Advertisement
ಸಾಮಾನ್ಯವಾಗಿ 3 ತಿಂಗಳುಗಳಿಗಿಂತ ಹೆಚ್ಚು ದೀರ್ಘಕಾಲಾವಧಿಗೆ ನೋವು ಇದ್ದರೆ ದೀರ್ಘಕಾಲೀನ ನೋವು ಎನ್ನಬಹುದು; ಸರಾಸರಿ ಶೇ. 11ರಿಂದ 40 ಮಂದಿ ವಯಸ್ಕರು ಮತ್ತು ಪ್ರತೀ ಮೂವರು ಹಿರಿಯರಲ್ಲಿ ಒಬ್ಬರು ವೈದ್ಯರ ಬಳಿಗೆ ಧಾವಿಸುವುದಕ್ಕೆ ಈ ದೀರ್ಘಕಾಲೀನ ನೋವು ಕಾರಣವಾಗಿರುತ್ತದೆ.
Related Articles
Advertisement
ಹಾಗಾದರೆ ಶುಭ ಸುದ್ದಿಯೇನು? ಎಲ್ಲವೂ ಅಲ್ಲದಿದ್ದರೂ ಬಹುತೇಕ ದೀರ್ಘಕಾಲೀನ ನೋವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ ಅಥವಾ ಕಡಿಮೆ ಮಾಡಬಹುದಾಗಿದೆ.
ಬಹುತೇಕ ರೋಗಿಗಳಿಗೆ ಕ್ಷಿಪ್ರವಾಗಿ ಉಪಶಮನ ಉಂಟಾಗಬಹುದು. ಆದರೆ ಬಹುದೀರ್ಘಕಾಲದಿಂದ ಇರುವ ದೀರ್ಘಕಾಲೀನ ನೋವುಗಳಿಗೆ ಬಹುವಿಭಾಗೀಯ ಚಿಕಿತ್ಸಾಕ್ರಮ, ಹೆಚ್ಚು ಸಮಯ ಮತ್ತು ಬಹು ವಿಧ ಚಿಕಿತ್ಸೆಯಿಂದ ಪರಿಹಾರ ದೊರಕಿಸಲು ಸಾಧ್ಯ. ವರ್ಷಗಳಿಂದ ಇರುವ ನೋವು ರಾತ್ರಿ ಬೆಳಗಾಗುವುದರ ಒಳಗೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗದು; ಆದರೆ ತಾಳ್ಮೆಗೆ ಫಲ ಸಿಗದೆ ಇರದು.
ಇಂತಹ ಪ್ರಕರಣಗಳಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? ನೋವಿನ ತೀವ್ರತೆ, ರೋಗಿ ಅನುಭವಿಸುತ್ತಿರುವ ಅಗತ್ಯಗಳು, ಚಿಕಿತ್ಸೆ ಪಡೆದುಕೊಳ್ಳಲು ಮನಸ್ಸು, ನೋವಿನ ದೀರ್ಘಕಾಲೀನತೆ, ಕಾರಣಗಳು ಇತ್ಯಾದಿಗಳ ಆಧಾರದಲ್ಲಿ ಇಂತಹ ಪ್ರಕರಣಗಳಿಗೆ ಚಿಕಿತ್ಸೆಯನ್ನು ವ್ಯಕ್ತಿ ನಿರ್ದಿಷ್ಟವಾಗಿ ರೂಪಿಸಲಾಗುತ್ತದೆ. ಭಾರತದಲ್ಲಿ ಇರುವ ರೋಗಿಗಳು ಮತ್ತು ವೈದ್ಯರು ವೈದ್ಯಕೀಯ ಚಿಕಿತ್ಸೆಯ ಸಾಮಾನ್ಯ ವಿಧಿವಿಧಾನಗಳಾದ ಔಷಧಗಳು, ಇಂಟ್ರಾಮಸ್ಕಾಲಾರ್ ಇಂಜೆಕ್ಷನ್ ಗಳು, ಫಿಸಿಯೋಥೆರಪಿ ಮತ್ತು ಶಸ್ತ್ರಚಿಕಿತ್ಸೆಗಳು ಬಗ್ಗೆ ಮಾಹಿತಿ ಹೊಂದಿರುತ್ತಾರೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ “ಇಂಟರ್ ವೆನ್ಶನಲ್ ಪೈನ್ ಮೆಡಿಸಿನ್’ ಎಂಬ ಹೊಸ ವೈದ್ಯಕೀಯ ಕ್ಷೇತ್ರ ಜನಪ್ರಿಯವಾಗಿದೆ ಮತ್ತು ನಿಧಾನವಾಗಿ ಈಗ ಭಾರತದಲ್ಲೂ ನೆಲೆ ಕಂಡುಕೊಳ್ಳುತ್ತಿದೆ.
ಕೌಶಲಯುತ ಇಂಜೆಕ್ಷನ್ ಕಾರ್ಯವಿಧಾನಗಳ ಸಹಿತ ನೋವಿನ ವೈದ್ಯಕೀಯ ವಿಶ್ಲೇಷಣೆ ಮತ್ತು ಚಿಕಿತ್ಸೆಗಾಗಿಯೇ ವಿಶೇಷ ತರಬೇತಿಯುಳ್ಳ ಕ್ಷೇತ್ರ ಇದು. ನೋವಿಗೆ ಕಾರಣವಾಗುವ ವಿವಿಧ ಅನಾರೋಗ್ಯಗಳಿಗೆ ಚಿಕಿತ್ಸೆಯಾಗಿ ಶಸ್ತ್ರಚಿಕಿತ್ಸೇತರ, “ಕನಿಷ್ಠ ಗಾಯವನ್ನು ಉಂಟುಮಾಡುವ’ (ಅಂದರೆ, ಇಂಜೆಕ್ಷನ್ ನೀಡುವುದು ಮಾತ್ರ, ಔಷಧ ನೀಡಲು ಇಂಜೆಕ್ಷನ್ ಸೂಜಿ ಮಾತ್ರ ದೇಹವನ್ನು ಪ್ರವೇಶಿಸುತ್ತದೆ), ಗುರಿನಿರ್ದೇಶಿತ (ಅಂದರೆ, ತೊಂದರೆಗೆ ಈಡಾಗಿರುವ ದೇಹಭಾಗಕ್ಕೆ ನೇರವಾಗಿ ಇಂಜೆಕ್ಷನ್ ನೀಡುವುದು), “ಇಮೇಜ್ ಗೈಡೆಡ್’ (ಇಂಜೆಕ್ಷನ್ ನೀಡುವ ವೇಳೆ ದೇಹದ ಒಳಸಂರಚನೆಗಳನ್ನು ವೀಕ್ಷಿಸಲು ಎಕ್ಸ್‌ರೇ ಅಥವಾ ಅಲ್ಟ್ರಾಸೌಂಡ್ ಯಂತ್ರಗಳನ್ನು ಬಳಸಿಕೊಳ್ಳುವುದು) ಇಂಜೆಕ್ಷನ್ ತಂತ್ರಜ್ಞಾನವನ್ನು ಉಪಯೋಗಿಸುವುದನ್ನು ಪೈನ್ ಮೆಡಿಸಿನ್ ಮತ್ತು ಔಷಧ ನೀಡುವಿಕೆ ಒಳಗೊಂಡಿರುತ್ತದೆ.
ಇದು ಹೇಗೆ ಭಿನ್ನ? ಉದಾಹರಣೆಗೆ, ಬೆನ್ನುನೋವಿಗೆ ಸಾಮಾನ್ಯವಾಗಿ ಸೊಂಟ ಅಥವಾ ಭುಜಭಾಗದಲ್ಲಿ ಇಂಜೆಕ್ಷನ್ ನೀಡಲಾಗುತ್ತದೆ. ಇವು ದೇಹವು ಹೀರಿಕೊಂಡು, ರಕ್ತದ ಮೂಲಕ ದೇಹಾದ್ಯಂತ ಪರಿಚಲನೆಗೊಂಡು, ಬೆನ್ನಿನ ಭಾಗದಲ್ಲಿ ನೋವನ್ನು ಕಡಿಮೆ ಮಾಡುವ ಕಾರ್ಯವೆಸಗುವಂತೆ ವಿನ್ಯಾಸಗೊಂಡಿರುತ್ತವೆ.
ಇದರೆ ನೋವಿನ ರೋಗಶಾಸ್ತ್ರೀಯತೆಯನ್ನು ವಿಶ್ಲೇಷಿಸಿ, ರೋಗ ಕಾರಣ ಮತ್ತು ಪತ್ತೆಯನ್ನು ವಿವಿಧ ಇಂಜೆಕ್ಷನ್ ತಂತ್ರಗಳ ಮೂಲಕ ಖಚಿತಪಡಿಸಿಕೊಂಡು ಆ ಬಳಿಕ ಬೆನ್ನಿನಲ್ಲಿ “ನೋವನ್ನು ಉತ್ಪಾದಿಸುವ’ ಅಂಗಾಂಶಕ್ಕೇನೇ ಔಷಧಗಳನ್ನು ಚುಚ್ಚುವಂತೆ ಇಂಟರ್‌ವೆನ್ಶನಲ್ ಟಾರ್ಗೆಟೆಡ್ ಇಂಜೆಕ್ಷನ್‌ಗಳನ್ನು ರೂಪಿಸಲಾಗಿರುತ್ತದೆ. ಹೀಗಾಗಿ ನೋವನ್ನು ಅನುಭವಿಸುತ್ತಿರುವ ಯಾವುದೇ ರೋಗಿಗೆ ತಪಾಸಣೆಯ ಒಂದು ಹೆಜ್ಜೆಯಾಗಿಯೂ ಪೈನ್ ಮೆಡಿಸಿನ್ ಉಪಯೋಗಕಾರಿಯಾಗಿದೆ.
ಅಂದರೆ ಅಗತ್ಯಬಿದ್ದಾಗ ಇತರ ವಿಭಾಗಗಳಿಗೆ ಚಿಕಿತ್ಸೆಗಾಗಿ ಶಿಫಾರಸು ಮಾಡುವುದಕ್ಕೆ ಕೂಡ ಪೈನ್ ಮೆಡಿಸಿನ್ ನೆರವಾಗುತ್ತದೆ ಅಥವಾ ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಗೆ ಪೂರ್ವಭಾವಿಯಾದ ಒಂದು ಹಂತವಾಗಿ ಅಥವಾ ಇತರ ಚಿಕಿತ್ಸೆಗಳು ಯಾ ಶಸ್ತ್ರಚಿಕಿತ್ಸೆಗಳು ಪರಿಣಾಮಕಾರಿಯಾಗದ ಕೆಲವು ಪ್ರಕರಣಗಳಲ್ಲಿ ಚಿಕಿತ್ಸೋತ್ತರ ಹಂತವಾಗಿಯೂ ಪೈನ್ ಮೆಡಿಸಿನ್ ಪ್ರಯೋಜನಕಾರಿಯಾಗಿದೆ.
ಯಾರಿಗೆ ಪ್ರಯೋಜನವಾಗಬಲ್ಲುದು? ಕೆಳಬೆನ್ನು ನೋವು, ಕುತ್ತಿಗೆ ನೋವು, ಸಿಯಾಟಿಕಾ, ಆಸ್ಟಿಯೊಆರ್ಥೈಟಿಸ್ ಮೊಣಗಂಟು, ಟೆನಿಸ್ ಎಲ್ಬೊ, ಕಾಪೆìಲ್ ಟನೆಲ್ ಸಿಂಡ್ರೋಮ್, ಭುಜದ ಪೆಡಸುತನ, ಡಿ ಕ್ವಿರ್ವೈನ್ಸ್ ಟೆನೊಸಿನೊವೈಟಿಸ್, ಕ್ಯಾನ್ಸರ್ ನೋವುಗಳು, ವಿವಿಧ ನ್ಯುರಾಲ್ಜಿಯಾಗಳು, ಪೋಸ್ಟ್ ಹರ್ಪಿಸ್ ನ್ಯುರೈಟಿಸ್, ಕೊಕ್ಸಿಡೈನಿಯಾ (ಟೈಲ್ ಬೋನ್), ಪ್ಲಾಂಟರ್ ಫೇಸೈಟಿಸ್, ಅಸಾಮಾನ್ಯ ತಲೆನೋವುಗಳು, ಸ್ಪೇಸ್ಟಿಸಿಟಿ, ಫ್ಯಾಂಟಮ್ ನೋವಿನ ಸಹಿತ ಶಸ್ತ್ರಚಿಕಿತ್ಸೆಯ ಅಥವಾ ಅವಘಡ-ಗಾಯದ ಬಳಿಕದ ಎಲ್ಲ ನೋವುಗಳಿಂದ ಬಳಲುತ್ತಿರುವವರಿಗೆ ಪೈನ್ ಮೆಡಿಸಿನ್ ಪ್ರಯೋಜನಕಾರಿಯಾಗಿದೆ.
ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದರೂ ನಡೆಸಲಾಗದ ರೋಗಿಗಳಿಗೆ ಅಥವಾ ಶಸ್ತ್ರಚಿಕಿತ್ಸೆಗೆ ಒಪ್ಪದವರಿಗೆ ತೃಪ್ತಿದಾಯಕವಾದ, ನೋವನ್ನು ಉಪಶಮನಗೊಳಿಸುವುದು ಸಾಬೀತಾಗಿರುವ ಚಿಕಿತ್ಸಾಕ್ರಮ ಇಂಟರ್ ವೆನ್ಶನಲ್ ಪೈನ್ ಮೆಡಿಸಿನ್ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕ್ಯಾನ್ಸರ್ ನೋವಿನ ಸಹಿತ ವಿವಿಧ ದೀರ್ಘಕಾಲೀನ ನೋವುಗಳು ಅನೇಕ ಕಾರಣಗಳಿಂದ ಉಂಟಾಗಬಹುದಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ತಾಳ್ಮೆ, ಆರೈಕೆ ಮತ್ತು ವಿಶೇಷ ಕಾರ್ಯವಿಧಾನದ ಮೂಲಕ ಅದನ್ನು ಕಡಿಮೆ ಮಾಡಬಹುದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ “ನೋವಿನ ಏಣಿ’ ಮತ್ತು ಅದಕ್ಕಿಂತ ಆಚೆಗೆ ಇದು ಒಂದು ಹಂತ ಹಂತವಾದ ಪ್ರಕ್ರಿಯೆಯಾಗಿದೆ. ದೀರ್ಘಕಾಲೀನ ನೋವು ಹೊಂದಿರುವ ರೋಗಿಗಳು ಇಂಟರ್‌ವೆನ್ಶನಲ್ ಪೈನ್ ಮೆಡಿಸಿನ್ ಮೂಲಕ ಪರಿಹಾರ ಪಡೆಯಬಹುದು ಮತ್ತು ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದಾಗಿದೆ.
ಡಾ| ಗೌರವ್ ಗೊಮೆಜ್ ಇಂಟರ್ವೆನ್ಶನಲ್ ಪೈನ್ ಮೆಡಿಸಿನ್ ಮತ್ತು ನ್ಯುರೊರಿಹ್ಯಾಬಿಲಿಟೇಶನ್ ಕೆಎಂಸಿ ಆಸ್ಪತ್ರೆ, ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟಿವ್ ಕೇರ್ ವಿಭಾಗ, ಕೆಎಂಸಿ, ಮಂಗಳೂರು