ಬೆಂಗಳೂರು: ಸಂಪೂರ್ಣ ಸಾಲ ಮನ್ನಾಗೆ ನಮ್ಮ ಒತ್ತಾಯ ಎಂದು ಹೇಳುತ್ತಿದ್ದ ಬಿಜೆಪಿ ಮೆತ್ತಗಾದಂತೆ ಕಾಣುತ್ತಿದೆ.
ಸಂಪೂರ್ಣ ಸಾಲ ಮನ್ನಾ ರಾಗ ಬದಲಾಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಗಾಗಲೇ ಘೋಷಿಸಿರುವಂತೆ ಸಹಕಾರ ಸಂಘಗಳ 1 ಲಕ್ಷ ರೂ.ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಎರಡು ಲಕ್ಷ ರೂ. ಚಾಲ್ತಿ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಸಾಲ ಮನ್ನಾ ಅಲ್ಲದಿದ್ದರೂ ಈಗಾಗಲೇ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ತಿಳಿಸಿರುವಂತೆ ಸಾಲ ಮನ್ನಾ ಮಾಡಿ ಆ ಮೊತ್ತ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಗೆ ಜಮೆ ಮಾಡಿ ರೈತರಿಗೆ ಹೊಸ ಸಾಲ ದೊರಕುವಂತೆ ಮಾಡಲಿ ಎಂದು ಒತ್ತಾಯಿಸಿದರು.
ಜೆಡಿಎಸ್ ಸುಳ್ಳು ಭರವಸೆ ನೀಡಿ 37 ಸ್ಥಾನ ಪಡೆದಿದೆ. ಇಲ್ಲದಿದ್ದರೆ ಅವರಿಗೆ 20 ಸ್ಥಾನ ಸಹ ಬರುತ್ತಿರಲಿಲ್ಲ. ಅವರು ಹೇಳಿದಂತೆ ನಡೆದುಕೊಳ್ಳಲಿ. ಮೀನುಗಾರರು, ಸ್ತ್ರೀ ಶಕ್ತಿ ಸಂಘಗಳು, ನೇಕಾರರ ಸಾಲ ಸಹ ಮನ್ನಾ ಮಾಡಲಿ. ಹಿರಿಯ ನಾಯಕರಿಗೆ, ಗರ್ಭಿಣಿಯರಿಗೆ, ಬಡ ಮಹಿಳೆಯರಿಗೆ ನುಡಿದಂತೆ ಮಾಸಾಶನ ನೀಡಲಿ. ಇಲ್ಲದಿದ್ದರೆ ನಾವು ಜನತಾ ನ್ಯಾಯಾಲಯದ ಮುಂದೆ ಹೋದಾಗ ಇವರ ಸುಳ್ಳು ಭರವಸೆ ಹೇಳುತ್ತೇವೆ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ವಿಚಾರ ಹೆಚ್ಚು ಬೆಳೆಸುವುದು ಬೇಡ. ಬಿಜೆಪಿ ಸಹ ಒಂದು ಲಕ್ಷ ರೂ.ವರೆಗೆ ಮಾತ್ರ ಸಾಲ ಮನ್ನಾ ಘೋಷಿಸಿತ್ತು. ಹೀಗಾಗಿ, ಸಾಲ ಮನ್ನಾ ಈಗಾಗಲೇ ಘೋಷಿಸಿರುವುದನ್ನು ಶೀಘ್ರ ಜಾರಿಗೆ ಒತ್ತಡ ಹೇರೋಣ ಎಂದು ಬಿಜೆಪಿ ಪ್ರಮುಖ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಲುವು ತಾಳಲಾಗಿದೆ.
ರೈತರ ಸಾಲ ಮನ್ನಾ ವಿಚಾರದಲ್ಲಿ ಸಮಾಧಾನ ವ್ಯಕ್ತಪಡಿಸಿ ಮೀನುಗಾರರ, ಸ್ತ್ರೀಶಕ್ತಿ ಸಂಘಗಳ ಹಾಗೂ ನೇಕಾರರ ಸಾಲ ಮನ್ನಾಗೆ ಪಟ್ಟು ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇದರ ಹಿಂದಿನ ತಂತ್ರವಾಗಿದೆ ಎಂದು ಹೇಳಲಾಗಿದೆ.
ಬಡ ಮಹಿಳೆಯರು, ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಜೆಡಿಎಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಸಾಶನ ನೀಡಿಲ್ಲ. ಈ ವಿಚಾರವನ್ನು ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರಸ್ತಾಪಿಸಿ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ.