Advertisement

Ardhambardha Premakathe Review; ತಿರುವುಗಳ ನಡುವೆ ಕೊನೆಯಿಲ್ಲದ ಪ್ರೇಮಕಥೆ!

10:39 AM Dec 02, 2023 | Team Udayavani |

ಯಾವುದೇ ಪ್ರೇಮಕಥೆಗೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಕ್ಕರೆ ಅಲ್ಲಿಗೆ ಆ ಪ್ರೇಮಕಥೆ ಮುಗಿದು ಹೋದಂತೆ! ಆದರೆ ನಿಜವಾದ ಪ್ರೇಮಕಥೆ ಎಂದಿಗೂ ಮುಗಿಯುವುದಿಲ್ಲ. ಅದು ನಡೆಯುತ್ತಲೇ ಇರುತ್ತದೆ. ಪ್ರೀತಿಸಿದವರ ಜೊತೆಗಿನ ಪ್ರಯಾಣ ನಿತ್ಯ ನೂತನ. ಪ್ರೇಮಕ್ಕಾಗಲಿ, ಪ್ರೇಮಕಥೆಗಾಗಲಿ ಕೊನೆಯೆಂಬುದು ಇರಬಾರದು. ಹಾಗಾಗಿ ನಮ್ಮ ಪ್ರೇಮಕಥೆ “ಅರ್ಧಂಬರ್ಧ ಪ್ರೇಮಕಥೆ’ಯಾಗಿಯೇ ಉಳಿಯಲಿ. ಅದಕ್ಕೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಗುವುದು ಬೇಡ. ಅಥವಾ ನಾವೇ ಅದನ್ನು ಒತ್ತಾಯಪೂರ್ವಕವಾಗಿ ಮುಗಿಸುವುದು ಬೇಡ. ಹೀಗೆ ಪ್ರೇಮಿಗಳಿಬ್ಬರು ತಮ್ಮ ಮನದಾಳದ ಮಾತನ್ನು ಹೇಳಿಕೊಳ್ಳುವ ವೇಳೆಗೆ ಇನ್ನೇನು ಕ್ಲೈಮ್ಯಾಕ್ಸ್‌ನಲ್ಲಿ ಲವ್‌ಸ್ಟೋರಿ ಎಂಡಿಂಗ್‌ ಆಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ, ಪ್ರೇಮಕಥೆಯ ಮತ್ತೂಂದು ಮಜಲು ತೆರೆದುಕೊಳ್ಳಲು ಹಲವು ದಾರಿಗಳು ಕಾಣಿಸಿಕೊಳ್ಳುತ್ತವೆ. ಇದು “ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್‌ ನಿರೀಕ್ಷಿಸುತ್ತಿದ್ದವರಿಗೆ ಕಾಣುವ ದೃಶ್ಯಗಳು.

Advertisement

ಸಿನಿಮಾದ ಟೈಟಲ್‌ನಲ್ಲಿ ಇರುವಂತೆ, ಇದು ನಿಜಕ್ಕೂ “ಅರ್ಧಂಬರ್ಧ ಪ್ರೇಮಕಥೆ’ಯ ಸಿನಿಮಾ ಎಂದು ಖಂಡಿತವಾಗಿಯೂ ಹೇಳಬಹುದು.  ಇಂದಿನ ಜನರೇಶನ್‌ನ ಹುಡುಗ-ಹುಡುಗಿಯರ ಬದುಕಿನ ದೃಷ್ಟಿ, ಪ್ರೀತಿ, ಪ್ರೇಮದ ಬಗ್ಗೆ ಅವರ ವ್ಯಾಖ್ಯಾನ ಎಲ್ಲವನ್ನೂ ತಮ್ಮದೇ ರೀತಿಯಲ್ಲಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್‌ ಕೌಶಿಕ್‌.

ಯುವ ಮನಸ್ಸಿನ ಗೊಂದಲ, ತಳಮಳಗಳ ಚಿತ್ರಣದ ನಡುವೆಯೇ “ಅರ್ಧಂಬರ್ಧ ಪ್ರೇಮಕಥೆ’ ಸರಾಗವಾಗಿ ಸಾಗುತ್ತದೆ. ಪ್ರೇಮ ಕಥೆಗೆ ಹೊಸ ಆಯಾಮ ಕೊಡಬಹುದು ಎಂಬ ನಿರ್ದೇಶಕರ ಕಲ್ಪನೆ ಸಿನಿಮಾದಲ್ಲಿ ಸಾಕಾರವಾಗಿದೆ. ಆ ಮಟ್ಟಿಗೆ ಹೇಳುವುದಾದರೆ, “ಅರ್ಧಂಬರ್ಧ ಪ್ರೇಮಕಥೆ’ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಇನ್ನು ಇಡೀ ಸಿನಿಮಾದ ಬಹುಭಾಗ ದಿವ್ಯಾ ಉರುಡುಗ ಮತ್ತು ಅರವಿಂದ್‌ ಜೋಡಿಯ ಸುತ್ತಾಟ ಆವರಿಸಿ ಕೊಂಡಿದ್ದು, ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ವರ್ಕೌಟ್‌ ಆಗಿದೆ.

ದಿವ್ಯಾ ತಮ್ಮ ಲವಲವಿಕೆಯ ಅಭಿನಯ ದಲ್ಲಿ ಇಷ್ಟವಾದರೆ, ಅರವಿಂದ್‌ ಮೊದಲ ಪ್ರಯತ್ನದಲ್ಲಿ ಸಹಜ ಅಭಿನಯದ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ಮಧ್ಯದಲ್ಲಿ ಬರುವ ಒಂದಷ್ಟು ಪಾತ್ರಗಳು, ನಿರ್ವಹಿಸಿರುವ ಕಲಾವಿದರು ಕೂಡ ಕಥೆಯ ಆಶಯಕ್ಕೆ ಎಲ್ಲೂ ಚ್ಯುತಿ ಮಾಡಿಲ್ಲ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ತೆರೆಮೇಲೆ ಸಿನಿಮಾದ ಅಂದವನ್ನು ಹೆಚ್ಚಿಸಿದೆ.

ಚಿತ್ರಕಥೆಗೆ ಕೊಂಚ ವೇಗ ಸಿಕ್ಕಿದ್ದರೆ, “ಅರ್ಧಂಬರ್ಧ ಪ್ರೇಮಕಥೆ’ಯ ಓಟ ಇನ್ನಷ್ಟು ಹೆಚ್ಚಾಗಿರುವುದರ ಜೊತೆಗೆ ಪರಿಣಾಮಕಾರಿಯಾಗಿರುವ ಸಾಧ್ಯತೆಗಳಿದ್ದವು.

Advertisement

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next