Advertisement
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಪರಿಚಿತ ಸಂಖ್ಯೆಯಿಂದಲೇ ಸಾಕಷ್ಟು ಬಾರಿ ಕರೆ ಬಂದಿದೆ. ಪರಿಚಯ ಇಲ್ಲದ ವ್ಯಕ್ತಿಯಿಂದ ಪದೇ ಪದೇ ಕರೆ ಬಂದಿದೆ. ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ದೂರಿನಲ್ಲಿ ಶಾಸಕರು ಹೇಳಿದ್ದಾರೆ. ಈ ಎಲ್ಲದರ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರಿಂದ ತನಿಖಾಧಿಕಾರಿಗಳು ಮಾಹಿತಿ ಪಡೆದು ಕೂಲಕಂಷವಾಗಿ ತನಿಖೆ ನಡೆಸಲಿದ್ದಾರೆ. ಪ್ರಕರಣದ ತನಿಖೆಗಾಗಿ ಕಬ್ಬನ್‌ಪಾರ್ಕ್ ಎಸಿಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಲಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕರೆ ಮಾಡಿರುವುದು ಕೆಲ ತಿಂಗಳ ಹಿಂದೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಂದ ಬಂಧನಕ್ಕೊಳಗಾದ ಯವರಾಜ್ ಸ್ವಾಮಿ ಅಲಿಯಾಸ್ ಸ್ವಾಮಿಯೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Related Articles
Advertisement
ಶಾಸಕ ಅರವಿಂದ್ ಬೆಲ್ಲದ್ ಹೇಳಿರುವ ಪ್ರಕಾರ ಒಂದೂವರೆ ತಿಂಗಳಿಂದ ಅನಾಮಧೇಯ ಕರೆಗಳು ಬರುತ್ತಿವೆ. ಯುವರಾಜ ಸ್ವಾಮಿ ಎಂಬಾತ ಕರೆ ಮಾಡಿ, ನಾನು ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಮಾತನಾಡಿದ್ದಾನೆ. ಅಲ್ಲದೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಪ್ರಸ್ತಾಪಿಸಿದ. ಹೀಗಾಗಿ ಆತನ ಕರೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಪುಷ್ಟಿ ನೀಡುವಂತೆ ಯುವರಾಜ್ ಸ್ವಾಮಿ ಅಲಿಯಾಸ್ ಸ್ವಾಮಿ ಅನಾರೋಗ್ಯಕ್ಕೊಳಗಾಗಿ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಲಾಕ್‌ಡೌನ್ ಜಾರಿಯಾದ ಹತ್ತು ದಿನಗಳ ಬಳಿಕ ಜೈಲಿಗೆ ಹೋಗಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿಯೇ ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ಕರೆ ಮಾಡಿರುವ ಸಾಧ್ಯತೆಗಳಿವೆ. ಆದರೆ, ಚಿಕಿತ್ಸೆ ಸಂದರ್ಭದಲ್ಲಿ ಪೊಲೀಸ್ ಭದ್ರತೆ ನಡುವೆಯೂ ಆತನಿಗೆ ಮೊಬೈಲ್ ಕೊಟ್ಟಿದ್ದು ಯಾರು? ಅರವಿಂದ್ ಬೆಲ್ಲದ್ ಅವರಿಗೆ ಕರೆ ಮಾಡಲು ಸೂಚಿಸಿದವರು ಯಾರು? ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಅಲ್ಲದೆ, ಆತ ಜೈಲಿಗೆ ಮರಳಿದ ಬಳಿಕವೂ ಜೈಲಿನಲ್ಲಿಯೇ ಅಕ್ರಮವಾಗಿ ಮೊಬೈಲ್ ಮೂಲಕ ಮತ್ತೂಮ್ಮೆ ಕರೆ ಮಾಡಿರುವ ಸಾಧ್ಯತೆಗಳು ಇವೆ. ಈ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿದೆ. ಅವರ ಮೊಬೈಲ್ ಸಿಡಿಆರ್ ಪಡೆದು ತನಿಖೆ ನಡೆಸಬೇಕಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಹೆಸರಿನಲ್ಲಿ ಹತ್ತಾರು ಮಂದಿಗೆ ವಂಚಿಸಿದ ಪ್ರಕರಣ ಸಂಬಂಧ ಯುವರಾಜ್ ಸ್ವಾಮಿಯನ್ನು ಸಿಸಿಬಿ ಪೊಲೀಸರು ಜನವರಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಯುವರಾಜ್ ಸ್ವಾಮಿ ವಶಕ್ಕೆ ಪಡೆದು ವಿಚಾರಣೆಜೈಲಿನಲ್ಲಿರುವ ಯುವರಾಜ್ ಸ್ವಾಮಿಯನ್ನು ಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ನೇತೃತ್ವದ ತಂಡ ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಯಾರೊಂದಿಗೆಲ್ಲ ಮಾತನಾಡಿದ್ದಾನೆ? ಶಾಸಕರಿಗೆ ಕರೆ ಮಾಡಲು ಸೂಚಿಸಿದವರು ಯಾರು? ಎಂಬೆಲ್ಲ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.