Advertisement

Puttur: ಬಿರುಕುಬಿಟ್ಟ ಅರಿಯಡ್ಕ ಹಿ.ಪ್ರಾ. ಶಾಲೆ ಕಟ್ಟಡ: ವಿದ್ಯಾರ್ಥಿಗಳ ಸ್ಥಳಾಂತರ

02:52 PM Jul 24, 2023 | Team Udayavani |

ಪುತ್ತೂರು: ಭಾರೀ ಮಳೆಗೆ ಅರಿಯಡ್ಕ ಸ.ಹಿ.ಪ್ರಾ. ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿರುವುದರಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ.

Advertisement

ಶತಮಾನಗಳ ಇತಿಹಾಸ ಹೊಂದಿರುವ ಅರಿಯಡ್ಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ತನಕದ ವಿದ್ಯಾರ್ಥಿಗಳಿದ್ದು ಒಂದೇ ಕಟ್ಟಡದಲ್ಲಿ 3-7ನೇ ತರಗತಿ ತನಕ ಕ್ಲಾಸ್‌ಗಳು ನಡೆಯುತ್ತಿದ್ದು, ಅದೇ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ಗೋಡೆ ಬಿರುಕು ಬಿಟ್ಟಿರುವ ಕಾರಣ ಕಟ್ಟಡದ ಮೇಲ್ಛಾವಣಿ, ಪಕ್ಕಾಸುಗಳು ಕುಸಿತಗೊಂಡಿದ್ದು, ಮುರಿದು ಬೀಳುವ ಹಂತದಲ್ಲಿದೆ.

ಜು. 23ರ ಭಾನುವಾರ ಈ ಘಟನೆ ನಡೆದಿದ್ದು, ಇಂದು ತರಗತಿಗೆ ವಿದ್ಯಾರ್ಥಿಗಳು ಬಂದಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೂ ಅವರಿಗೆ ಅಲ್ಲಿ ಬದಲಿ ವ್ಯವಸ್ಥೆಗೆ ಯಾವುದೇ ತರಗತಿ ಕೋಣೆಗಳು ಇಲ್ಲ. ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಇರಿಸಿ ಪಾಠ ಮಾಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಟ್ಟಡ ಶಿಥಿಲಗೊಂಡಿರುವ ಕಾರಣ ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.

Advertisement

ಶಾಸಕರಿಗೆ ತಿಳಿಸಲಾಗಿದೆ: ಎಸ್‌ಡಿಎಂಸಿ

ಕಟ್ಟಡ ಬಿರುಕು ಬಿಟ್ಟಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸದ್ಯ ತರಗತಿ ಕೋಣೆಗಳು ಇಲ್ಲದಿರುವುದರಿಂದ ಒಂದೇ ಹಾಲ್ ಮತ್ತು ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಇರಿಸಿ ಪಾಠ ಮಾಡಲಾಗುತ್ತಿದೆ.

ಘಟನೆಯ ಬಗ್ಗೆ ಶಾಸಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಇನ್ನುಳಿದ ಹಳೆ ಕಟ್ಟಡವೂ ಶಿಥಿಲಗೊಂಡಿದ್ದು, ಈ ಬಗ್ಗೆ ಈ ಹಿಂದೆಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ.

ಮೇಲ್ಛಾವಣಿ ದುರಸ್ಥಿಗೆ ಮಾತ್ರ ಅನುದಾನ ನೀಡಲಾಗಿದ್ದು, ಅದರಲ್ಲಿ ಮೇಲ್ಛಾವಣಿ ದುರಸ್ಥಿ ಮಾಡಲಾಗಿದೆ. ಕಟ್ಟಡದ ಗೋಡೆಗಳು ತುಂಬಾ ಹಳೆಯದಾಗಿರುವ ಕಾರಣ ಮಳೆಗೆ ಕುಸಿತವಾಗುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹನೀಫ್‌ರವರು ಮಾಹಿತಿ ನೀಡಿದ್ದಾರೆ.

ಕಟ್ಟಡ ಬಿರುಕು ಬಿಟ್ಟ ವಿಷಯ ತಿಳಿದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್‌ಪೂಜಾರಿ, ರಫೀಕ್ ದರ್ಖಾಸ್, ಮಹಮ್ಮದ್ ಬೊಳ್ಳಾಡಿ ಮೊದಲಾದವರು ಭೇಟಿ ನೀಡಿ ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next