Advertisement

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

09:22 PM Sep 27, 2020 | Suhan S |

ಪ್ರತೀ ವರ್ಷ ಸೆಪ್ಟಂಬರ್‌ 28ನ್ನು ಜಗತ್ತಿನಾದ್ಯಂತ ರೇಬಿಸ್‌ ದಿನವನ್ನಾಗಿ ಆಚರಿಸಲಾಗುತ್ತದೆ. ರೇಬಿಸ್‌ ಅಥವಾ ಹುಚ್ಚುನಾಯಿ ರೋಗದ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸಿ ಅದನ್ನು ತಡೆಯಲು ಮತ್ತು ನಿಯಂತ್ರಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ಜಾಗತಿಕವಾಗಿ ಅನುಷ್ಠಾನಕ್ಕೆ ತರುವುದು ಈ ದಿನಾಚರಣೆಯ ಉದ್ದೇಶವಾಗಿದೆ. “ರೇಬಿಸ್‌ ಕೊನೆಗೊಳಿಸಿ: ಸಂಘಟಿತರಾಗೋಣ, ಲಸಿಕೆ ಹಾಕಿಸಿಕೊಳ್ಳೋಣ’ ಎಂಬುದು ಈ ವರ್ಷದ, 14ನೆಯ ವಿಶ್ವ ರೇಬಿಸ್‌ ದಿನದ ಧ್ಯೇಯವಾಕ್ಯ. ಈ ದಿನ ರೇಬಿಸ್‌ ಕಾಯಿಲೆಯ ವಿರುದ್ಧ ಮೊತ್ತಮೊದಲ ಲಸಿಕೆಯನ್ನು ಆವಿಷ್ಕರಿಸಿದ ಫ್ರೆಂಚ್‌ ರಸಾಯನಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿಶಾಸ್ತ್ರಜ್ಞ ಲೂಯಿ ಪ್ಯಾಶ್ಚರ್‌ ಅವರು ನಿಧನ ಹೊಂದಿದ ದಿನವೂ ಹೌದು. ಪ್ರತೀ ವರ್ಷ ಜಾಗತಿಕವಾಗಿ 55 ಸಾವಿರಕ್ಕೂ ಅಧಿಕ ಮಂದಿ ರೇಬಿಸ್‌ ಕಾಯಿಲೆಯಿಂದಾಗಿ ಮರಣಿಸುತ್ತಿದ್ದು, ಇವರಲ್ಲಿ ಬಹುತೇಕರು ಸೋಂಕುಪೀಡಿತ ನಾಯಿಯ ಕಡಿತದಿಂದಾಗಿ ರೋಗಕ್ಕೆ ತುತ್ತಾಗುತ್ತಾರೆ. ಸೋಂಕುಪೀಡಿತ ನಾಯಿಯಿಂದ ಕಚ್ಚಿಸಿಕೊಳ್ಳುವವರಲ್ಲಿ ಶೇ.40ರಷ್ಟು ಮಂದಿ 15 ವರ್ಷ ವಯಸ್ಸಿಗಿಂತ ಕೆಳಗಿನವರು.

Advertisement

ರೇಬಿಸ್‌ ಅಂದರೇನು? :  ರೇಬಿಸ್‌ ಎಂಬುದು ತಡೆಗಟ್ಟಬಹುದಾದ ಒಂದು ವೈರಾಣು ಕಾಯಿಲೆ. ರೇಬಿಸ್‌ ವೈರಾಣುಗಳು ಸಸ್ತನಿಗಳ ಕೇಂದ್ರೀಯ ನರವ್ಯವಸ್ಥೆಯ ಮೇಲೆ ಹಾನಿ ಉಂಟು ಮಾಡುತ್ತವೆ. ಸೋಂಕುಪೀಡಿತ ಪ್ರಾಣಿಯ ಕಡಿತದ ಮೂಲಕ ಸಾಮಾನ್ಯವಾಗಿ ಈ ಕಾಯಿಲೆ ಹರಡುತ್ತದೆ.

ರೇಬಿಸ್‌ ಹರಡುವುದು ಹೇಗೆ? : ರೇಬಿಸ್‌ ವೈರಾಣುಗಳು ಸೋಂಕುಪೀಡಿತ ಪ್ರಾಣಿಯ ಜೊಲ್ಲಿನಲ್ಲಿ ಇರುತ್ತವೆ. ಸೋಂಕುಪೀಡಿತ ಪ್ರಾಣಿಯು ಇತರ ಪ್ರಾಣಿಗಳು/ ಮನುಷ್ಯರನ್ನು ಕಚ್ಚಿದಾಗ ಉಂಟಾಗುವ ಗಾಯದ ಮೂಲಕ ಅವರ ದೇಹವನ್ನು ಪ್ರವೇಶಿಸುತ್ತವೆ. ರೇಬಿಸ್‌ ವೈರಾಣುಗಳು ಆರೋಗ್ಯವಂತ ಪ್ರಾಣಿ/ ಮನುಷ್ಯರ ದೇಹವನ್ನು ಪ್ರವೇಶಿಸಿದ ಬಳಿಕ ನರವ್ಯವಸ್ಥೆಯ ಮೂಲಕ ಮಿದುಳಿನತ್ತ ಪ್ರಯಾಣಿಸುತ್ತವೆ. ಅವು ಮೆದುಳನ್ನು ಪ್ರವೇಶಿಸಿದ ಬಳಿಕ ವಂಶವೃದ್ಧಿಗೊಳಿಸಿಕೊಂಡು ರೋಗಿಯಲ್ಲಿ ರೋಗದ ಲಕ್ಷಣಗಳನ್ನು ಉಂಟು ಮಾಡುತ್ತವೆ.

ರೇಬಿಸ್‌ ಎಷ್ಟು ಗಂಭೀರವಾದ ಕಾಯಿಲೆ? : ಚಿಕಿತ್ಸೆ ಒದಗಿಸದೆ ಇದ್ದರೆ ರೇಬಿಸ್‌ ಮಾರಣಾಂತಿಕವಾದ ಕಾಯಿಲೆಯಾಗಿದೆ. ರೇಬಿಸ್‌ ವೈರಾಣುಗಳು ಸೋಂಕುಪೀಡಿತ ಪ್ರಾಣಿಯ ಕಡಿತದಿಂದ ಉಂಟಾಗುವ ಗಾಯದ ಮೂಲಕ ಹರಡುತ್ತವೆ. ಇವು ಸ್ನಾಯುಗಳನ್ನು ಪ್ರವೇಶಿಸಿದ ಬಳಿಕ ವೃದ್ಧಿಗೊಂಡು ನರಗಳನ್ನು ಪ್ರವೇಶಿಸುತ್ತವೆ. ಆ ಬಳಿಕ ಅಂತಿಮವಾಗಿ ಮೆದುಳಿನಲ್ಲಿ ರೋಗವನ್ನು ಉಂಟುಮಾಡಿ ಮೃತ್ಯುವಿಗೆ ಕಾರಣವಾಗುತ್ತವೆ. ಸಾಕುನಾಯಿಗಳಲ್ಲಿ ರೇಬಿಸ್‌ ವೈರಾಣುಗಳು ಇರುವುದು ಬಹುಸಾಮಾನ್ಯ. ರೇಬೀಸ್‌ನಿಂದ ಉಂಟಾಗುವ ಮರಣಗಳಲ್ಲಿ ಶೇ. 99ರಷ್ಟು ನಾಯಿಗಳಿಂದ ರೋಗ ಹರಡಿದ ಪ್ರಕರಣಗಳಾಗಿರುತ್ತವೆ. ವೈದ್ಯಕೀಯವಾಗಿ ರೇಬಿಸ್‌ನಲ್ಲಿ ಎರಡು ಸ್ವರೂಪಗಳಿವೆ: ಆಕ್ರಮಣಕಾರಿ ಮತ್ತು ಲಕ್ವಾ ಸ್ವರೂಪದ್ದು. ಮನುಷ್ಯರಲ್ಲಿ ಉಂಟಾಗುವ ರೇಬಿಸ್‌ನಲ್ಲಿ ಆಕ್ರಮಣಕಾರಿ ಸ್ವರೂಪದ್ದೇ ಹೆಚ್ಚು.

ಪ್ರಾಣಿಗಳಲ್ಲಿ ರೇಬಿಸ್‌ನ ಲಕ್ಷಣಗಳಾವುವು? : ರೇಬಿಸ್‌ ವೈರಸ್‌ ಸೋಂಕುಪೀಡಿತ ಪ್ರಾಣಿಗಳು ಆಕ್ರಮಣಕಾರಿ ಪ್ರವೃತ್ತಿ, ಹೆಚ್ಚು ಜೊಲ್ಲು ಸುರಿಸುವುದು, ಭೀತಿ, ನುಂಗಲು ಕಷ್ಟವಾಗುವುದು, ನಡುಕ ಮತ್ತು ಲಕ್ವಾದಂತಹ ವಿವಿಧ ಲಕ್ಷಣಗಳನ್ನು ತೋರ್ಪಡಿಸಬಹುದು. ರೇಬಿಸ್‌ ಸೋಂಕುಪೀಡಿತ ಪ್ರಾಣಿಗಳು ಅಸಾಮಾನ್ಯವಾಗಿ ಪ್ರೀತಿ ತೋರ್ಪಡಿಸಬಹುದು, ಆದರೆ ಆಕ್ರಮಣಕಾರಿಯಾಗಿರುವುದೇ ಹೆಚ್ಚು. ರೇಬಿಸ್‌ ಸೋಂಕಿಗೆ ಒಳಗಾದ ಕುದುರೆಗಳು ಮತ್ತು ರಾಸುಗಳು ಖನ್ನತೆ, ಸ್ವಯಂ ಹಾನಿ ಮಾಡಿಕೊಳ್ಳುವುದು ಅಥವಾ ಬೆಳಕಿಗೆ ಹೆಚ್ಚು ಸೂಕ್ಷ್ಮವಾಗಿ ಸಂವೇದಿಸುವ ಸ್ವಭಾವವನ್ನು ಹೊಂದಿರಬಹುದು. ರೇಬಿಸ್‌ ಸೋಂಕಿಗೆ ತುತ್ತಾದ ಕಾಡುಪ್ರಾಣಿಗಳು ಅಸಹಜ ಸ್ವಭಾವವನ್ನು ಪ್ರದರ್ಶಿಸಬಹುದು ಮತ್ತು ಮನುಷ್ಯನ ಬಗ್ಗೆ ಸಾಮಾನ್ಯವಾಗಿರುವ ಹೆದರಿಕೆ ಹೊಂದಿರದೇ ಇರಬಹುದು. ವರ್ತನಾತ್ಮಕ ಬದಲಾವಣೆಗಳು ಮತ್ತು ವಿವರಿಸಲಾಗದ ಲಕ್ವಾ ರೇಬಿಸ್‌ ಕಾಯಿಲೆಯ ಬಹು ಸಾಮಾನ್ಯವಾದ ಲಕ್ಷಣಗಳಾದರೂ ಅಸಹಜವಾದ, ವಿವರಿಸಲಾಗದ ಎಲ್ಲ ನರಶಾಸ್ತ್ರೀಯ ಕಾಯಿಲೆಗಳಲ್ಲಿ ರೇಬಿಸ್‌ ಪತ್ತೆಯನ್ನೂ ಪರಿಗಣಿಸಬೇಕಾಗಿದೆ. ರೇಬಿಸ್‌ನ ವೈದ್ಯಕೀಯ ಲಕ್ಷಣಗಳು ತಲೆದೋರಿದ ಬಳಿಕ ಅದಕ್ಕೆ ಚಿಕಿತ್ಸೆಯಿಲ್ಲ. ಪ್ರಾಣಿಗಳಲ್ಲಿ ಈ ಕಾಯಿಲೆಯನ್ನು ಅವುಗಳ ಮೃತ್ಯುವಿನ ಬಳಿಕ ಮಾತ್ರ ಖಚಿತಪಡಿಸಬಹುದಾಗಿದೆ.

Advertisement

 

ಡಾ| ಪಿಯಾ ಪೌಲ್‌ ಮುದ್ಗಲ್‌

ಶಿಲ್ಪಾ ಸಿ., ಕವಿತಾ ಕೆ.

ಜೋಸ್ಮಿ ಜೋಸೆಫ್, ಸುಧೀಶ್‌ ಎನ್‌.

ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next