಭೀಮ, ಕಾವೇರಿ, ವಿಜಯ, ವರಲಕ್ಷ್ಮೀ, ಗೋಪಾಲಸ್ವಾಮಿ, ಕೃಷ್ಣ, ದ್ರೋಣ, ವಿಕ್ರಮ್, ಗೋಪಿ, ಹರ್ಷ ಮತ್ತು ಪ್ರಶಾಂತ ಸೇರಿದಂತೆ ಎಲ್ಲಾ 15 ಆನೆಗಳು ಅಂಬಾರಿ ಆನೆ ಅರ್ಜುನ ಮುಂದಾಳತ್ವದಲ್ಲಿ ಅರಮನೆ ಬಲರಾಮ ದ್ವಾರದಿಂದ ಹೊರಬಂದು ಬನ್ನಿಮಂಟಪ ಮೈದಾನದವರೆಗೆ ಹೋಗಿ ಮತ್ತೆ ಅರಮನೆಗೆ ವಾಪಸ್ಸಾದವು.
ಶುಕ್ರವಾರ ಬೆಳಗ್ಗೆ ಎಲ್ಲಾ ಆನೆಗಳಿಗೂ ಪೂಜೆ ಸಲ್ಲಿಸಿ, ಅರ್ಜುನನ ಬೆನ್ನಮೇಲೆ ಹೇರಲಾಗುವ ಗಾದಿ, ಮರಳು ಮೂಟೆಗೂ ಪೂಜೆ ಸಲ್ಲಿಸಿದ ನಂತರ 350 ಕೆ.ಜಿ.ತೂಕದ ಮರಳು ಮೂಟೆಯನ್ನು ಅರ್ಜುನನ ಬೆನ್ನಿಗೆ ಕಟ್ಟಿ ತಾಲೀಮು ನಡೆಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಏಡುಕೊಂಡಲ, ಇಂದಿನಿಂದ ಅಂಬಾರಿ ಆನೆ ಅರ್ಜುನನಿಗೆ ಮರಳು ಮೂಟೆ ಹೊರುವ ತಾಲೀಮು ಆರಂಭಿಸಲಾಗಿದ್ದು, ಮೊದಲ ದಿನ 350 ಕೆಜಿ ತೂಕದ ಮರಳು ಮೂಟೆ ಹೊರಿಸಲಾಗಿದೆ.
ಮೂರು ದಿನಗಳಿಗೊಮ್ಮೆ 100 ಕೆಜಿಯಂತೆ ಮರಳು ಮೂಟೆ ತೂಕ ಹೆಚ್ಚಿಸಿ ಅಂತಿಮವಾಗಿ 750 ಕೆಜಿ ಭಾರ ಹೊರುವ ತಾಲೀಮು ನೀಡಲಾಗುವುದು. ನಂತರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು. ಆನೆ ವೈದ್ಯ ಡಾ. ನಾಗರಾಜ್ ಮೊದಲಾದವರು ಆನೆಗಳ ಜತೆಗೆ ಹೆಜ್ಜೆ ಹಾಕಿದರು.