ಬೆಳಗಾವಿ: ಒಂದಕ್ಕಿಂತ ಹೆಚ್ಚು ಬಾರಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರಶ್ನೋತ್ತರ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೊಂದು ಸಾಮಾಜಿಕ ಪಿಡುಗು, ಯುವ ಜನರು ಇದಕ್ಕೆ ಅಂಟಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು ಎಲ್ಲರೂ ಇದ್ದಾರೆ. ಪತ್ತೆ ಹಚ್ಚಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ವಿದೇಶದಿಂದ ಪೋಸ್ಟಲ್ ಮೂಲಕ ಬರುವುದನ್ನು ತಡೆಯುತ್ತಿದ್ದೇವೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿಗರನ್ನು ದಸ್ತಗಿರಿ ಮಾಡಿ, ಪಾಸ್ ಪೋರ್ಟ್ ರದ್ದು ಮಾಡುತ್ತಿದ್ದೇವೆ. ಡ್ರಗ್ಸ್ ಜಾಲ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬೀಟ್ ವ್ಯವಸ್ಥೆ ಬಲಗೊಳಿಸುವ ಜತೆಗೆ ಕಾಲೇಜು ಕ್ಯಾಂಪಸ್‌ಗಳಲ್ಲೂ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಉಡುಪಿ, ದ.ಕ. ಬುದ್ಧಿವಂತರ ಜಿಲ್ಲೆ ಎಂದಿದೆ. ಆತಂಕಕಾರಿ ವಿಷಯ ಎಂದರೆ ಡ್ರಗ್ಸ್ ಪ್ರಕರಣ 2019ರಲ್ಲಿ 203, 2020ರಲ್ಲಿ 250 ಹಾಗೂ 2021ರಲ್ಲಿ ಇನ್ನೂ ಹೆಚ್ಚಾಗಿದೆ. ಹೀಗೆ ಗಾಂಜಾ, ಡ್ರಗ್ಸ್ ದಂಧೆಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿವೆ. ಮಟ್ಕಾ ದಂಧೆಗೆ ಸ್ವಲ್ಪ ಮಟ್ಟಿನ ಕಡಿವಾಣ ಬಿದ್ದಿದೆ. ಶಾಲಾ ಕಾಲೇಜು, ಜನ ಸಂದಣಿ ಇರುವ ಪ್ರದೇಶದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಾದಕ ವಸ್ತು ಮಾರಾಟ ಮಾಡುವವರಿಗೆ ಕಠಿನ ಶಿಕ್ಷೆ ನೀಡಬೇಕು. ವೆಬ್‌ಸೈಟ್ ಮೂಲಕ ಡ್ರಗ್ಸ್ ಮಾರಾಟವನ್ನೂ ಪತ್ತೆ ಹಚ್ಚಿ ಅದಕ್ಕೂ ಕಡಿವಾಣದ ಜತೆಗೆ ಅಕ್ರಮ ಮದ್ಯ ಮಾರಾಟಕ್ಕೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.