Advertisement

ಕಾಡುಪ್ರಾಣಿ ಪೋಷಣೆ : 100 ಎಕ್ರೆ ಅರಣ್ಯದಲ್ಲಿ ಹಣ್ಣಿನ ಗಿಡ ನಾಟಿ: ಲಿಂಬಾವಳಿ

12:50 AM Apr 25, 2021 | Team Udayavani |

ಬೆಳ್ತಂಗಡಿ: ಅರಣ್ಯದಂಚಿನಲ್ಲಿ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗುತ್ತಿದ್ದು, ಮತ್ತೂಂದೆಡೆ ಕೃಷಿ ಚಟುವಟಿಕೆ ಮೇಲಾಗುತ್ತಿರುವ ಹಾನಿಯನ್ನು ಪರಿವರ್ತಿಸುವ ಸಲುವಾಗಿ ಆರಂಭದಲ್ಲಿ ಬೆಳ್ತಂಗಡಿ ವಿಧಾನ ಸಭಾಕ್ಷೇತ್ರದಲ್ಲಿ 100 ಎಕ್ರೆ ಅರಣ್ಯ ಪ್ರದೇಶವನ್ನು ಗುರುತಿಸಿ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆಗೆ ಜೂನ್‌ 5ರ ವಿಶ್ವಪರಿಸರದ ದಿನದಂದು ಚಾಲನೆ ನೀಡಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Advertisement

ಅವರು ಧರ್ಮಸ್ಥಳದಲ್ಲಿ ಶನಿವಾರ ಜಿಲ್ಲೆಯ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.

ಡಾ| ಹೆಗ್ಗಡೆ ಚಾಲನೆ
ವನ್ಯ ಜೀವಿಗಳು ಆಹಾರ ಸಿಗದೆ ನಾಡಿಗೆ ಬಂದ ಕೃಷಿಗೆ ಮಾಡುತ್ತಿರುವ ಹಾನಿ ತಪ್ಪಿಸುವ ಉಪಕ್ರಮವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅರಣ್ಯದಲ್ಲಿ ಹಣ್ಣಿನ ಗಿಡ ನೆಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೊಂದು ಉತ್ತಮ ಯೋಜನೆ ಎಂಬುದನ್ನು ಮನಗಂಡು ಕಾರ್ಯರೂಪಕ್ಕೆ ತರಲು ಚಿಂತಿಸಿದ್ದೇನೆ. ಯೋಜನೆಗೆ ಡಾ| ಹೆಗ್ಗಡೆ ಅವರೇ ಚಾಲನೆ ನೀಡಲಿರುವರು ಎಂದರು.

ಭವಿಷ್ಯದ ಪೀಳಿಗೆಗೆ ಕಿರು ಕಾಣಿಕೆ
ಡಾ| ಹೆಗ್ಗಡೆ ಕಿವರು ಪ್ರಾಸ್ತಾವನೆಗೈದು, ಜಾಗತಿಕ ಗ್ರಾಮದ ಕಲ್ಪನೆಯೊಂದಿಗೆ ವಿಶ್ವದ ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿರಿಸಿ ಪ್ರಕೃತಿ-ಪರಿಸರವನ್ನು ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಕಿರು ಕಾಣಿಕೆಯಾಗಿ ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆ ಯಾಗಿದೆ ಎಂದರು.

ಕಾಡುಪ್ರಾಣಿಗಳು ನಾಡಿಗೆ ಬಂದು ಕೃಷಿಗೆ ಹಾನಿ ಮಾಡುವುದನ್ನು ತಡೆಗಟ್ಟಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂದು ಅರಣ್ಯ ಸಚಿವರಿಗೆ ಪತ್ರ ಬರೆದಾಗ ತತ್‌ಕ್ಷಣ ಸ್ಪಂದಿಸಿದ ಅವರು ಧರ್ಮಸ್ಥಳದಲ್ಲಿ ಸಮಾಲೋಚನ ಸಭೆ ನಡೆಸಿದ್ದಾರೆ. ಮಾವು, ನೇರಳೆ, ಜಂಬೂ ನೇರಳೆ, ಹಲಸು, ಹೆಬ್ಬಲಸು, ಬಿದಿರು, ನೆಲ್ಲಿ, ಪುನರ್ಪುಳಿ ಮೊದಲಾದ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸಬೇಕೆಂದು ಸಲಹೆ ನೀಡಿದರು.

Advertisement

ಶಾಸಕರಾದ ಹರೀಶ್‌ ಪೂಂಜ, ಕೆ. ಪ್ರತಾಪಸಿಂಹ ನಾಯಕ್‌, ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾ ಧಿಕಾರಿ ಸಂಜಯ್‌ ಮೋಹನ್‌, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ನೆಟಾಲ್ಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್‌, ಕೆಎಫ್ಡಿಸಿ (ಅರಣ್ಯ ಅಭಿವೃದ್ಧಿ ನಿಗಮ) ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಳನ್‌, ಮಂಗಳೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್‌, ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌ ಪೂರಕ ಮಾಹಿತಿಯೊಂದಿಗೆ ಸಲಹೆ, ಸೂಚನೆ ನೀಡಿದರು.

ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌, ಉಪ್ಪಿನಂಗಡಿ ವಲಯದ ಮಧುಸೂದನ್‌, ಪ್ರಭಾರ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಸ್ಮಿತಾ, ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್‌, ತಹಶೀಲ್ದಾರ್‌ ಮಹೇಶ್‌ ಜೆ., ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಪ್ರಾದೇಶಿಕ ನಿರ್ದೇಶಕ ವಿವೇಕ್‌ ಪಾçಸ್‌, ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಜಪಾನಿನ ಮಿಯಾವಾಕಿ ಮಾದರಿ
ಸಾರ್ವಜನಿಕರ ಸಹಕಾರದೊಂದಿಗೆ ಜಪಾನಿನ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಮೇ 15ರೊಳಗೆ ಈ ವಿಚಾರವಾಗಿ ಇಂತಿಷ್ಟು ಮಂದಿಗೆ ಅರಣ್ಯ ಇಲಾಖೆ ವತಿಯಿಂದ ತರಬೇತಿ ನೀಡಿ, ಜೂನ್‌ 5ರಂದು ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಮುಂದಿನ ವರ್ಷ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

ಮಂಗಳೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕ್ಕಳನ್‌ ಅವರನ್ನು ಯೋಜನೆಗೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು.

ಇಂದು ಜಗತ್ತಿಗೆ ಕೊರೊನಾ ಆವರಿಸಿದ್ದು, ಆಮ್ಲಜನಕದ ಕೊರತೆ ಕಾಡುತ್ತಿದೆ. ಒಂದು ರೀತಿಯಲ್ಲಿ ಪರಿಸರ ಉಳಿವಿನ ಸಂದೇಶಕ್ಕೂ ಇದು ಸಂಬಂಧ ಕಲ್ಪಿಸಿದೆ. ಭವಿಷ್ಯದಲ್ಲಿ ಹಣಕೊಟ್ಟು ಆಮ್ಲಜನಕ ಖರೀದಿಸುವ ಪರಿಸ್ಥಿತಿ ಸೃಷ್ಟಿಸದೆ ಪರಿಸರ ಸಂರಕ್ಷಣೆಯಿಂದ ಸ್ವಾಭಾವಿಕ ಪರಿವರ್ತನೆ ಕಾಣೋಣ.
– ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next