ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಪ್ರದೀಪ್ ನಮ್ಮ ಕಾರ್ಯಕರ್ತ. ಆತ ನನಗೆ ಪರಿಚಯಸ್ಥ ಅನ್ನುವುದೂ ಸತ್ಯ. ಆತನ ಅಗಲಿಕೆಯಿಂದ ನನಗೆ ದುಃಖವಾಗಿದೆ. ಸಹಾಯ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದೇನೆ. ಪ್ರದೀಪ್ ಸಾವಿಗೂ ನನಗೂ ಸಂಬಂಧವಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಲಿ ಎಂದು ನಾನೇ ಆಗ್ರಹಿಸುತ್ತೇನೆ. ಯಾವ ತನಿಖೆ ಬಂದರೂ ಎದುರಿಸುತ್ತೇನೆ ಎಂದು ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದೀಪ್ 2009ರ ಲೋಕಸಭಾ ಚುನಾವಣೆಯಲ್ಲಿ ನನ್ನ ಜತೆಗಿದ್ದ. ಸಾಮಾಜಿಕ ಜಾಲತಾಣ ವಿಭಾಗದ ಗುತ್ತಿಗೆ ಪಡೆದುಕೊಂಡಿದ್ದ. ಹಣಕಾಸು ವಿಚಾರದಲ್ಲಿ ಪ್ರದೀಪ್ ಹಾಗೂ ಗೋಪಿ, ಸುಬ್ಬಯ್ಯ ನಡುವೆ ಮಧ್ಯಸ್ಥಿಕೆ ವಹಿಸಿದ್ದೆ ಎಂಬುದು ಸುಳ್ಳು. ಪ್ರದೀಪ್‌ಗೆ ನೀಡಬೇಕಾಗಿದ್ದ ಹಣ ನೀಡುವಂತೆ ಗೋಪಿ, ಸುಬ್ಬಯ್ಯಗೆ ಎರಡು-ಮೂರು ಬಾರಿ ದೂರವಾಣಿ ಕರೆ ಮಾಡಿ ಒತ್ತಡ ಹಾಕಿದ್ದೆ. ಕಳೆದ ಜುಲೈ ತಿಂಗಳಲ್ಲಿ ಪ್ರದೀಪ್ ನನ್ನ ಕಚೇರಿಗೆ ಬಂದಿದ್ದರು. ಬಳಿಕ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ಕ್ಷೇತ್ರದಲ್ಲಿ ಜನತಾ ದರ್ಶನದಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಈ ವೇಳೆ ಹಣ ಹೂಡಿಕೆ ಮಾಡಿದ್ದು, ಹಣ ವಾಪಸು ಬಂದಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು. ತತ್‌ಕ್ಷಣವೇ ಅವರು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಬಂಡವಾಳ ಹೂಡಿದ್ದು ನಿಜವೇ ಎಂದು ಕೇಳಿದ್ದೆ. ಬಂಡವಾಳ ಹೂಡಿದ್ದರೆ ಅವರ ಹಣ ಚುಕ್ತಾ ಮಾಡಿ ಎಂದೂ ಸೂಚಿಸಿದ್ದೆ. 15 ದಿನಗಳ ಬಳಿಕ ಮತ್ತೆ ಬಂದಿದ್ದಾಗ ಸಂಬಂಧಿಸಿದವರಿಗೆ ಖಾರವಾಗಿಯೇ ಹೇಳಿ ತತ್‌ಕ್ಷಣವೇ ಸಮಸ್ಯೆ ಬಗೆಹರಿಯಬೇಕು ಎಂದು ಸೂಚಿಸಿ ಒತ್ತಡ ಹೇರಿದ್ದೆ. ಬಳಿಕ ಕಾರ್ಯಕ್ರಮ ಒಂದರಲ್ಲಿ ಸಿಕ್ಕಿ ಚುಕ್ತಾ ಆಗಿರುವುದಾಗಿ ಹೇಳಿ ಧನ್ಯವಾದವನ್ನೂ ತಿಳಿಸಿದ್ದರು. ಬಳಿಕ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಪ್ರದೀಪ್ ನಿಮ್ಮ ಬಳಿ ಬಂದಾಗಲೇ ಪೊಲೀಸರಿಗೆ ಯಾಕೆ ದೂರು ಕೊಡಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಲಿಂಬಾವಳಿ, ಪ್ರದೀಪ್ ಎರಡು ಪ್ರಕರಣಗಳಲ್ಲಿ ನನ್ನ ಬಳಿಗೆ ಬಂದಿದ್ದರು. ಎರಡೂ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಇದಕ್ಕೂ ಮೊದಲು ಕೌಟುಂಬಿಕ ಸಮಸ್ಯೆ ಬಗ್ಗೆಯೂ ಪ್ರದೀಪ್ ನನ್ನ ಬಳಿ ಹೇಳಿಕೊಂಡಿದ್ದರು. ಪತ್ನಿ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂದಿದ್ದರು. ಆಗ ನಾನೇ ಪೊಲೀಸರಿಗೆ ಕರೆ ಮಾಡಿ ಪತ್ನಿ ಹಾಗೂ ಅವರ ನಡುವೆ ಸಂಧಾನ ಮಾಡುವಂತೆ ಸೂಚಿಸಿದ್ದೆ ಎಂದರು.
6 ಮಂದಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ನೆಟ್ಟಿಗೆರೆ ಗೇಟ್ ಬಳಿ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಅಂಬಲಿಪುರ ನಿವಾಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೃತರ ಪತ್ನಿ ನಮಿತಾ ನೀಡಿದ ದೂರಿನ ಮೇರೆಗೆ ಕಗ್ಗಲೀಪುರ ಠಾಣೆಯಲ್ಲಿ ಶಾಸಕ ಅರವಿಂದ್ ಲಿಂಬಾವಳಿ, ಕೆ.ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.