ಅದೊಂದು ದಿನ, ಸಂಜೆಯ ಸಮಯ. ಸೂರ್ಯನ ಕೊನೆಯ ಕಿರಣಗಳು ಧರೆಗೆ ತಾಕುವ ಕಾಲ. ನಾನು ಮನೆಯ ಹೊರಗಿನ ಜಗಲಿಯ ಮೇಲೆ ಕುಳಿತು ಏನನ್ನೋ ಮೆಲುಕು ಹಾಕುತ್ತಿದ್ದೆ. ಅದೇನೋ ಆಶ್ಚರ್ಯ; ಬಾನಂಗಳದ ಸೌಂದರ್ಯವನ್ನು ಅನುಭವಿಸಬೇಕೆನಿಸಿತು. ಆಗಲೇ ಅಂಬರದೆಡೆಗೆ ಕಣ್ಣರಳಿಸಿ ನೋಡಿದೆ. ನನ್ನ ನಯನಗಳು ತಾವು ನೋಡುತ್ತಿದ್ದ ದೃಶ್ಯದಿಂದ ಒಂದು ಕ್ಷಣವೂ ಅತ್ತಿತ್ತ ಹೊರಳಲಿಲ್ಲ.
ನಾನು ಮೂಕವಿಸ್ಮಿತಳಾಗಿ ನೋಡಿದ್ದನ್ನೇ ನೋಡುತ್ತಾ ಮೈಮರೆತು ನಿಂತಿದ್ದೆ. ದಿನಪನ ಆ ಕಿರಣಗಳು ಕೊನೆಯದಾಗಿ ಭೂಮಿಗೆ ಸ್ಪರ್ಶಿಸಿ, ಮರೆಮಾಚುವ ಸಮಯ. ಸೂರ್ಯನ ಬೆಳಕನ್ನು ಬಳಸಿಕೊಂಡು ಶಶಿಯು ಗಾಢಾಂಧಕಾರವನ್ನು ಓಡಿಸುವ ಪರಿ. ಆ ಪ್ರಕೃತಿಯ ಸೌಂದರ್ಯವನ್ನು ಸವಿಯುವಂತೆ ಉಂಟಾಗುವ ಆನಂದವೇ ಬೇರೆ. ಎಷ್ಟೊಂದು ಸುಂದರ, ಎಷ್ಟು ರಮಣೀಯ ದೃಶ್ಯವದು. ಅದೇ ಸಮಯಕ್ಕೆ, ಹಕ್ಕಿಗಳ ಚಿಲಿಪಿಲಿ ನನ್ನ ಕರ್ಣಪಟಲಗಳನ್ನು ಸೇರಿತು. ಹಕ್ಕಿಗಳು ತಮ್ಮ ತಮ್ಮ ಸೂರುಗಳನ್ನು ಸೇರುವ ತವಕದಲ್ಲಿದ್ದವು.
ಎಷ್ಟು ಸುಂದರವಲ್ಲವೇ ನಮ್ಮ ಪ್ರಕೃತಿ, ಅದನ್ನು ನೋಡುವಾಗ ನನ್ನೀ ಮೂಕ ಮನಸ್ಸಿಗೆ ಏನೋ ಅನ್ನಿಸತೊಡಗಿತು. ಪ್ರಕೃತಿ ಎಷ್ಟು ನಿರಾಡಂಬರ. ಅದರ ಆ ನಿರಾಡಂಬರತೆಯಿಂದಲೇ ಅದರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಒಮ್ಮೊಮ್ಮೆ ಮನಸ್ಸು ಹೇಳುತ್ತದೆ; ನಾವೇಕೆ ಹೀಗೆ ಆಡಂಬರತೆ, ಐಶ್ವರ್ಯ, ದುಡ್ಡು, ಘನತೆಯನ್ನು ಆಶ್ರಯಿಸುತ್ತೇವೆ?
ನಾವು ಎಷ್ಟೇ ಶ್ರೀಮಂತರಾಗಿದ್ದರೂ, ಬಡವರಾಗಿದ್ದರೂ ನಾವು ಅವಲಂಬಿಸಿರುವುದು ಪ್ರಕೃತಿಯನ್ನೇ ತಾನೇ? ನಾವು ಎಷ್ಟೇ ಹಾರಾಡಿದರೂ, ಹೋರಾಡಿದರೂ ಕೊನೆಗೆ ಪ್ರಕೃತಿದೇವಿಯ ಪಾದಚರಣಗಳಡಿಯಲ್ಲಿ ಶರಣಾಗಲೇಬೇಕಲ್ಲವೇ? ಆದುದರಿಂದ ನಾವೂ ಸಾಧಾರಣವಾದ, ನಿರಾಡಂಬರ ಜೀವನದ ಪಯಣ ಆರಂಭಿಸಬಹುಲ್ಲವೇ..?
-ಎಂ. ವಿನಯಾ ನಾತು
ಮುಂಢಲ್ಸು, ತೆಳ್ಳಾರು