ನಾಳೆ ಬೆಳಿಗ್ಗೆ ಮದುವೆ. ಎಲ್ಲ ತಯಾರಿಯೂ ನಡೆದಿದೆ. ಹುಡುಗಿ, ತನ್ನ ಬದುಕಿನ ಅತ್ಯಂತ ಖುಷಿಯ ಕ್ಷಣಕ್ಕೆ ಅಣಿಯಾಗುತ್ತಿದ್ದಾಳೆ. ಆಗ ವಿಷಯ ತಿಳಿಯುತ್ತದೆ; ಮದುವೆಯಾಗಲಿರುವ ಹುಡುಗ ಒಳ್ಳೆಯವನಲ್ಲ, ಇನ್ನೊಬ್ಬ ಹುಡುಗಿಯೊಂದಿಗೆ ಆತನಿಗೆ ಸಂಬಂಧವಿದೆ ಅಂತ! ಆ ಕ್ಷಣದಲ್ಲಿ ಮದುಮಗಳ ಪ್ರತಿಕ್ರಿಯೆ ಹೇಗಿರಬಹುದು? ಆಕೆ ಸೀದಾ ಹುಡುಗನ ಬಳಿ ಹೋಗಿ, ಅವನ ಕೆನ್ನೆಗೆ ಬಾರಿಸಬಹುದು ಅಥವಾ ದೊಡ್ಡದಾಗಿ ಗಲಾಟೆ ಮಾಡಿ ತಕ್ಷಣವೇ ಮದುವೆ ನಿಲ್ಲಿಸಬಹುದು. ಯಾರೇ ಆದರೂ ಹೀಗೆಯೇ ಮಾಡುತ್ತಾರೆ. ಆದರೆ, ಇಲ್ಲೊಬ್ಬಳು ಯುವತಿ ಮೋಸ ಮಾಡಿದ ಹುಡುಗನ ವಿರುದ್ಧ ಹ್ಯಾಗೆ ಪ್ರತೀಕಾರ ತೀರಿಸಿಕೊಂಡಿದ್ದಾಳೆ ಗೊತ್ತಾ?
ಆಸ್ಟ್ರೇಲಿಯಾದ ಕೇಸಿಯ ಮೊಬೈಲ್‌ಗೆ, ಮದುವೆಯ ಹಿಂದಿನ ರಾತ್ರಿ, ಅಪರಿಚಿತರಿಂದ ಮೆಸೇಜ್ ಬರುತ್ತದೆ. ಅದರಲ್ಲಿ, “ನೀನು ಮದುವೆಯಾಗುವ ಹುಡುಗ ಅಲೆಕ್ಸ್ ಸರಿಯಿಲ್ಲ. ಬೇರೆ ಹುಡುಗಿಯ ಜೊತೆಗೆ ಸಂಬಂಧದಲ್ಲಿದ್ದಾನೆ’ ಅಂತ ಬರೆದಿರುತ್ತದೆ. ಜೊತೆಗೆ, ಬೇರೊಬ್ಬ ಹುಡುಗಿಗೆ ಅಲೆಕ್ಸ್ ಕಳಿಸಿರುವ ಮೆಸೇಜ್‌ಗಳ ಸ್ಕ್ರೀನ್‌ಶಾಟ್ ಕೂಡಾ ಇರುತ್ತದೆ. ಅದನ್ನು ಓದಿದ ಕೇಸಿಗೆ ಆಘಾತವಾಗುತ್ತದೆ. ತಕ್ಷಣವೇ, ಎಲ್ಲರಿಗೂ ಹೇಳಿ ಮದುವೆ ನಿಲ್ಲಿಸಬೇಕು ಅಂತ ಅನ್ನಿಸಿದರೂ, ಅವಳು ತಾಳ್ಮೆ ವಹಿಸುತ್ತಾಳೆ.
ರಾತ್ರಿಯಿಡೀ ಯೋಚಿಸಿ, ಪ್ರತೀಕಾರಕ್ಕೆ ಸಿದ್ಧಳಾದ ಕೇಸಿ, ಮಾರನೆದಿನ ಬೆಳಗ್ಗೆ ಶೃಂಗರಿಸಿಕೊಂಡು, ನಾಚುತ್ತಾ ಮದುವೆ ಹಾಲ್‌ಗೆ ಬರುತ್ತಾಳೆ. ಅಲ್ಲಿ ಎಲ್ಲರೂ ಅವಳಿಗಾಗಿ ಕಾದಿರುತ್ತಾರೆ. ಅವರ ಸಂಪ್ರದಾಯದ ಪ್ರಕಾರ, ವಧು-ವರರಿಬ್ಬರೂ ಪ್ರತಿಜ್ಞೆಗಳನ್ನು (vows) ಓದಿ ಅಂತ ಹೇಳಿದಾಗ, ಕೇಸಿ ಓದಿದ್ದು ಅಲೆಕ್ಸ್, ಬೇರೊಂದು ಹುಡುಗಿಗೆ ಕಳಿಸಿದ ಮೆಸೇಜ್‌ಗಳನ್ನು! ನೆರೆದಿದ್ದವರೆಲ್ಲರಿಗೂ ದಿಗ್ಭ್ರಮೆ. ಸುಳ್ಳು ಹೇಳಿ, ಸಮಜಾಯಿಷಿ ನೀಡಿ ನಂಬಿಸುವ ಅವಕಾಶವೇ ಅಲೆಕ್ಸ್‌ಗೆ ಸಿಗಲಿಲ್ಲ!
ಅವನ ಮುಖವಾಡವನ್ನು ಎಲ್ಲರೆದುರು ಬಯಲು ಮಾಡಲೆಂದೇ ಹೀಗೆ ಮಾಡಿದೆ ಅಂದಿರುವ ಕೇಸಿ, ಗೆಳತಿಯರ ಜೊತೆಗೆ ಖುಷಿಯಿಂದಲೇ ರಿಸೆಪ್ಷನ್ ಆಚರಿಸಿದ್ದಾರಂತೆ!