ಅಡಕೆಯಿಂದಲೇ ಗುಟ್ಕಾ ತರಾಗುವುದು. ಗುಟ್ಕಾ ಆರೋಗ್ಯಕ್ಕೆ ಹಾನಿಕರ. ಇದರಿಂದ ಕ್ಯಾನ್ಸರ್ ಬರುತ್ತದೆ- ಇದು ಅಡಕೆಗೆ ಅಂಟಿರುವ ಶಾಪದಂಥ ಮಾತು. ಆ ಹಣೆಪಟ್ಟಿಯನ್ನುಕಳಚಿಹಾಕಲು ತೀರ್ಥಹಳ್ಳಿಯ ಯುವಕ ನಿವೇದನ್ ನೆಂಪೆ ಮುಂದಾಗಿದ್ದಾನೆ. ಈ ಮೊದಲು ಅಡಕೆ ಟೀ, ಸ್ಯಾನಿಟೈಸರ್ ಆವಿಷ್ಕಾರ ಮಾಡಿದ್ದ ಆತ ಈಗ ಅಡಕೆಯಿಂದ ಶಾಂಪೂ ಉತ್ಪಾದನೆಗೆ ಮುಂದಾಗಿ, ಯಶ ಕಂಡಿದ್ದಾರೆ.
ಅಡಕೆಯಲ್ಲಿರುವ ಪ್ರೊಳೀನ್ ಎಂಬ ಅಮೈನೋ ಅಸಿಡ್ ಅನ್ನು ಬಳಸಿಕೊಂಡು ಶಾಂಪೂ ತಯಾರಿಸಲಾಗಿದೆ. ಈಗಾಗಲೆ ಶ್ಯಾಂಪೂ ಸಿದ್ಧವಾಗಿದ್ದು, ಲೈಸೆನ್ಸ್ ಕೂಡ ಲಭಿಸಿದೆ. ಅಡಕೆಯ ಬಣ್ಣವನ್ನೇ ಹೋಲುವ ಬಣ್ಣದ ಪ್ಯಾಕಿಂಗ್ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲ ಶ್ಯಾಂಪುಗಳುಕೂದಲಿಗೆ ಸೀಮಿತ. ಆದರೆ ನಿವೇದನ್ ನೆಂಪೆ ಅವರ ಪ್ರೊ ಅರೆಕಾ ಶ್ಯಾಂಪೂವನ್ನು ಹೇರ್ ಅಂಡ್ ಬಾಡಿ ಎರಡಕ್ಕೂ ಬಳಸಬಹುದಾಗಿದೆ. ಡಿಸೆಂಬರ್ ಹೊತ್ತಿಗೆ ಅರೇಕಾ ಶ್ಯಾಂಪೂ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಆರಂಭದಲ್ಲಿ ಸ್ಯಾಶೆ ರೂಪದಲ್ಲಿ ಶ್ಯಾಂಪೂ ಸಿಗಲಿದೆ. ನಂತರದ ದಿನಗಳಲ್ಲಿ ಇತರೆ ಶ್ಯಾಂಪುಗಳ ಹಾಗೆ ದೊಡ್ಡ ಬಾಟಲ್ ಗಳಲ್ಲೂ ಲಭ್ಯವಾಗಲಿದೆ ಎನ್ನುತ್ತಾರೆ ನಿವೇದನ್.
ಹೊಳೆದಿದ್ದು ಹೀಗೆ? : ಭಾರತದ ಮಾರುಕಟ್ಟೆಯಲ್ಲಿ ಚಿಲ್ಲರೆ ದರದಲ್ಲಿ ವಸ್ತುಗಳನ್ನು ಬಿಟ್ಟರೆ ಬೇಗ ಕ್ಲಿಕ್ ಆಗುತ್ತದೆ. ಅಡಕೆ ಟೀಗೆ ಕನಿಷ್ಠ75 ರೂ.ಕೊಡಬೇಕು. ಅಲ್ಲದೇ ಟೀಯನ್ನು ಸೀಮಿತ ವರ್ಗದ ಜನ ಮಾತ್ರ ಬಳಸುತ್ತಾರೆ. ಯಾವುದೇ ಉತ್ಪನ್ನಕ್ಕೆ10ರೂ.ಗಿಂತ ಹೆಚ್ಚು ದರವಿದ್ದಾಗ ಅದು ಹೆಚ್ಚು ಜನರ ಬಳಕೆಗೆ ಸಿಗುವುದಿಲ್ಲ. ಹೆಚ್ಚು ಜನ ಬಳಸುವ, ಕಡಿಮೆ ದರದಲ್ಲಿ ಲಭ್ಯವಾಗುವ ಪ್ರಾಡಕ್ಟ್ ಲಾಂಚ್ ಮಾಡಲು ತುಂಬಾ ಯೋಚನೆ ಮಾಡುತ್ತಿದ್ದೆ. ಆಗಲೇ ಶಾಂಪೂ ತಯಾರಿಕೆಯ ಐಡಿಯಾ ಬಂತು. ಈ ಶಾಂಪೂ ಖರೀದಿಸಿದವರು ಅದನ್ನು ತಲೆಗೆ ಹಚ್ಚದಿದ್ದರೂ ಪರವಾಗಿಲ್ಲ. ಬೈಕ್,ಕಾರು ತೊಳೆಯಲು ಬಳಸಿದರೂ ಸಾಕು, ರೈತರಿಗೆ ಅನುಕೂಲ ಮಾಡಿದಂತೆ ಎನ್ನುತ್ತಾರೆ ನಿವೇದನ್.
ಬೇಡಿಕೆ ಇರುತ್ತದೆ… : ಗುಟ್ಕಾಕ್ಕೆ ನಿಷೇಧ ಹೇರಿದರೆ ಅದರ ಬೆನ್ನಿಗೇ ಅಡಕೆಯ ಬೆಲೆಯೂ ಕುಸಿಯಬಹುದು. ಆಗ ಅಡಕೆ ಬೆಳೆಗಾರರುಕಷ್ಟಕ್ಕೆ ಸಿಲುಕಬಹುದು. ಹಾಗೆ ಆಗದಂತೆ, ಪರ್ಯಾಯ ವಸ್ತುಗಳ ಉತ್ಪಾದನೆಗೆಮುಂದಾಗಬೇಕು ಎಂಬ ಯೋಚನೆ ನನಗಿತ್ತು. ಅದರ ಫಲವಾಗಿ ಅರೇಕಾ ಟೀ ಮೂಡಿಬಂತು. ನಂತರ, ಅಡಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದೂ ಆಯಿತು. ಈಗ ಶಾಂಪೂಕೂಡ ತಯಾರಾಗಿದೆ. ಮುಂದೊಮ್ಮೆ ಗುಟ್ಕಾಕ್ಕೆ ನಿಷೇಧ ಹೇರಿದರೂ ಇತರೆ ಉತ್ಪನ್ನಗಳ ತಯಾರಿಕೆಗಾಗಿ ಅಡಕೆಗೆ ಬೇಡಿಕೆ ಇದ್ದೇ ಇರುತ್ತದೆ ಅನ್ನುವುದು ನಿವೇದನ್ ಮಾತು.
ಒಂದು ಪ್ಯಾಕ್‌ಗೆ 2 ರೂ. : ಒಂದು ಶಾಂಪೂ ಪ್ಯಾಕ್‌ಗೆ 2 ರೂ. ಫಿಕ್ಸ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೇರೆ ಶಾಂಪೂಗಳ ಬೆಲೆ 2 ರೂ.ಗಿಂತ ಕಡಿಮೆ ಇಲ್ಲ. ಭಾರತದಲ್ಲೇ ತಯಾರಾಗುವ ಶಾಂಪೂಗಳು ಬೆರಳೆಣಿಕೆ ಪ್ರಮಾಣದಲ್ಲಿವೆ. ಅಡಕೆ ಬೆಳೆಗಾರರು ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಇದು ತನ್ನದೇ ಪ್ರಾಡಕ್ಟ್ ಎಂಬ ಭಾವನೆ ಜೊತೆಯಾದರೆ, ಈ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸಾಧ್ಯವಾಗುತ್ತದೆ.
–ಶರತ್ ಭದ್ರಾವತಿ