Advertisement

ನಾನಾ ಬೆಳೆ,ಭಲೇ ಆದಾಯ

06:20 AM Aug 14, 2017 | |

23 ರ ಹರೆಯದಲ್ಲಿ ಬ್ಯಾಟ್‌ ಹಿಡಿದು ಬಯಲಿನಲ್ಲಿ ಆಟ ಆಡುವ ವಯಸ್ಸಿನಲ್ಲಿ ಇವರು ಗುದ್ದಲಿ ಸೆನೆಕೆಗಳನ್ನು ಗಿಡಿದು ಗುಣಿ ತೆಗೆಯಲು ತೊಡಗಿದರು. 

Advertisement

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕೊಂಡಳ್ಳಿಯ ಬೀರಣ್ಣ ವೆಂಕಟ್ರಮಣ ನಾಯಕ ಅವರು ಬಗೆ ಬಗೆಯ ಬೆಳೆ ತೆಗೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬೋಳು ಗುಡ್ಡಗಳನ್ನು ಕೃಷಿಗೆ ಪಳಗಿಸಿಕೊಂಡು ಬುದ್ಧಿವಂತಿಕೆಯ ಬೆಳೆ ಹಂಚಿಕೆಯಿಂದ ಕೃಷಿಯಲ್ಲಿ ಗೆದ್ದಿದ್ದಾರೆ.

ಇವರು ಕೃಷಿಗಿಳಿದ ಕಥೆಯೂ ಆಸಕ್ತಿದಾಯಕವಾಗಿದೆ. ಇವರ ಗ್ರಾಮ, ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿದೆ. ಸಾರಿಗೆ ಸೌಕರ್ಯ ಕಡಿಮೆ ಇರುವ ಪ್ರದೇಶವಿದು. ಎರಡು ದಶಕಗಳ ಹಿಂದೆ ಈಗಿರುವ ಸೌಲಭ್ಯಗಳೂ ಇರಲಿಲ್ಲ. ತಮ್ಮ ಮಗನನ್ನು ಉತ್ತಮ ಉದ್ಯೋಗಕ್ಕೆ ಸೇರಿಸಬೇಕೆಂಬುದು ಇವರ ತಂದೆಯ ಕನಸು. ಇದಕ್ಕೋಸ್ಕರವೇ ಅಂಕೋಲ ಶಾಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಬಿ. ಎ. ಪದವಿ ಓದುತ್ತಿರುವಾಗ ಇವರ ಗಮನ ಸರಕಾರಿ ಉದ್ಯೋಗದ ಕಡೆಗಿತ್ತು.  ಒಂದೊಮ್ಮೆ ಪೊಲೀಸ್‌ ಇಲಾಖೆಯ ಉದ್ಯೋಗಕ್ಕೆ ಅರ್ಜಿ ಹಾಕಿದಾಗ ಸಣ್ಣ ಕೊರತೆಯ ಕಾರಣದಿಂದಾಗಿ ಇವರನ್ನು ಕಡೆಗಣಿಸಲಾಗಿತ್ತು. ಪದವಿ ಶಿಕ್ಷಣದ ಕೊನೆಯ ವರ್ಷದಲ್ಲಿದ್ದ ಇವರಿಗೆ ಅದು ಬಹಳ ನೋವನ್ನುಂಟು ಮಾಡಿತ್ತು. ನೊಂದುಕೊಂಡು ಉದ್ಯೋಗ ಅರಸುವ ಪ್ರಯತ್ನ ಮಾಡುವುದಿಲ್ಲ
ವೆಂದುಕೊಂಡು ಶಿಕ್ಷಣ ತ್ಯಜಿಸಿ ಮನೆಯೆಡೆಗೆ ಬಂದಿದ್ದರು. ಜಮೀನಿನಲ್ಲಿ ಭತ್ತದ ಹೊರತಾಗಿ ಬೇರೆ ಬೆಳೆ ಇರಲಿಲ್ಲ. ಆಗ 200 ಗೇರು ಗಿಡಗಳನ್ನು ತಂದು ನಾಟಿ ಮಾಡಿದರು. 23 ರ ಹರೆಯದಲ್ಲಿ ಬ್ಯಾಟ್‌ ಹಿಡಿದು ಬಯಲಿನಲ್ಲಿ ಆಟ ಆಡುವ ವಯಸ್ಸಿನಲ್ಲಿ ಇವರು ಗುದ್ದಲಿ ಸೆನೆಕೆಗಳನ್ನು ಗಿಡಿದು ಗುಣಿ ತೆಗೆಯಲು ತೊಡಗಿದರು. ಅಡ್ಡಿಪಡಿಸುತ್ತಿದ್ದ ಕುರುಚಲು ಗಿಡಗಳನ್ನು ಸವರಿದರು. ಕಸಿ ಗಿಡಗಳನ್ನು ಗುಣಿಯೊಳಗೆ ಕುಳ್ಳರಿಸಿ ನೀರೆರೆದು ಪೋಷಿಸಿದರು.

ಕೃಷಿಯಲ್ಲಿ ಏನಿದೆ?
ಇವರದು ಒಂಬತ್ತು ಎಕರೆ ಜಮೀನು. ಎರಡು ಎಕರೆಯಲ್ಲಿ ಭತ್ತ, ಒಂದು ಎಕರೆಯಲ್ಲಿ ಅಡಿಕೆ, ಕಾಲೆಕರೆ ಕಬ್ಬು, ಎರಡು ಎಕರೆಯಲ್ಲಿ ಮಾವು ಹಾಗೂ ಮೂರು ಎಕರೆಯಲ್ಲಿ  ಗೇರು ಕೃಷಿ ಮಾಡಿದ್ದಾರೆ. ಒಂದೆಕರೆಯಲ್ಲಿನ ಅಡಿಕೆ ಮರಗಳು ಫ‌ಸಲು ನೀಡುತ್ತಿವೆ.  300 ಗೇರು ಇಳುವರಿ ನೀಡುತ್ತಿದೆ. 300 ಬಾಳೆ, 200 ಕಾಳುಮೆಣಸು ಗಿಡಗಳಿವೆ. ಜಮೀನಿನ ಸುತ್ತಲೂ 40 ತೆಂಗಿನ ಮರಗಳಿದ್ದು ಕಾಯಿ ಕೊಯ್ಲಿಗೆ ಸಿಗುತ್ತಿದೆ. ರತ್ನಗಿರಿ, ಆಪೂಸು, ಮಲ್ಲಿಕಾ ಸೇರಿದಂತೆ 200 ಕ್ಕೂ ಅಧಿಕ ಮಾವಿನ ಗಿಡಗಳಿವೆ. ಮುಂದಿನ ವರ್ಷ ಫ‌ಸಲಿನ ನಿರೀಕ್ಷೆಯಲ್ಲಿದ್ದಾರೆ. ಹಲಸಿನ ಮರಗಳು ಕಾಯಿಗಳನ್ನು ಹೊತ್ತು ನಿಲ್ಲುತ್ತಿವೆ.

ಕಾಲೆಕರೆಯಲ್ಲಿ ಕಬ್ಬು ಬೆಳೆಯುವುದು ಬಹಳ ಹಿಂದಿನಿಂದಲೂ ಬೆಳೆಸಿಕೊಂಡು ಬಂದ ರೂಢಿ. ಫೆಬ್ರವರಿ ತಿಂಗಳಿನಲ್ಲಿ ಕಬ್ಬಿನ ಬೀಜಗಳನ್ನು ನಾಟಿ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿಯೇ ಕಬ್ಬು ಹತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದು ನಿಂತಿದೆ. ಕಬ್ಬಿನಿಂದ 50-60 ಡಬ್ಬಿ ಬೆಲ್ಲ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ. ಎರಡು ವರ್ಷಕ್ಕೊಮ್ಮೆ ಕಬ್ಬು ಬೆಳೆಯುವ ಸ್ಥಳ ಬದಲಾವಣೆ ರೂಢಿ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಕಬ್ಬಿನಿಂದ 50 ಡಬ್ಬಿಯಷ್ಟು ಬೆಲ್ಲ ದೊರತಿದೆ. ಪ್ರತಿ ಡಬ್ಬಿಗೆ 2,500ರಂತೆ ದರ ಸಿಕ್ಕಿದೆ. ಬೆಲ್ಲವನ್ನು ವ್ಯಾಪಾರಸ್ಥರಿಗೆ ಮಾರುವುದಿಲ್ಲ. ತಮ್ಮದೇ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದಾರೆ. ಅಂಕೋಲಾ ಪಟ್ಟಣದಲ್ಲಿರುವ ನೌಕರಸ್ಥರು ಇವರ ಖಾಯಂ ಗ್ರಾಹಕರು. ಪ್ರತೀ ವರ್ಷ ಅವರುಗಳ ಮನೆಗೆ ತಲುಪಿಸಿ ನಗದನ್ನು ಪಡೆದುಕೊಳ್ಳುತ್ತಾರೆ. 

Advertisement

ಈ  ಫೆಬ್ರವರಿಯಲ್ಲಿ 550 ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. ದಿನವೊಂದಕ್ಕೆ ಪ್ರತಿ ಗಿಡಕ್ಕೆ 15 ಲೀಟರ್‌ ನೀರು ಡ್ರಿಪ್‌ ಮೂಲಕ ಉಣಿಸುವುದು ರೂಢಿ. ಅಡಿಕೆಗೆ ಎರಡು ಅಡಿ ಘನ ಗಾತ್ರದ ಗುಂಡಿಯನ್ನು ತೆಗೆದು ನಾಟಿ ಮಾಡಿದ್ದಾರೆ. ಗುಂಡಿಯ ಮಣ್ಣನ್ನು ಪಕ್ಕದಲ್ಲಿ ರಾಶಿ ಹಾಕಿದ್ದು ಮುಂದೊಮ್ಮೆ ಬುಡಕ್ಕೆ ಮಣ್ಣು ಏರಿಸುವಾಗ ಬೇರೆಡೆಯಿಂದ ಮಣ್ಣು ತರದೆ, ಇದನ್ನೇ ಬಳಕೆ ಮಾಡಿಕೊಳ್ಳಬಹುದು ಎನ್ನುವ ಆಲೋಚನೆ ಇವರದು. ಪ್ರತಿ ಗಿಡಕ್ಕೆ ದಿನವೊಂದಕ್ಕೆ ಒಂದು ಲೀಟರ್‌ ಗೋಮೂತ್ರ ನೀರಿನೊಂದಿಗೆ ಸೇರಿಸಿ ಬಿಡುತ್ತಾರೆ. ‘ಗಿಡಗಳ ಹೊಳಪಿನ ಗುಟ್ಟು ಇದೇ ನೋಡಿ’ ಎನ್ನುತ್ತಾ ಅಡಿಕೆ ತೋಟ ಸುತ್ತು ಹಾಕಿಸಿದರು ಬೀರಣ್ಣ ನಾಯಕ.ನಾಟಿಗೆ ಬೇಕಾದ ಗಿಡಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಕಸಿಯ ಜಾಣ್ಮೆ ಇವರಲ್ಲಿ ಕರಗತವಾಗಿದೆ. 

ಹೈನುಗಾರಿಕೆಯಲ್ಲಿಯೂ ಮುಂದು:
ನಿರಂತರ ಆದಾಯ ಪಡೆಯುವ ಉತ್ಕಟ ಆಸಕ್ತಿ ಇವರದು. ಇದಕ್ಕಾಗಿ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೂರು ಜೆರ್ಸಿ, ನಾಲ್ಕು ಹೆಚ್‌. ಎಫ್ ತಳಿಯ ಆಕಳಿವೆ. ದಿನವೊಂದಕ್ಕೆ 50-60 ಲೀಟರ್‌ ಹಾಲು ಪಡೆಯುತ್ತಿದ್ದಾರೆ. ಹೈನು ರಾಸುಗಳಿಗೆ ಎದುರಾಗುವ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಮಾಡುವ ನೈಪುಣ್ಯತೆ ಇವರಲ್ಲಿದೆ. ಕೃತಕ ಗರ್ಭಧಾರಣೆಗೂ ವೈದ್ಯರನ್ನು ಅವಲಂಬಿಸುವುದಿಲ್ಲ. ಪ್ರತೀ ಲೀಟರ್‌ ಹಾಲಿಗೆ 30 ರೂ. ದರ ಸಿಗುತ್ತಿದೆ. ತಿಂಗಳಿಗೆ ಹೈನುಗಾರಿಕೆಯಿಂದಲೇ 30,000ರೂ. ಆದಾಯವಿದೆ. 15,000 ಖರ್ಚು ತಗುಲಿದರೂ ಅಷ್ಟೇ ಮೊತ್ತದ ಉಳಿಕೆಯಾಗುತ್ತಿದೆ. ಅಲ್ಲದೇ ಯತೇಚ್ಚ ಗೊಬ್ಬರ, ಗೋಮೂತ್ರ ದೊರಕುತ್ತಿದ್ದು ತೋಟಗಳಿಗೆ ಬಳಸಿಕೊಳ್ಳುತ್ತಾರೆ. ರಸಗೊಬ್ಬರದ ಅವಲಂಬನೆಯಿಂದ ಮುಕ್ತರಾಗಿದ್ದಾರೆ.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next