ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮಗುವನ್ನು ಶನಿವಾರ ಕಣ್ತುಂಬಿಕೊಂಡ ನಟ ಅರ್ಜುನ್ ಸರ್ಜಾ ಹಾಗೂ ಕುಟುಂಬ ಮತ್ತೂಮ್ಮೆ ಚಿರು ಹುಟ್ಟಿಬಂದ ಎಂದು ಸಂತಸ ವ್ಯಕ್ತಪಡಿಸಿದೆ. ಮಗು ನೋಡಲು ಚೆನ್ನೈನಿಂದ ಆಗಮಿಸಿದ ಅರ್ಜುನ್ ಸರ್ಜಾ, ಆಸ್ಪತ್ರೆಗೆ ತೆರಳಿ ಮಗುವನ್ನು ಮುದ್ದಾಡಿ ಭಾವುಕರಾದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿರು ಹುಟ್ಟಿದ್ದಾಗಲೂ ನಾನು ಚೆನ್ನೈನಲ್ಲಿದ್ದೆ. ಚಿರು ಮಗು ಹುಟ್ಟುವಾಗಲೂ ಅಲ್ಲೇ ಇದ್ದೆ. ಬಹುಶಃ 20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡುತ್ತೇನೆ ಎಂದೆನಿಸುತ್ತಿದೆ. ಕೆಲವು ತಿಂಗಳ ಹಿಂದೆ ಕುಟುಂಬದಲ್ಲಿ ಅನಾಹುತವೊಂದು ನಡೆದು ಎಲ್ಲರೂ ನೋವಿನಲ್ಲಿದ್ದರು.ದೇವರೇ ಇಲ್ಲ, ಪೂಜೆ ಮಾಡಬಾರದು ಎಂಬ ಪರಿಸ್ಥಿತಿಗೆ ನಾವು ಬಂದಿದ್ದೆವು. ಆದರೆ, ಈಗ ಚಿರು ಮಗು ಮೂಲಕ ಮತ್ತೆ ಸಂತಸ ಹುಟ್ಟಿದೆ. ದೇವರು ಇದ್ದಾನೆ ಎನ್ನುವುದು ಸಾಬೀತಾಗಿದೆ.
ಆದರೆ, ಇದನ್ನು ನೋಡಲು ಚಿರು ಇಲ್ಲ ಎಂಬ ಬೇಸರವಿದೆ. ಈ ಬೇಸರದ ಮಧ್ಯೆ ಚಿರುನೇ ಮಗುವಾಗಿ ಬಂದುಬಿಟ್ಟ ಖುಷಿಯೂ ಇದೆ’ ಎಂದರು. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಕೂಡಾ ಚಿರು ಮಗುವನ್ನು ಮುದ್ದಾಡಿದ್ದಾರೆ.
…………………………………………………………………………………………………………………………………………………………………….
ಅಶ್ವ ಪ್ರಯೋಗ : ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರದ ಸಲುವಾಗಿ ಅದರ ಟೀಸರ್, ಪೋಸ್ಟರ್, ಮೇಕಿಂಗ್ ವಿಡಿಯೋ ತೋರಿಸುವುದು ಸಾಮಾನ್ಯ. ಆದರೆ “ಅಶ್ವ’ ಎಂಬಹೊಸಬರ ಚಿತ್ರತಂಡ, ತಮ್ಮ ಸಿನಿಮಾದ ಬಗ್ಗೆ ಹೇಳುವ ಸಲುವಾಗಿಯೇ ಬರೋಬ್ಬರಿ 25 ನಿಮಿಷದ ಪ್ರೀಮಿಯರ್ ಶೋ ರೀಲ್ ಬಿಡುಗಡೆ ಮಾಡಿದೆ. ಅಂದಹಾಗೆ, “ಅಶ್ವ’ ಚಿತ್ರತಂಡ ಇಂಥದ್ದೊಂದು ವಿಭಿನ್ನ ಕೆಲಸ ಮಾಡಿರುವುದಕ್ಕೂ ಬಲವಾದ ಕಾರಣವಿದೆ. ಅದೇನೆಂದರೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ “ಅಶ್ವ’ ಚಿತ್ರ ನಿರ್ಮಿಸುತ್ತಿದ್ದು, ಸಿನಿಮಾದಲ್ಲಿರುವ ಹೊಸ ಅಂಶಗಳನ್ನು ಹೇಳುವುದರ ಜೊತೆಗೆ, ನೋಡುಗರಿಗೆ ಸಿನಿಮಾದ ಮೇಲೆ ಒಂದಷ್ಟು ಭರವಸೆ ಮೂಡಿಸುವ ಸಲುವಾಗಿ ಚಿತ್ರತಂಡ ಈ ಪ್ರಯೋಗವನ್ನು ಮಾಡಿದೆಯಂತೆ.
ಎ.ಆರ್ ಸಾಯಿರಾಮ್ “ಅಶ್ವ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕೋಲಾರ ಕೇಶವ, ಹೇಮಲತಾ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಯುವ ನಟ ವಿವನ್.ಕೆ.ಕೆ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.