ಹೊಸದಿಲ್ಲಿ : ಭಾರತ – ಶ್ರೀಲಂಕಾ ನಡುವೆ ನಡೆದಿದ್ದ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದ ಪರವಾಗಿ ಫಿಕ್ಸಿಂಗ್ ಮಾಡಲಾಗಿತ್ತೇ ?
ಇಂತಹ ಒಂದು ಬಲವಾದ ಸಂದೇಹವನ್ನು ಲಂಕೆಯ ಮಹಾನ್ ಕ್ರಿಕೆಟಿಗ ಅರ್ಜುನ ರಣತುಂಗ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಫಿಕ್ಸಿಂಗ್ ಆರೋಪವನ್ನೂ ಮಾಡಿದ್ದಾರೆ. ಆಂದಿನ ಪಂದ್ಯದಲ್ಲಿ ಅರ್ಜುನ ರಣತುಂಗ ಸ್ವತಃ ವೀಕ್ಷಕ ವಿವರಣೆಕಾರರಾಗಿದ್ದರು.
2009ರಲ್ಲಿ ಲಂಕಾ ಕ್ರಿಕೆಟ್ ತಂಡದ ಪಾಕ್ ಪ್ರವಾಸ ನಡೆಯಲು ಯಾರು ಕಾರಣ ಎಂಬ ಪ್ರಶ್ನೆಯನ್ನೆತ್ತಿ ವಿವಾದ ಸೃಷ್ಟಿಸಿದ್ದ ಮಾಜಿ ನಾಯಕ ಸಂಗಕ್ಕರ ಅವರ ಪ್ರಶ್ನೆಗೆ ಉತ್ತರವೆಂಬಂತೆ ಲಂಕೆಯ ಆಂಗ್ಲ ದೈನಿಕ ಡೇಲಿ ಮಿರರ್‌ನಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ಅರ್ಜುನ ರಣತುಂಗ, “2011ರ ಭಾರತದೆದುರು ಮುಂಬಯಿಯ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಏನು ನಡೆದಿತ್ತು ? ಆ ಬಗ್ಗೆ ಕ್ರೀಡಾಸಚಿವರು ತನಿಖೆ ನಡೆಸುವುದು ಒಳ್ಳೆಯದು’ ಎಂದು ಹೇಳುವ ಮೂಲಕ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಸಂಗಕ್ಕರ ನೇತೃತ್ವದ ಲಂಕಾ ತಂಡ 2011ರ ವಿಶ್ವಕಪ್ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿ 274 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಭಾರತ, ನಾಯಕ ಧೋನಿ ಅವರ ಅಜೇಯ 91 ಮತ್ತು ಗೌತಮ್ ಗಂಭೀರ್ ಅವರ 97ರನ್‌ಗಳ ನೆರವಿನಿಂದ ಪಂದ್ಯವನ್ನು ಗೆದ್ದು ವಿಶ್ವ ಕಪ್ಪನ್ನು ತನ್ನದಾಗಿಸಿಕೊಂಡಿತ್ತು.
2009ರಲ್ಲಿ ಲಂಕಾ ತಂಡ ಪಾಕ್ ಪ್ರವಾಸ ಕೈಗೊಳ್ಳಲು ಯಾರು ಕಾರಣ ಎಂಬ ಪ್ರಶ್ನೆಯನ್ನು ಸಂಗಕ್ಕರ ಅವರು ರಣತುಂಗ ಅವರನ್ನೇ ಗುರಿ ಇರಿಸಿ ಕೇಳಿದ್ದರು. ಪಾಕ್ ಕ್ರಿಕೆಟ್ ಪ್ರವಾಸದ ವೇಳೆ ಲಂಕಾ ತಂಡ ಪಯಣಿಸುತ್ತಿದ್ದ ಬಸ್ಸಿನ ಮೇಲೆ ಉಗ್ರರು ದಾಳಿ ನಡೆಸಿ ಆರು ಪಾಕ್ ಪೊಲೀಸರನ್ನು ಕೊಂದಿದ್ದರು ಮತ್ತು ಲಂಕಾ ತಂಡದ ಕೆಲವು ಆಟಗಾರರು ಗಾಯಗೊಂಡಿದ್ದರು.
ಇದಕ್ಕೆ ಉತ್ತರವೆಂಬಂತೆ ಸಂಗಕ್ಕರ ವಿರುದ್ಧ ರಣತುಂಗ ಇದೀಗ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಆರೋಪವನ್ನು ಮಾಡಿದ್ದಾರೆ.