Advertisement

ಮುಂದಿನ ಐದು ವರ್ಷಗಳ ಕಾಲ ನಿಮಗಾಗಿ ನಾನು ದುಡಿಯುತ್ತೇನೆ: Araga Jnanendra

06:51 PM Apr 18, 2023 | Shreeram Nayak |

ತೀರ್ಥಹಳ್ಳಿ : ಇದು ನನ್ನ 10 ನೇ ಚುನಾವಣೆ. ಆದರೆ ಒಂದೇ ಪಕ್ಷ, ಒಂದೇ ಸಿದ್ಧಾಂತ, ಒಂದೇ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದೇನೆ. ಅನೇಕ ಹಿರಿಯರನ್ನು ಕಳೆದುಕೊಂಡಿದ್ದೇವೆ. ನಾನು ಯಾವುದೇ ದೊಡ್ದ ಕುಟುಂಬದ ಹಿನ್ನೆಲೆಯಿಂದ ಬಂದಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಊಹೆಗೂ ಮೀರಿ ಬೆಳೆದಿದ್ದೇನೆ. ಕೆಲವೊಮ್ಮೆ ನನಗೆ ಇದೆಲ್ಲಾ ಹೌದೇ ಎಂದು ಅನಿಸುತ್ತದೆ. 5 ಬಾರಿಯ ಸೋಲು ನನ್ನನ್ನು ವಿಚಲಿತನನ್ನಾಗಿ ಮಾಡಿಲ್ಲ. ಸೋತಾಗ ಕುಂದಿಲ್ಲ. ಗೆದ್ದಾಗ ತಲೆ ತಿರುಗಿಲ್ಲ. ಜನರ ಪ್ರೀತಿ ನನಗೆ ಸದಾ ಸಿಕ್ಕಿದೆ. ಕಳೆದ ಬಾರಿ ದೊಡ್ದ ಅಂತರದಿಂದ ಗೆಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪಟ್ಟಣದ ಬಾಳೇಬೈಲ್ ನ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ದಾಖಲೆ ಮಟ್ಟದಲ್ಲಿ ಅನುದಾನ ತಂದಿದ್ದೇನೆ. ಒಟ್ಟಾರೆ 3254 ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಎಲ್ಲೇ ಹೋದರೂ ಒಂದಿಲ್ಲೊಂದು ಕೆಲಸ ಕಾಣುತ್ತದೆ. ಜೆಜೆಎಂ ಒಂದರಲ್ಲೇ 720 ಕೋಟಿ ಅನುದಾನ ನೀಡಲಾಗಿದೆ.
ರಸ್ತೆಗಳು ಸುಧಾರಿಸಿದ್ದೇವೆ. ಗುಣಮಟ್ಟಕ್ಕೆ ಅದ್ಯತೆ ನೀಡಿದ್ದೇವೆ ಎಂದರು.

ವಿರೋಧ ಪಕ್ಷದವರು ಏನೂ ಕೆಲಸ ಆಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಡಕೆ ವಿಷಯದಲ್ಲಿ 1994 ರಿಂದ ಬೆನ್ನು ಬಿದ್ದಿದ್ದೇನೆ. ಅಡಕೆ ನಮ್ಮ ಜೀವಾಳ. ಅದರಿಂದಾಗಿ ನಾವು ಮನುಷ್ಯರಾಗಿ ಓಡಾಡುತ್ತಿದ್ದೇವೆ. ಯಾವ ಬೆಳೆಗೂ ಇಲ್ಲದ ಧಾರಣೆ ಅಡಕೆಗಿದೆ. ಇದಕ್ಕಿಂತ ಇನ್ನೊಂದು ಬೆಳೆಗೆ ಈ ಧಾರಣೆ ಇಲ್ಲ. ಅಡಕೆಗೆ ತಗುಲಿರುವ ಎಲೆ ಚುಕ್ಕಿ ರೋಗದ ಅಧ್ಯಯನಕ್ಕೆ ತಜ್ಞರ ತಂಡ ಬಂದಿದೆ.

ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ನೆರವು ನೀಡಿದೆ. ತೀರ್ಥಹಳ್ಳಿಯಲ್ಲಿ ಅಭಿವೃದ್ಧಿಯ ಮನ್ವಂತರ ಆರಂಭವಾಗಿದೆ ಎಂದರು.

ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ನನ್ನನ್ನು ಸೋಲಿಸಲು ಇಬ್ಬರು ಒಟ್ಟಾಗಿದ್ದಾರೆ. ಆದರೆ ಅವರನ್ನು ಸೋಲಿಸಲು ಮತದಾರರು ಹಾಗೂ ನಮ್ಮ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ನಾನು ಅವರನ್ನು ಟೀಕಿಸುವುದಿಲ್ಲ. ಅದೇ ಅವರ ಬಂಡವಾಳ. ಅದನ್ನು ಬಿಟ್ಟರೆ ಅವರ ಬಳಿ ಏನೂ ಇಲ್ಲ
40 ವರ್ಷದ ರಾಜಕೀಯ ಜೀವನದಲ್ಲಿ ಕ್ಷೇತ್ರದಲ್ಲಿ ನನಗೆ ಗೊತ್ತಿಲ್ಲದ ವ್ಯಕ್ತಿ ಇಲ್ಲ. ನನ್ನ ಮನೆಗೆ ಬರುವ ಜನರ ಜಾತಿ, ಧರ್ಮ ಕೇಳದೆ ಕೆಲಸ ಮಾಡಿಕೊಟ್ಟಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಆದರೆ ಸಕ್ರೀಯ ರಾಜಕಾರಣದಿಂದ ನಿವೃತ್ತಿಯಾಗುವುದಿಲ್ಲ. ನನ್ನೊಂದಿಗೆ ಈ ಸಿದ್ಧಾಂತ ಸಾಯಬಾರದು. ನಮ್ಮ ಹಿರಿಯರು ಕೊಟ್ಟಿರುವ ಸಿದ್ಧಾಂತದ ದೀಪವನ್ನು ಮುಂದೆ ತೆಗೆದುಕೊಂಡು ಹೋಗಬೇಕಿದೆ ಎಂದರು.

Advertisement

ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ಬಿಡುವುದನ್ನು ನೋಡುತ್ತಿದ್ದೇವೆ. ಸಿದ್ದಾಂತವನ್ನು ಬದಿಗೊತ್ತಿ ಸ್ವಾರ್ಥಕ್ಕಾಗಿ ಪಕ್ಷ ತೊರೆಯುತ್ತಿದ್ದಾರೆ. ನಾನು ಅಧಿಕಾರಕ್ಕೆ ಅಂಟುಕೊಂಡಿಲ್ಲ. ಆದರೆ ಈ ನನ್ನ ಕೊನೆ ಚುನಾವಣೆ ವಿಜಯದ ಚುನಾವಣೆ ಆಗಬೇಕು. 45 ವರ್ಷದಲ್ಲಿ ನನ್ನನ್ನು ಬೆಳೆಸಿದ ಕ್ಷೇತ್ರದಲ್ಲಿ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಬೇಕಿದೆ ಹಾಗಾಗಿ ಉಳಿದಿರುವ 23 ದಿನಗಳ ಕಾಲ ನೀವು ಕೆಲಸ ಮಾಡಿ ನಿಮಗಾಗಿ ಮುಂದಿನ ಐದು ವರ್ಷಗಳ ಕಾಲ ನಾನು ದುಡಿಯುತ್ತೇನೆ ಎಂದರು

ಬಿಜೆಪಿ ರಾಜ್ಯ ಸಹ ಉಸ್ತುವಾರಿ ಅಣ್ಣಾಮಲೈ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಕೇವಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಮಾತ್ರ ಅಲ್ಲ. ರಾಜ್ಯಸಭೆ ಎಂಎಲ್ಸಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹಲವು ಸ್ಥಾನಮಾನಗಳು ಕೂಡ ಇದೆ. ಪಕ್ಷ ಯಾರನ್ನು ತಿರಸ್ಕಾರ ಮಾಡಿಲ್ಲ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಾರಿಯನ್ನು ನೀಡಿತ್ತು. ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹತ್ತನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ ಇದು ಕೂಡ ಪಕ್ಷ ಮಾಡಿದ ನಿರ್ಧಾರ ಎಂದರು.

ಬಿಜೆಪಿಯಲ್ಲಿ ರಿಜೆಕ್ಷನ್ ಮತ್ತು ಸೆಲೆಕ್ಷನ್ ಇಲ್ಲವೇ ಇಲ್ಲ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ಪಕ್ಷದ ಕಾರ್ಯಕರ್ತರಾಗಿ ದುಡಿದವರಿಗೆ ಪಕ್ಷ ಟಿಕೆಟ್ ನೀಡಿದೆ. ಅದರಲ್ಲಿ ಕೆಲವರು ಕೆಲವರ ಮಗ ಸೊಸೆ ಆಗಿರಬಹುದು. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್ ಆಧಾರದಲ್ಲಿ ನೀಡಲಾಗಿದೆ. ಸುಳ್ಯದಲ್ಲಿ ಬಡ ಕುಟುಂಬದ ಭಾಗೀರಥಿಯವರಿಗೆ ಟಿಕೆಟ್ ನೀಡಲಾಗಿರುವುದು ಯಾವುದೇ ಪಕ್ಷದಲ್ಲಿ ಇಂತಹ ಬಡ ಅಭ್ಯರ್ಥಿಗಳನ್ನು ಗುರುತಿಸುವುದಿಲ್ಲ.

ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುತ್ತದೆ ಪಕ್ಷದಲ್ಲಿ ಸಂಘಟನೆ ಮಾಡಿದ ಹಿರಿಯ ನಾಯಕನನ್ನು ಗುರುತಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಹೊಸನಗರ ಮಾಜಿ ಶಾಸಕ ಸ್ವಾಮೀರಾವ್, ಕಿಶೋರ್ ಕೊಡಿಗೆ, ಗೀತಾ ಸದಾನಂದ ಶೆಟ್ಟಿ, ಬಾಳೆಬೈಲ್ ರಾಘವೇಂದ್ರ, ಬೇಗುವಳ್ಳಿ ಸತೀಶ್ ಸೇರಿ ಹಲವರು ಉಪಸ್ಥಿತರಿದ್ದರು.

ಆರಗ ಜ್ಞಾನೇಂದ್ರ ನಾಮಪತ್ರ ಸಲ್ಲಿಕೆ
ತೀರ್ಥಹಳ್ಳಿ : ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕುಶಾವತಿ ಪಾರ್ಕ್ ನ ಸಮೀಪ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಹೊರಟ ಅವರು ಕಾರ್ಯಕರ್ತರೊಡನೆ ಡಿಜೆ ಸೌಂಡ್ಸ್ ನೊಂದಿಗೆ ಹೆಜ್ಜೆ ಹಾಕಿದರು.

ರಸ್ತೆಯುದ್ಧಕ್ಕೂ ಪಕ್ಷದ ಬಾವುಟ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದ ಕಾರ್ಯಕರ್ತರು, ಹದಿನೈದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next