Advertisement

 ಅರಾಟೆಯ 50 ವರ್ಷ ಹಳೆಯ ಸೇತುವೆ: ತಡೆಗೋಡೆ, ಫುಟ್‌ಪಾತ್‌ಗೆ ಹಾನಿ; ದುರಸ್ತಿಗೆ ಆಗ್ರಹ

04:20 PM May 27, 2023 | Team Udayavani |

ಕುಂದಾಪುರ: ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ 50 ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಸೇತುವೆಯ ತಡೆಗೋಡೆಗೆ ಅಲ್ಲಲ್ಲಿ ಹಾನಿಯಾಗಿದ್ದು, ಇದಲ್ಲದೆ ಫುಟ್‌ಪಾತ್‌ ಅಲ್ಲಲ್ಲಿ ಬಿರುಕು ಬಿಟ್ಟಿರುವುದರಿಂದ ದುರಸ್ತಿಗೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.

Advertisement

ಅರಾಟೆಯ ಹಳೆಯ ಸೇತುವೆಯ ಕೆಲವೆಡೆಗಳಲ್ಲಿ ವಾಹನಗಳು ಢಿಕ್ಕಿಯಾಗಿ, ತಡೆಗೋಡೆಗೆ ಹಾನಿಯಾಗಿದೆ. ಸೇತುವೆಯ ಕೆಲವು ಕಡೆಗಳಲ್ಲಿ ತಡೆಗೋಡೆಗೆ ಹಾನಿಯಾಗಿ ಮುರಿದು ಹೋಗಿದೆ. ಇದಲ್ಲದೆ ಸೇತುವೆಯ ಮೇಲೆ ಪಾದಚಾರಿಗಳಿಗೆ ನಡದುಕೊಂಡು ಹೋಗಲು ನಿರ್ಮಿಸಿರುವ ಫುಟ್‌ಪಾತ್‌ ಸಹ ಅಲ್ಲಲ್ಲಿ ಜರ್ಜರಿತಗೊಂಡಿದ್ದು, ಅದರಲ್ಲಿ ನಡೆದುಕೊಂಡು ಹೋಗುವುದೇ ಕಷ್ಟಕರ.

ಉದ್ದದ ಸೇತುವೆ
ಕುಂದಾಪುರ ಭಾಗದಲ್ಲಿಯೇ ಇದು ಅತೀ ಉದ್ದದ ಸೇತುವೆಯಾಗಿದೆ. ಉಡುಪಿ ಜಿಲ್ಲೆಯ ಸೇತುವೆಗಳ ಪೈಕಿಯೂ ಉದ್ದದ ಸೇತುವೆಗಳಲ್ಲಿ ಇದು ಒಂದಾಗಿದೆ. ಸೇತುವೆಯ ಒಟ್ಟು ಉದ್ದ 615 ಮೀಟರ್‌ ಇದೆ. ಇದು ಹಳೆಯ ಸೇತುವೆಯಾದರೆ, ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಪಕ್ಕದಲ್ಲೇ ಹೊಸದೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಎರಡೂ ಸೇತುವೆಗಳಲ್ಲಿಯೂ ಈಗ ವಾಹನಗಳು ಸಂಚರಿಸುತ್ತವೆ.

ಅಪಾಯಕ್ಕೆ ಆಹ್ವಾನ
ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಬೈಕ್‌, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸೇರಿದಂತೆ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಸೇತುವೆಯ ಕೆಲವು ಕಡೆಗಳಲ್ಲಿ ತಡೆಗೋಡೆ ಮುರಿದು ಹೋಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಅವಘಡ ಸಂಭವಿಸುವ ಮುನ್ನ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಈ ಹೆದ್ದಾರಿ ನಿರ್ವಹಣೆ ಹೊಣೆ ಹೊತ್ತಿರುವ ಐಆರ್‌ಬಿ ಸಂಸ್ಥೆಯವರು ಎಚ್ಚೆತ್ತುಕೊಂಡು, ದುರಸ್ತಿಗೆ ಮುಂದಾಗಲಿ ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅರಾಟೆಯ ಹೊಸ ಸೇತುವೆ ಪಕ್ಕದಲ್ಲಿರುವ ಹಳೆಯ ಸೇತುವೆಯನ್ನು ಜರ್ಮನ್‌ ಮೂಲದ ಗ್ಯಾಮನ್‌ ಇಂಡಿಯಾ ಸಂಸ್ಥೆಯು ನಿರ್ಮಾಣ ಮಾಡಿತ್ತು. ಈ ಸೇತುವೆ ನಿರ್ಮಾಣಗೊಂಡು, ಸರಿ ಸುಮಾರು 50 ವರ್ಷಗಳೇ ಕಳೆದಿವೆ. ಈ ಸೇತುವೆ ಹಳೆಯದಾದರೂ ಯಾವುದೇ ಬಿರುಕು ಆಗಲಿ ಅಥವಾ ಪಿಲ್ಲರ್‌ಗೆ ಹಾನಿ ಆಗಲೀ ಸಂಭವಿಸಿಲ್ಲ. ಸೇತುವೆಯ ಮೇಲಿನ ಡಾಮರು ಕಿತ್ತುಹೋಗಿದ್ದು, ಅದಕ್ಕೆ ತೇಪೆ ಹಾಕಿ ಸರಿ ಮಾಡಲಾಗಿತ್ತು. ಇದರ ಧಾರಣಾ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಅಲ್ಲಲ್ಲಿ ಸಣ್ಣ-ಪುಟ್ಟ ಹಾನಿಯಾಗಿರುವುದನ್ನು ಸರಿಪಡಿಸಬೇಕಾಗಿದೆ.

Advertisement

ದುರಸ್ತಿಗೆ ಸೂಚನೆ
ಅರಾಟೆ ಸೇತುವೆಯ ತಡೆಗೋಡೆ, ಫುಟ್‌ಪಾತ್‌ಗೆ ಹಾನಿಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ, ಕೂಡಲೇ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಿಗಳಿಗೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.
– ರಶ್ಮೀ ಎಸ್‌.ಆರ್‌., ಕುಂದಾಪುರದ ಸಹಾಯಕ ಕಮಿಷನರ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next