Advertisement

ನೋಡಲ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ –ಅರವಿಂದ ಲಿಂಬಾವಳಿ

09:15 PM May 07, 2021 | Team Udayavani |

ಬೆಂಗಳೂರು : ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿ ಮತ್ತು ಸಹಾಯಕ ನೋಡಲ್ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಎಚ್ಚರಿಸಿದ್ದಾರೆ.

Advertisement

ಅವರು ಇಂದು ವಿಧಾನಸೌಧದ ಸಚಿವರ  ಕಚೇರಿಯಲ್ಲಿ ವರ್ಚುಯಲ್ ಸಭೆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಮೇಲ್ವಿಚಾರಣೆ ನೋಡಿಕೊಳ್ಳಲು ನೇಮಕವಾಗಿರುವ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ  ಸಂವಾದ ನಡೆಸಿ ಮಾತನಾಡುತ್ತಿದ್ದರು.

ಈ ಸಂವಾದದಲ್ಲಿ ಕೋವಿಡ್ ವಾರ್ ರೂಮ್ ಗಳ  ಕಾಲ್ ಸೆಂಟರ್ ನಿರ್ವಹಣೆ, ಸೋಂಕಿತ ರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಮಾಹಿತಿ ನೀಡುವುದು ಹಾಗೂ  ಕ್ಷೇತ್ರ ಮಟ್ಟದಲ್ಲಿ ಆಗುತ್ತಿರುವ ಕೆಲಸಗಳ ಬಗ್ಗೆ ಅಧಿಕಾರಿಗೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ನೋಡಲ್ ಅಧಿಕಾರಿಗಳು ಸಂಬಂಧಿಸಿದ ಆಸ್ಪತ್ರೆಗಳಿಗೆ ಖುದ್ದಾಗಿ ತೆರಳಿ, ರೋಗಿಗಳ ಮಾಹಿತಿ ಪಡೆಯಬೇಕು. ಇದರಿಂದ ಅನಧಿಕೃತವಾಗಿ ಬೆಡ್ ಪಡೆದವರ ಮಾಹಿತಿ ನೇರವಾಗಿ ಸಿಗಲಿದೆ ಇದು ಬೆಡ್ ಹಂಚಿಕೆ ಪ್ರಕ್ರಿಯೆಗೆ ನೆರವಾಗುತ್ತದೆ ಎಂದು ಹೇಳಿದರು.

ಬೆಡ್ ಹಂಚಿಕೆ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಮೊದಲು ಆರೋಗ್ಯ ಮಿತ್ರ, ಬಿಬಿಎಂಪಿ  ಸೇರಿದಂತೆ ಇತರ ಎಲ್ಲಾ ಇಲಾಖೆಯಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದರು.

Advertisement

ಪ್ರಸ್ತುತ 1912 ಸಹಾಯವಾಣಿ ಕೇಂದ್ರದಲ್ಲಿ 60 ಲೈನ್ ಗಳಿದ್ದು, ಕರೆಗಳು ಒತ್ತಡ ಹೆಚ್ಚಾಗಿರುವುದರಿಂದ ಅದನ್ನು 250 ಲೈನ್ ಗಳಿಗೆ ಹೆಚ್ಚಿಸ ಬೇಕೆಂದು ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದರು.

ನೋಡಲ್ ಅಧಿಕಾರಿಗಳು ಪ್ರತಿದಿನವೂ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ  ನಿಯಂತ್ರಣದಲ್ಲಿರುವ  ಬೆಡ್ ಗಳ ಮಾಹಿತಿ ಪಡೆದು, ಮೇಲಾಧಿಕಾರಿಗಳಿಗೆ ಶೀಘ್ರವಾಗಿ ನೀಡ ಬೇಕೆಂದು ಸೂಚಿಸಿದರು.

ಈಗಾಗಲೇ ಹಂಚಿಕೆ  ಆಗಿರುವ ಬೆಡ್ ಗಳಲ್ಲಿ ಸರ್ಕಾರದಿಂದ ಸೂಚಿಸಲಾಗಿರುವ ರೋಗಿಗಳು ಇದ್ದಾರೆಯೇ ಅಥವಾ ಖಾಸಗಿ ರೋಗಿಗಳಿದ್ದಾರೆಯೇ ಎಂಬುದನ್ನು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ನೋಡಲ್ ಅಧಿಕಾರಿಗಳು ಕರ್ತವ್ಯಕ್ಕೆ ಗೈರಾಗುತ್ತಿರುವ  ಬಗ್ಗೆ ಗಮನಕ್ಕೆ ಬಂದಿದ್ದು, ನೋಡಲ್ ಅಧಿಕಾರಿಗಳು ಸರಿಯಾಗಿ ಕರ್ತವ್ಯ  ನಿರ್ವಹಿಸದೇ ಹೋದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಹೇಳಿದರು.

ಪಿನ್ ಕೋಡ್ ಆಧಾರದ ಮೇಲೆ ಆಯಾ ಪ್ರದೇಶದ ಆಸ್ಪತ್ರೆಗಳಿಗೆ  ರೋಗಿಗಳನ್ನು ದಾಖಲಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ವಲಯಕ್ಕೆ ಒಂದರಂತಿರುವ ವಾರ್ ರೂಮ್ ಗಳ ಬದಲು,  ಕೇಂದ್ರಿಕೃತ ವಾರ್ ರೂಮ್ ಮಾಡಿ, ಅಲ್ಲಿಂದಲೇ ಬೆಡ್ ಗಳ ಹಂಚಿಕೆ ಮಾಡಲು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.

ಬೆಡ್ ಗಳ ಹಂಚಿಕೆ ವಿಧಾನವನ್ನು ರೈಲ್ವೆ ಟಿಕೆಟ್ ಕಾಯ್ದಿರಿಸುವ ಮಾದರಿಯನ್ನು ಅನುಸರಿಸಿ ಅದರಂತೆ ಮಾಡುವುದು ಸೂಕ್ತ, ಎ ಬೆಡ್ ಖಾಲಿ ಇದೆ, ಬೆಡ್ ಕಾಯ್ದಿರಿಸುವ ಕಾರ್ಯ ಪ್ರಗತಿಯಲ್ಲಿದೆ, ಬೆಡ್ ಕಾಯ್ದಿರಿಸಲಾಗಿದೆ ಈ ರೀತಿ ಪ್ರತಿ ಹಂತದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ಮಾಡವುದು ಉಪಯುಕ್ತ ಹೀಗೆ ಮಾಡುವ ಬಗ್ಗೆ ಕ್ರಮ ವಹಿಸಲು ತಿಳಿಸಿದರು.

ಬಿಬಿಎಂಪಿಯ ಉನ್ನತ ಅಧಿಕಾರಿಗಳು ಹಾಗೂ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ನೋಡಲ್ ಅಧಿಕಾರಿಗಳು  ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next