Advertisement

ವಾಹನ ರಹಿತ ರಸ್ತೆ ಮಾದರಿ ಮಾಡುವ ಯೋಜನೆ: ಬೆಲ್ಲದ  

05:23 PM Feb 08, 2021 | Team Udayavani |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಯೋಜನೆಯ ಆರಂಭದಲ್ಲೇ ಮೋಟಾರ್‌ ರಹಿತ ರಸ್ತೆ ಹಾಗೂ ಪಾದಚಾರಿ ಮಾರ್ಗದ ಅರಿವು ಮೂಡಿಸುವ ಯೋಜನೆ ರೂಪಿಸಲಾಗಿತ್ತು. ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಈ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಇದೊಂದು ಮಾದರಿ ರಸ್ತೆಯನ್ನಾಗಿ ಮಾಡುವ ಯೋಜನೆ ಇದಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ಇಲ್ಲಿನ ನವನಗರದ ಬಿಆರ್‌ಟಿಎಸ್‌ ಪಾದಚಾರಿ ಮೇಲ್ಸೇತುವೆಯಿಂದ ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ನಗರ ಭೂ ಸಾರಿಗೆ ಇಲಾಖೆ, ಬಿಆರ್‌ಟಿಎಸ್‌, ಮಹಾನಗರ ಪಾಲಿಕೆ ವತಿಯಿಂದ  ಯೋಜಿಸಿದ್ದ ವಾಹನ ರಹಿತ ರಸ್ತೆ ಹಾಗೂ ಪಾದಚಾರಿ ಮಾರ್ಗ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೋಟಾರ್‌ ರಹಿತ ರಸ್ತೆಯಿಂದ ಜನರಿಗೆ ಸಾಕಷ್ಟು ಅನುಕೂಲಗಳಿವೆ. ಈ ಯೋಜನೆಗಾಗಿ 16 ಕೋಟಿ ರೂ. ಮೀಸಲಿಡಲಾಗಿದೆ. ಪರಿಸರ ರಕ್ಷಣೆಯೊಂದಿಗೆ ಜನರ ಆರೋಗ್ಯ ವೃದ್ಧಿಸುತ್ತದೆ. ಈ ಯೋಜನೆಯ ಪ್ರಾಮುಖ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮಾತನಾಡಿ, ನಗರದಲ್ಲಿ ಇದೊಂದು ಮಾದರಿ ರಸ್ತೆಯಾಗಿದೆ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಪ್ರಾಯೋಗಾರ್ಥ ಈ ರಸ್ತೆಯನ್ನು ಆಯ್ಕೆ ಮಾಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದರು.

ಮಹಾನಗರ ಪೊಲೀಸ್‌ ಆಯುಕ್ತ ಲಾಭು ರಾಮ ಮಾತನಾಡಿ, ಮಹಾನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಯೋಜನೆ ವಿಶೇಷವಾಗಿದೆ.ಮಹಾನಗರ ವ್ಯಾಪ್ತಿಯಲ್ಲೇ ಇದೊಂದು ಮಾದರಿ ರಸ್ತೆಯಾಗಲಿದ್ದು, ಈ ಯೋಜನೆ ಮಹಾನಗರ ಇನ್ನಿತರೆಡೆಗೆ ವಿಸ್ತರಿಸುವುದು ಅಗತ್ಯ ಎಂದರು.

Advertisement

ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ ಮಾತನಾಡಿ, ರಸ್ತೆಗಳು ಎಂದರೆ ವಾಹನಗಳ ಓಡಾಟಕ್ಕೆ ಎನ್ನುವ ಮನಸ್ಥಿತಿ ಎಲ್ಲರಲ್ಲಿದೆ. ಇಂತಹ ರಸ್ತೆಗಳಲ್ಲಿ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ಆಯೋಜಿಸಬಹುದೆನ್ನುವ ವಿನೂತನ ಯೋಜನೆಯಾಗಿದೆ ಎಂದರು.

ಇದನ್ನೂ ಓದಿ :ಜಾತ್ರೆಗೆ ಆಹಾರಧಾನ್ಯ ರವಾನೆ

ಮನೋರಂಜನಾ ಕಾರ್ಯಕ್ರಮಗಳು: ವಾಹನ ರಹಿತ ರಸ್ತೆಗೊಳಪಡುವ ರಸ್ತೆಯ ನಾಲ್ಕನೂರು ಮೀಟರ್‌ ರಸ್ತೆಯುದ್ದಕ್ಕೂ ಹಾವು ಏಣಿ ಪಟ, ನಂಬರ್‌ ಗೇಮ್‌, ಜಾಗೃತಿ ಬರಹ ಸೇರಿದಂತೆ ವಿವಿಧ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಲಾಗಿತ್ತು. ಮಕ್ಕಳಿಗಾಗಿ ಆಟದ ಉಪಕರಣಗಳು, ಸಂಗೀತ, ಕರೋಕೆ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಾಹನ ರಹಿತ ರಸ್ತೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಸಾರಿದರು.

ಸ್ಥಳೀಯ ಮುಖಂಡರಾದ ಚಂದ್ರಶೇಖರ ಮನಗುಂಡಿ, ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಹೊರಕೇರಿ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಬಿಆರ್‌ಟಿಎಸ್‌, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next