ಬೆಂಗಳೂರು: ಆರ್ಬಿಟ್ರೇಟರ್ ವ್ಯವಸ್ಥೆಯು ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಿಕಲ್ ಆರ್ಬಿಟ್ರೇಟರ್, ಶುಕ್ರವಾರ ಭಾರತೀಯ ಅಭಿಯಂತರರ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ “ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಆರ್ಬಿಟ್ರೇಟರ್ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಬಿಟ್ರೇಟರ್ ವ್ಯವಸ್ಥೆಯಲ್ಲಿ ಸಂವಿಧಾನದತ್ತವಾದ ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ. ಟೆಂಡರ್ ಪ್ರಕ್ರಿಯೆ ಅಡತೆ ತಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶೀಘ್ರವಾಗಿ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಆಗದು. ಆ ಹಿನ್ನೆಲೆಯಲ್ಲಿ ಆರ್ಬಿಟ್ರೇಟರ್ ವ್ಯವಸ್ಥೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಭೂಮಿಯನ್ನೇ ಸರ್ಕಾರ ಬಳಕೆ ಮಾಡಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗಿದೆ. ಅರಣ್ಯಭೂಮಿಯನ್ನು ಸಾರ್ವಜನಿಕರ ಬಳಕೆಗೆ ಉಪಯೋಗಿಸಬೇಕಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಹಲವು ಬಿಕ್ಕಟ್ಟುಗಳನ್ನು ಸ್ನೇಹ ಪೂರ್ವಕವಾಗಿ ಬಗೆಹರಿಸಿಕೊಳ್ಳುವ ವಾತಾವರಣ ಸೃಷ್ಟಿಯಾಗಬೇಕಾಗಿದೆ ಎಂದು ನುಡಿದರು.
ಸರ್ಕಾರ ಬದಲಾದ ಹಾಗೆ, ಯೋಜನೆಗಳ ಪದ್ಧತಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ವಿಚಾರಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು, ಯೋಜನೆಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಸಿಎಲ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ವಿ.ರಂಗರಾಜು ಅವರು”ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಆರ್ಬಿಟ್ರೇಟರ್ ಪಾತ್ರ’ ಕುರಿತ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನೆರೆ ಪ್ರವಾಹ ಸಂತ್ರಸ್ತರ ನೆರವಿಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಿಕಲ್ ಆರ್ಬಿಟ್ರೇಟರ್ ಸಂಸ್ಥೆ , ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1ಲಕ್ಷ ರೂ. ದೇಣಿಗೆ ಚೆಕ್ ನೀಡಿತು. ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಿಕಲ್ ಆರ್ಬಿಟ್ರೇಟರ್ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಎಂ.ಎಲ್. ಮಾದಯ್ಯ ಸೇರಿದಂತೆ ಮತ್ತಿತರರು ಇದ್ದರು.