Advertisement

ಅಡಿಕೆ, ಕಾಳುಮೆಣಸಿಗೆ ಕೊಳೆರೋಗ: ಸಮೀಕ್ಷೆ

09:20 AM Sep 07, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಅತಿವೃಷ್ಟಿಯಿಂದಾಗಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಕುರಿತು ಕೇಂದ್ರ/ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ನೇತೃತ್ವದ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆ ಆರಂಭಿಸಲಾಗಿದೆ. 

Advertisement

ತೋಟಗಾರಿಕಾ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ  19,400 ಹೆಕ್ಟೇರ್‌ ಅಡಿಕೆ ಹಾಗೂ 1,560 ಹೆಕ್ಟೇರ್‌ ಕಾಳು ಮೆಣಸು ಬೆಳೆಗಳಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಸುಳ್ಯ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಅಧಿಕವಾಗಿದೆ. 

ಹಾನಿ ವರದಿ ಸಲ್ಲಿಸುವಂತೆ ಆ.21ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಅದರಂತೆ ಕಂದಾಯ, ತೋಟಗಾರಿಕಾ ಇಲಾಖೆ ರೈತವಾರು, ಗ್ರಾಮವಾರು ಸಮೀಕ್ಷೆ ನಡೆಸಿ ವರದಿ ನೀಡಲು ದ.ಕ. ಜಿಲ್ಲಾಡಳಿತ ಸೂಚಿಸಿದೆ. ಈಗಾಗಲೇ ಜಂಟಿ ಸಮೀಕ್ಷೆ ಆರಂಭವಾಗಿದ್ದು, ಸೆ. 10ರೊಳಗೆ ಸಮೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಬಳಿಕ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಅಲ್ಲಿಂದ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ.

ಸಮೀಕ್ಷಾ ತಂಡದ ಕಾರ್ಯ
ಹೋಬಳಿ ಮಟ್ಟದಲ್ಲಿ ರಚಿಸಲಾದ ಸಮೀಕ್ಷಾ ತಂಡ ತೋಟಗಳಿಗೆ ಭೇಟಿ ನೀಡಿ ಹಾನಿಯ ಕುರಿತ ವರದಿ ಸಿದ್ಧಪಡಿಸಲಿದೆ. ಬೆಳೆ ಪ್ರದೇಶದ ವಿಸ್ತೀರ್ಣ, ತೋಟದ ನಿರ್ವಹಣೆ, ಇಳುವರಿ ಇತ್ಯಾದಿ ಪರಿಶೀಲಿಸಿ ಹಾನಿಯ ನಿಖರತೆ ಕಂಡುಕೊಳ್ಳಲಾಗುತ್ತದೆ. ಶೇ.50ಕ್ಕಿಂತ ಹೆಚ್ಚು ಅಥವಾ ಕಡಿಮೆ ಹಾನಿಯಾದ ತೋಟಗಳನ್ನು ತಂಡ ಪರಿಶೀಲಿಸಲಿದೆ. ತಾ.ಮಟ್ಟದಲ್ಲಿ ತಾಲೂಕು ತಹ ಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಳು, ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ತಂಡ ರಚಿಸಲಾಗಿದೆ. 

ಬೆಳೆ ಪರಿಹಾರ
ಶೇ.33ರಷ್ಟು ಅಡಿಕೆ ಕೊಳೆರೋಗ ಸಂಭವಿಸಿದ್ದರೆ 1 ಹೆಕ್ಟೇರ್‌ ಅಡಕೆ ತೋಟಕ್ಕೆ 18,000 ರೂ. ಪರಿಹಾರಕ್ಕೆ ಅವಕಾಶವಿದೆ. ಜತೆಗೆ ಕಾಳುಮೆಣಸು ಇದ್ದರೆ ಅದಕ್ಕೂ ಅಡಿಕೆ ಜತೆಗೇ ಪರಿಹಾರ ಸಿಗಲಿದೆ. ಒಂದು ವೇಳೆ ಪ್ರತ್ಯೇಕ ಕೃಷಿಯಾಗಿದ್ದರೆ ಅದಕ್ಕೂ ಇದೇ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತದೆ. ಜತೆಗೆ ಕೇಂದ್ರ ಹವಾಮಾನ ಆಧಾರಿತ ಬೆಳೆ ವಿಮೆ ಕೂಡ ಸಿಗಲಿದೆ. 

Advertisement

ಹೋಬಳಿ ಮಟ್ಟದ ಸಮೀಕ್ಷಾ ತಂಡ
1. ಸಹಾಯಕ ತೋಟಗಾರಿಕಾ ಅಧಿಕಾರಿಗಳು/ತೋಟಗಾರಿಕಾ ಸಹಾಯಕರು
2. ಕಂದಾಯ ನಿರೀಕ್ಷರು
3. ಗ್ರಾಮ ಲೆಕ್ಕಾಧಿಕಾರಿಗಳು/ಸಹಾಯಕರು
4. ಸಹಾಯಕ ಕೃಷಿ ಅಧಿಕಾರಿಗಳು 

ಗ್ರಾ.ಪಂ.ಗಳಿಗೆ ಅರ್ಜಿ ಸಲ್ಲಿಸಬಹುದು
ಅಡಿಕೆ ಕೊಳೆ ರೋಗ ಹಾಗೂ ಕಾಳುಮೆಣಸು ಕೊಳೆರೋಗದ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಕೊಳೆರೋಗದ ಸಮಸ್ಯೆ ಇರುವ ಬಗ್ಗೆ ಆಯಾಯಾ ಗ್ರಾಮ ಪಂಚಾಯತ್‌ನ ಗ್ರಾಮ ಕರಣಿಕರಿಗೆ, ತಾಲೂಕು ಕಚೇರಿಗೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಖುದ್ದಾಗಿ ಅರ್ಜಿ ಸಲ್ಲಿಸಬಹುದು. 
 ಎಚ್‌.ಆರ್‌.ನಾಯಕ್‌, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ.

* ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next