Advertisement

ನೀರಾವರಿ ಬೆಳೆಗೇಕೆ ರೈತರು ತೋರುತ್ತಿಲ್ಲ ಆಸಕ್ತಿ?

06:15 PM Aug 28, 2021 | Team Udayavani |

ಚಿಂಚೋಳಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಅತಿ ಹೆಚ್ಚು ಸಣ್ಣ ನೀರಾವರಿ ಕೆರೆ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳಿದ್ದರೂ ತಾಲೂಕಿನ ರೈತರು ನೀರಾವರಿ ಮೇಲೆ ಹೆಚ್ಚು ಅವಲಂಬಿತರಾಗದೇ ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯುತ್ತಾರೆಯೇ ಹೊರತು ನೀರಾವರಿ ಸೌಕರ್ಯ ಉಪಯೋಗಿಸಿಕೊಳ್ಳುವಲ್ಲಿ ತೀರಾ ಹಿಂದುಳಿದಿದ್ದಾರೆ.

Advertisement

ದಿ| ವಿರೇಂದ್ರ ಪಾಟೀಲ ಮುಖ್ಯಮಂತ್ರಿ ಆಗಿದ್ದಾಗ ಬೃಹತ್‌ ಮಧ್ಯಮ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮತ್ತು ಚಂದ್ರಂಪಳ್ಳಿ ನೀರಾವರಿ ಯೋಜನೆಗಳನ್ನು ನಿರ್ಮಿಸಿದ್ದರು. ಧರ್ಮಸಾಗರ, ಚಿಕ್ಕನಿಂಗದಳ್ಳಿ, ಧರ್ಮ ಸಾಗರ, ಲಿಂಗಾನಗರ, ತುಮಕುಂಟಾ, ನಾಗಾಇದಲಾಯಿ, ಹೂಡದಳ್ಳಿ, ಸಾಲೇಬೀರನಳ್ಳಿ, ಹಸರಗುಂಡಗಿ, ಐನಾಪುರ, ಖಾನಾಪುರ, ಮುಕರಂಬಾ, ಹುಲಸಗೂಡ, ದೋಟಿಕೊಳ, ಮಿರಿಯಾಣ, ಕೊಳ್ಳುರ, ಚಂದನಕೇರಾ,
ಪಂಗರಗಾ, ನಿಡಗುಂದಾ, ನಾಗಾಇದಲಾಯಿ, ಕೋಡ್ಲಿ (ಅಲ್ಲಾಪುರ) ಸಣ್ಣ ನೀರಾವರಿ ಕೆರೆಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಕಳೆದ 50 ವರ್ಷಗಳ ಹಿಂದೆ ನಿರ್ಮಿಸಿದ ಕೆರೆಗಳ ಕಾಲುವೆಗಳು ಇದೀಗ ಹೂಳು ತುಂಬಿ ಗಿಡಗಂಟಿಗಳು ಬೆಳೆದು ಸಂಪೂರ್ಣ ಮುಚ್ಚಿ ಹೋಗಿವೆ. ತಾಲೂಕಿನ ಮಧ್ಯಮ ಮತ್ತು ಸಣ್ಣ ನೀರಾವರಿ ಕೆರೆಗಳು ಮುಖ್ಯಕಾಲುವೆ, ಉಪಕಾಲುವೆ ಮತ್ತು ಹೊಲಗಾಲುವೆಗಳು ಸಂಪೂರ್ಣ ಹಾಳಾಗಿರುವುದರಿಂದ ನೀರಾವರಿ ಪ್ರಯೋಜನ ರೈತರಿಗೆ ದೊರಕುತ್ತಿಲ್ಲ.

ಮುಂಗಾರು ಮಳೆಯಾಶ್ರಿತ ಬೆಳೆಗಳಾದ ಹೆಸರು, ಉದ್ದು, ತೊಗರಿ, ಕಡಲೆ, ಜೋಳ, ಗೋಧಿ, ಸಜ್ಜೆ, ಹೈಬ್ರಿಡ್‌ ಜೋಳ, ಕುಸುಬಿ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುವುದು ಇಲ್ಲಿನ ಕೃಷಿ ಪದ್ಧತಿಯಾಗಿದೆ. ಆದರೆ ಬೇಸಿಗೆ ದಿನಗಳಲ್ಲಿ ರೈತರು ತಮ್ಮ ಹೊಲಗಳನ್ನು ಖಾಲಿ ಬಿಡುವಂತೆ ಆಗಿದೆ.

ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನದಿ ಚಿಮ್ಮನಚೋಡ ಗ್ರಾಮದಿಂದ ಪ್ರಾರಂಭವಾಗಿ ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಚಂದಾಪುರ, ಅಣವಾರ, ಗಂಗನಪಳ್ಳಿ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಭಕ್ತಂಪಳ್ಳಿ, ಕರ್ಚಖೇಡ, ಜಟ್ಟೂರ,ಪೋತಂಗಲ್‌, ಹಲಕೋಡಾ ವರೆಗೆ ಅಂದಾಜು 45 ಕಿ.ಮೀ ದೂರ ವರ್ಷವಿಡಿ ಹರಿಯುತ್ತದೆ. ಆದರೆ ನೀರಿನ ಪ್ರಯೋಜನ ಪಡೆದುಕೊಳ್ಳಲು
ರೈತರ್ಯಾರೂ ಮುಂದೆ ಬರುತ್ತಿಲ್ಲ. ಮುಲ್ಲಾಮಾರಿ ನದಿಗೆ ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ, ಜಟ್ಟೂರ ಗ್ರಾಮಗಳ ಹತ್ತಿರ ಬ್ಯಾರೇಜ್‌ಗಳನ್ನು ನಿರ್ಮಿಸಿದರೂ ರೈತರು ನೀರಾವರಿ ಸೌಕರ್ಯ ಪಡೆಯಲು ಯಾಕೆ ಮುಂದೆ ಬರುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

Advertisement

ಬ್ಯಾಂಕ್‌ ಸಾಲಕ್ಕೆ ಅಲೆದಾಟ: ಹಿಂದುಳಿದ ತಾಲೂಕಿನಲ್ಲಿ ರೈತರು ತಮ್ಮ ಜಮೀನುಗಳನ್ನು ನೀರಾವರಿ ಮಾಡಿಕೊಳ್ಳಲು ಪಂಪಸೆಟ್‌, ಹನಿ ನೀರಾವರಿ, ಕೃಷಿ ಹೊಂಡ, ತೆರೆದ ಬಾವಿ ತೋಡಿಸಲು ಬ್ಯಾಂಕ್‌ನಿಂದ ಸಾಲ ಪಡೆಯಬೇಕಾಗುತ್ತದೆ. ಆದರೆ ಬ್ಯಾಂಕ್‌ನಲ್ಲಿ ಅಧಿಕಾರಿಗಳು ದಾಖಲೆಗಳ ಹೆಸರಿನಲ್ಲಿ ಅಲೆದಾಡಿಸಿ, ಸಾಲ ನೀಡುತ್ತಿಲ್ಲ. ಇದರಿಂದ ರೋಸಿಹೋದ ರೈತರು ನೀರಾವರಿ ಸೌಕರ್ಯವೇ ಬೇಡ ಎನ್ನುವ ಪರಿಸ್ಥಿತಿ ಉದ್ಭವಿಸಿದೆ.

ಮುಲ್ಲಾಮಾರಿ ಚಂದ್ರಂಪಳ್ಳಿ ಜಲಾಶಯಗಳ ಕಾಲುವೆಗಳ ಪರಿಸ್ಥಿತಿಯೂ ಅಧೋಗತಿ ತಲುಪಿದೆ. ಸಣ್ಣ ನೀರಾವರಿ ಕೆರೆಗಳ ಕಾಲುವೆಗಳು ದಿಕ್ಕು ತಪ್ಪಿವೆ. ಸರ್ಕಾರದಿಂದ ಕೋಟ್ಯಂತರ ರೂ.ಗಳು ಕೆರೆ ನಿರ್ವಹಣೆ ಕಾಲುವೆ ಹೊಳೆತ್ತುವುದು, ದುರಸ್ತಿಕಾರ್ಯ ನಡೆಸುವ ನೆಪದಲ್ಲಿ ಖರ್ಚು ಮಾಡಲಾಗುತ್ತಿದೆ. ಆದರೆ ಜಮೀನುಗಳಿಗೆ ನೀರು ಹರಿಸುವ ಪ್ರಯತ್ನವನ್ನೇ ‌ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ.

ತಾಲೂಕಿನ ರೈತರ ಜೀವನಾಡಿ ಮುಲ್ಲಾಮಾರಿ ನೀರಾವರಿ ಯೋಜನೆ ಮೇಲೆ ಅನೇಕಹಳ್ಳಿಗಳ ರೈತರು ಅವಲಂಬಿತರಾಗಿದ್ದಾರೆ. ಆದರೆ ಕಳೆದ ಮೂರು ದಶಕಗಳಿಂದ ಜಮೀನುಗಳಿಗೆ ನೀರುಹರಿಯುತ್ತಿಲ್ಲ. ಕಾಲುವೆ ಕಾಮಗಾರಿಗಳಲ್ಲಿ ಅನೇಕ ಭ್ರಷ್ಟಾಚಾರ, ಅವ್ಯವಹಾರಗಳು ನಡೆದಿವೆ. ಸರ್ಕಾರ ಈ ಕುರಿತು ತನಿಖೆ ನಡೆಸಬೇಕು.
ಸಂಜೀವನ್‌ ಯಾಕಾಪುರ,ಜೆಡಿಎಸ್‌ ಮುಖಂಡ

ತಾಲೂಕಿನಕೆರೆಗಳಲ್ಲಿ ನೀರು ಸಂಗ್ರಹವಿದ್ದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರುಹರಿಸಲುಕಾಲುವೆಗಳಿಲ್ಲ. ರೈತರ ಅಭಿವೃದ್ಧಿ ಆಗಬೇಕಾದರೆ ಸರ್ಕಾರಹಿಂದುಳಿದಕೆರೆಗಳ ಪುನಶ್ಚೇನಗೊಳಿಸಬೇಕು.
ಗೋಪಾಲರಾವ್‌ ಕಟ್ಟಿಮನಿ, ನೀರಾವರಿ ಸಲಹಾ ಸಮಿತಿ ಸದಸ್ಯ

ಚಿಂಚೋಳಿ ತಾಲೂಕು ಸಾಕಷ್ಟು ಸಂಪನ್ಮೂಲಗಳಿಂದಕೂಡಿದೆ.ಕೆರೆಗಳ ಹೆಸರಿನಲ್ಲಿ ಕೋಟ್ಯಂತರ ರೂ.ಖರ್ಚು ಮಾಡಲಾಗಿದೆಯೇ ಹೊರತು ಜಮೀನುಗಳಿಗೆ ನೀರು ಕೊಡಲು ಆಗಿಲ್ಲ. ಈ ಕುರಿತು ಇಲ್ಲಿನ ರಾಜಕಾರಣಿಗಳ ವಿರುದ್ಧಯಾರೂ ಧ್ವನಿ ಎತ್ತುತ್ತಿಲ್ಲ.
ಭೀಮಶೆಟ್ಟಿ ಎಂಪಳ್ಳಿ, ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ

ಚಿಂಚೋಳಿ ತಾಲೂಕಿನ ರೈತರು ನೀರಾವರಿ ತೀರಾಹಿಂದುಳಿಯಲು ರೈತರಿಗೆ ಸರಳವಾಗಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡುತ್ತಿಲ್ಲ. ಸಾಲಕ್ಕಾಗಿ ಕೃಷಿಕರಿಗೆ ಅಲೆದಾಡಿ ಸಾಕಾಗಿದೆ. ಅವರಿಗೆ ನೀರಾವರಿ ಸೌಲಭ್ಯಕಲ್ಪಿಸಿಕೊಳ್ಳಲು ಮೂಲ ಸೌಕರ್ಯಗಳು ದೊರಕಬೇಕಿದೆ. ಇಲ್ಲಿನ ರೈತರು ಸೋಮಾರಿಗಳಲ್ಲ, ಅವಕಾಶ ಸಿಗುತ್ತಿಲ್ಲ.
ಶರಣಬಸಪ್ಪ ಮಮಶೆಟ್ಟಿ ,ಜಿಲ್ಲಾಧ್ಯಕ್ಷ,
ಕರ್ನಾಟಕ ಪ್ರಾಂತ ರೈತ ಸಂಘ

ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next