ಮೆಕ್ಸಿಕೋ: ಮೆಸೋ ಅಮೆರಿಕನ್ ನಾಗರಿಕತೆ ಎಂದೇ ಕರೆಸಿಕೊಳ್ಳುವ “ಮಯಾ ನಾಗರಿಕತೆ’ ಕಾಲದ ಪ್ರಸಿದ್ಧ ನಗರವಾಗಿದ್ದ ಮಯನ್ ನಗರದ ಪಳೆಯುಳಿಕೆಗಳು ಉತ್ತರ ಅಮೆರಿಕದ ಮೆಕ್ಸಿಕೋದ ಯುಕಾಟನ್ ನಗರದ ಬಳಿ ಪತ್ತೆಯಾಗಿದೆ.
ಸ್ಥಳದಲ್ಲಿ ಕೈಗಾರಿಕ ವಲಯ ನಿರ್ಮಿಸಲೆಂದು ಕಾಮಗಾರಿ ನಡೆಸುತ್ತಿದ್ದಾಗ ನಗರದ ಕುರುಹು ಪತ್ತೆಯಾಗಿ ರುವುದಾಗಿ ತಿಳಿಸಲಾಗಿದೆ.
ಈ ನಗರದಲ್ಲಿ ಸುಮಾರು 4,000 ಜನರು ವಾಸವಿದ್ದರು ಎಂದು ಪುರಾತತ್ವ ಇಲಾಖೆ ತಿಳಿಸಿದೆ. ನಗರದಲ್ಲಿ ಕ್ರಿ.ಶ. 600-900ರ ಕಾಲದಲ್ಲಿ ಮನುಷ್ಯರು ವಾಸವಿದ್ದರು ಎಂದು ಹೇಳಲಾಗಿದೆ. ಸ್ಥಳದಲ್ಲಿ ಅರಮನೆಗಳು, ಪ್ಲಾಜಾಗಳು ಮತ್ತು ಪಿರಮಿಡ್‌ಗಳು ಪತ್ತೆಯಾಗಿವೆ.
ಅರಮನೆಗಳಂತಹ ಪ್ರದೇಶಗಳಲ್ಲಿ ಪುರೋಹಿತರು, ವಾಸಿಸುತ್ತಿದ್ದರು. ಹಾಗೆಯೇ ಸಾಮಾನ್ಯ ಜನರು ಬೇರೆ ಪ್ರದೇಶಗಳಲ್ಲಿ ವಾಸವಿದ್ದರು ಎನ್ನಲಾಗಿದೆ. ಈ ಅರಮನೆಗಳು ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಸಮಾಧಿ ಸ್ಥಳವೂ ಪತ್ತೆಯಾಗಿದೆ.
ಅಲ್ಲಿ ಸಮುದ್ರ ಜೀವಿಗಳ ಅವಶೇಷಗಳೂ ಪತ್ತೆಯಾಗಿವೆ. ಈ ನಗರದಲ್ಲಿ ವಾಸವಿದ್ದ ಜನರು, ಜೀವನಕ್ಕಾಗಿ ಕೃಷಿಯ ಜತೆ ಮೀನುಗಾರಿಕೆಯನ್ನು ಅವಲಂಬಿಸಿದ್ದರು ಎಂದು ಪುರಾತತ್ವ ಇಲಾಖೆ ತಿಳಿಸಿದೆ.