ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸಿಎಂ ಹಾಗೂ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಬಳಸುತ್ತಿದ್ದ ಮೊಬೈಲ್ ಕಾಣೆಯಾಗಿದೆ ಎಂದು ಇ.ಡಿ. ಮೂಲಗಳನ್ನು ಉಲ್ಲೇಖೀಸಿ ಮಾಧ್ಯಮಗಳು ವರದಿ ಮಾಡಿವೆ. ಜಾರಿ ನಿರ್ದೇಶನಾಲಯ(ಇ.ಡಿ) ಪ್ರಕಾರ, ಇದು ಹಗರಣದಲ್ಲಿ ಕಾಣೆಯಾಗುತ್ತಿರುವ 171ನೇ ಸಾಧನವಾಗಿದೆ ಎನ್ನಲಾಗಿದೆ.
ಕಾಣೆಯಾಗಿರುವ ಅರವಿಂದ್ ಕೇಜ್ರಿವಾಲ್ ಅವರ ಮೊಬೈಲ್ ಫೋನ್‌ನಲ್ಲಿ ಹಗರಣಕ್ಕೆ ಸೇರಿದ ಮಾಹಿತಿ ಇದೆ ಎನ್ನಲಾಗುತ್ತಿದೆ. ಮೊಬೈಲ್ ಫೋನ್ ಎಲ್ಲಿದೆ ಎಂಬುದು ತನಗೆ ಗೊತ್ತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆನ್ನಲಾಗಿದೆ.
ಇ.ಡಿ. ವಿರುದ್ಧ ಆಪ್ ಕಿಡಿ: ಅಬಕಾರಿ ನೀತಿ ಹಗರಣದ ಮಾಹಿತಿ ಒಳಗೊಂಡ ಅರವಿಂದ್ ಕೇಜ್ರಿವಾಲ್ ಅವರ ಫೋನ್ ಕಾಣೆಯಾಗಿದೆ ಎಂಬ ಇ.ಡಿ. ಮೂಲಗಳ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿ(ಆಪ್) ತೀವ್ರ ಆಕ್ರೋಶ ವ್ಯಕ್ತಿಪಡಿಸಿದೆ. ಇ.ಡಿ.ಗೆ ಏನಾದರೂ ಹೇಳುವುದಿದ್ದರೆ ಕೋರ್ಟ್‌ಗೆ ಚಾರ್ಜ್‌ಶೀಟ್ ಹಾಕಿ ಹೇಳಲಿ. ಈ ನೆಲದ ಕಾನೂನಿನ ಅಡಿ ಇ.ಡಿ. ರಚನೆಯಾಗಿದೆ. ಸಂವಿಧಾನ ಉಲ್ಲಂ ಸಬೇಡಿ. ಸಂವಿಧಾನವನ್ನು ಸಾಯಿಸಬೇಡಿ. ಇ.ಡಿ. ಬಿಜೆಪಿಯ ಅಂಗ ಸಂಸ್ಥೆಯಲ್ಲ. ಸಂವಿಧಾನದಡಿ ನಿರ್ಮಾಣವಾಗಿರುವ ಸ್ವತಂತ್ರ ಸಂಸ್ಥೆ. ಅದರಂತೆ ವರ್ತಿಸಿ ಎಂದು ಸಚಿವೆ ಆತಿಶಿ ಹೇಳಿದ್ದಾರೆ.
ಮೈ ಭಿ ಕೇಜ್ರಿವಾಲ್: ಈ ಮಧ್ಯೆ, ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ತನ್ನ ಪ್ರತಿಭಟನೆಯನ್ನು ಮುಂದುವರಿಸಿದೆ. ಮೈ ಭಿ ಕೇಜ್ರಿವಾಲ್ ಎಂಬ ಅಭಿಯಾನವನ್ನು ಕೈಗೊಂಡಿದೆ. ಮಾ.31ರಂದು ದಿಲ್ಲಿಯ ರಾಮಲೀಲಾ ಮೈದಾನಲ್ಲಿ ಇಂಡಿಯಾ ಒಕ್ಕೂಟವು ಕೇಜ್ರಿವಾಲ್ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಆಪ್‌ನಿಂದ ಹೋಳಿ ಬಹಿಷ್ಕಾರ: ಬಿಜೆಪಿಯಿಂದ ವ್ಯಂಗ್ಯ ಹೋಳಿ ಕೇವಲ ಹಬ್ಬವಲ್ಲ. ಕೆಟ್ಟವರ ವಿರುದ್ಧ ಶಿಷ್ಟರ ಗೆಲುವಿನ ಸಂಕೇತ. ಇಂದು ನಮ್ಮ ಎಲ್ಲ ನಾಯಕರು ದುಷ್ಟ ಶಕ್ತಿಯ ವಿರುದ್ಧ ಹೋರಾಡುತ್ತಿದ್ದಾರೆ. ಹಾಗಾಗಿ, ನಾವು ಈ ಬಾರಿ ಹೋಳಿ ಆಚರಿಸುವುದಿಲ್ಲ ಎಂದು ಸಚಿವೆ ಆತಿಶಿ ಟ್ವೀಟ್ ಮಾಡಿದ್ದಾರೆ. ಆಪ್‌ನ ಎಲ್ಲ ನಾಯಕರು, ಕಾರ್ಯಕರ್ತರು ಈ ಬಾರಿ ಹೋಳಿ ಹಬ್ಬವನ್ನು ಬಹಿಷ್ಕರಿಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಇನ್ನೊಂದೆಡೆ, ಬಿಜೆಪಿಯು ಕೇಜ್ರಿವಾಲ್‌ರನ್ನು ಅಣಕಿಸಿ ಹೋಳಿ ಹಬ್ಬವನ್ನು ಆಚರಿಸಿದೆ. ಜೈಲಿನಲ್ಲಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಮನೋಜ್ ತಿವಾರಿ ವ್ಯಂಗ್ಯವಾಡಿದ್ದು, “ಕೆಲವರು ರೈಲಿನಲ್ಲಿ ಹೋಳಿಯಾಡುತ್ತಾರೆ, ಇನ್ನೂ ಕೆಲವರು ಜೈಲಿನಲ್ಲಿ ಹೋಳಿಯಾಡುತ್ತಾರೆ’ ಎಂಬ ಹಾಡನ್ನು ಉಲ್ಲೇಖೀಸಿ ಘೋಷಣೆ ಕೂಗಿದ್ದಾರೆ.
ಮೋದಿಗೆ ದೊಡ್ಡ ಭಯವೇ ಕೇಜ್ರಿವಾಲ್ ಎಂದು ಡಿಪಿ ಬದಲಿಸಿದ ಆಪ್ ನಾಯಕರು!
ಕೇಜ್ರಿವಾಲ್ ಬಂಧನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷವು, “ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಸೋಷಿಯಲ್ ಮೀಡಿಯಾ ಅಭಿಯಾನಕ್ಕೆ ಮುಂದಾಗಿದೆ. ಆಪ್ ನಾಯಕಿಯೂ ಆಗಿರುವ ದಿಲ್ಲಿ ಸಚಿವೆ ಆತಿಶಿ ಅವರು ಈ ಬಗ್ಗೆ ಮಾಹಿತಿ ನೀಡಿ, “ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಚಿತ್ರ ಹಾಗೂ ಮೋದಿ ಕಾ ಸಬ್‌ಸೇ ಬಡಾ ಡರ್ ಕೇಜ್ರಿವಾಲ್ (ಮೋದಿಯ ದೊಡ್ಡ ಹೆದರಿಕೆಯೇ ಕೇಜ್ರಿವಾಲ್) ಎಂಬ ಒಕ್ಕಣಿಕೆಯುಳ್ಳ ಡಿಪಿಯನ್ನು ಆಪ್ ನಾಯಕರು, ಸ್ವಯಂ ಸೇವಕರು ತಮ್ಮ ಟ್ವೀಟರ್, ಫೇಸ್‌ಬುಕ್, ವಾಟ್ಸ್ ಆ್ಯಪ್ ಮತ್ತು ಇತರ ಸೋಷಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಪಿಕ್ಚರ್‌ಗಳಾಗಿ ಬದಲಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ. “ಇಡೀ ದೇಶದಲ್ಲಿ ಮೋದಿಗೆ ಸವಾಲೆಸೆಯಬಲ್ಲ ಏಕೈಕ ನಾಯಕ ಅರವಿಂದ್ ಕೇಜ್ರಿವಾಲ್. ಹಾಗಾಗಿ, ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನು ಇ.ಡಿ ಬಂಧಿಸಿದೆ’ ಎಂದು ಆರೋಪಿಸಿದರು.
ಇದನ್ನೂ ಓದಿ: Maldives: ಭಾರತ ಜತೆ ಕೈಜೋಡಿಸಿದರೆ ವಿತ್ತೀಯ ಬಿಕ್ಕಟ್ಟು ಶಮನ: ಮುಯಿಜ್ಜುಗೆ ಸಲಹೆ