Advertisement

ಅಡಿಕೆ ನರ್ಸರಿ ನೋಡಿ “ಸ್ವಾಮಿ’ನಾನು ಬೆಳೆಯೋದೇ ಹೀಗೆ

03:50 AM Jul 03, 2017 | Harsha Rao |

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ದೇವರಹಳ್ಳಿ ಗ್ರಾಮದ ರೈತ ಕುಮಾರಸ್ವಾಮಿ ಕೂಡ ಎಲ್ಲರಂತೆ ಅಡಿಕೆ ಬೆಳೆಯುತ್ತಿದ್ದಾರೆ. ಆದಾಯ ಪಡೆಯುತ್ತಿದ್ದಾರೆ. ಇಷ್ಟೇ ಆಗಿದ್ದರೆ ವಿಶೇಷ ಏನೂ ಇರುತ್ತಿರಲಿಲ್ಲ. ಸ್ವಾಮಿಗಳು  ಅಡಿಕೆ ಮರಗಳ ನಡುವೆ ವೈವಿಧ್ಯಮಯ ಸಸಿ ತಯಾರಿಸಿ ಮಾರಾಟ ಮಾಡುವ ನರ್ಸರಿ ಮಾಡಿದ್ದಾರೆ.  ವರ್ಷವಿಡೀ ಆದಾಯ ಪಡೆದು ಸುತ್ತಮುತ್ತಲ ರೈತರಿಗೆ ಮಾದರಿಯಾಗಿದ್ದಾರೆ.

Advertisement

ಕೃಷಿ ಹೇಗೆ?
ಶಿವಮೊಗ್ಗ -ಚೋರಡಿ ಮೂಲಕ ಶಿಕಾರಿಪುರ ಸಂಪರ್ಕಿಸುವ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ದೇವರಹಳ್ಳಿ ಗ್ರಾಮದಲ್ಲಿ ಇವರ ಹೊಲವಿದೆ. 8 ವರ್ಷದ ಹಿಂದೆ  ಖುಷ್ಕಿ ಜಮೀನಿನಲ್ಲಿ ಕೊಳವೆ ಬಾವಿ ತೆಗೆಸಿ ಅಡಿಕೆ ಸಸಿ ನೆಟ್ಟಿದ್ದರು. ಈಗ ಸಸಿಗಳು ಮರವಾಗಿ ಬೆಳೆದು ಫ‌ಸಲು ನೀಡುತ್ತಿವೆ. ಸಾಲಿನಿಂದ ಸಾಲಿಗೆ ಮತ್ತು ಮರದಿಂದ ಮರಕ್ಕೆ 10 ಅಡಿ ಅಂತರದಲ್ಲಿ ಅಡಿಕೆ ಮರಗಳಿವೆ.  ನಡುವೆ ಏಲಕ್ಕಿ, ಕಾಫಿ,ಕೋಕೊ, ಲವಂಗ ಮುಂತಾದ ಹಲವು ಬಗೆಯ ಬೇರೆ ಬೇರೆ ಸಸಿಗಳನ್ನು ಸಹ ಬೆಳೆಸಿದ್ದಾರೆ. ಅಡಿಕೆ ಮರದ ನಡುವಿನ ಖಾಲಿ ಸ್ಥಳದಲ್ಲಿ ನರ್ಸರಿ ಗಿಡಗಳಿವೆ. 

ಕಾಡಿನಿಂದ ಮಣ್ಣು ತರಿಸಿ ಎರೆಗೊಬ್ಬರ ಮಿಶ್ರಣ ಮಾಡಿ ಗಿಡದ ಪ್ಯಾಕೆಟ್‌ ತಯಾರಿಸಿಕೊಳ್ಳುತ್ತಾರೆ. ತೀರ್ಥಹಳ್ಳಿ, ಹೊಸನಗರ, ಸಾಗರದ ಕೆಳದಿ, ಸೊರಬ ತಾಲೂಕಿನ ಹೊಡಬಟ್ಟೆ, ಹರೀಶಿ ಇನ್ನಿತರ ಸ್ಥಳಗಳಿಂದ ಆಯ್ದ ರೈತರಿಂದ ಬೀಜದ ಅಡಿಕೆ ಖರೀದಿಸಿ ಸಸಿ ಬೆಳೆಸುತ್ತಾರೆ. ಪಣಿಯೂರು, ವೆಂಗುರಾÉ, ಕರಿಮುಂಡ ಇತ್ಯಾದಿ ತಳಿಯ ಕಾಳು ಮೆಣಸಿನ ಸಸಿ ತಯಾರಿಸುತ್ತಾರೆ. ನರ್ಸರಿ ಸಸಿಗಳಿಗೆ ಎರೆಗೊಬ್ಬರ ಹಾಕಿ ಸಸಿ ತಯಾರಿಸುವ ಕಾರಣ ಯಾವುದೇ ಹೊಸ ಪ್ರದೇಶದಲ್ಲಿ ಸಸಿ ನಾಟಿ ಮಾಡಿದರೂ ಆಯಾ ಪ್ರದೇಶಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯುತ್ತದೆ. ವಿಶೇಷ ತಳಿಯ ಮಾವು, ನೇರಳೆ,ನುಗ್ಗೆ ಸಸಿಗಳನ್ನು ಸಹ ಬೆಳೆಸಿ ಮಾರಾಟ ಮಾಡುತ್ತಾರೆ.

ಲಾಭದ ಲೆಕ್ಕಾಚಾರ
ನರ್ಸರಿ ಗಿಡಗಳಿಗೆ ಶೇಡ್‌ ನಟ್‌ ಇತ್ಯಾದಿ ರೂಪಿಸುವ ಖರ್ಚಿಲ್ಲ. ಅಡಿಕೆ ಮರಗಳೇ ನೆರಳು ಒದಗಿಸುತ್ತದೆ.  ಅಡಿಕೆ ತೋಟದ ಕೃಷಿಗೆ ಎರೆಗೊಬ್ಬರ ತಯಾರಿಸುವ ಇವರು ಇದೇ ಎರೆಗೊಬ್ಬರವನ್ನು ನರ್ಸರಿ ಸಸಿಗಳಿಗೂ ಬಳಸುತ್ತಾರೆ. ಪ್ರತಿ ವರ್ಷ ನವೆಂಬರ್‌ ,ಡಿಸೆಂಬರ್‌ ತಿಂಗಳಿನಲ್ಲಿ ನರ್ಸರಿ ಗಿಡ ಬೆಳೆಸಲು ಆರಂಭಿಸುತ್ತಾರೆ. ಮೇ ಅಂತ್ಯದಿಂದ ಆಗಸ್ಟ್‌ವರೆಗೂ ಗಿಡ ಮಾರಾಟವಾಗುತ್ತದೆ. ಇವರ ನರ್ಸರಿ ಗಿಡಗಳು ಉತ್ತಮ ತಳಿಯದೆಂಬ ದೃಢ ನಂಬಿಕೆ ಇದೆ.  ಈ ಕಾರಣಕ್ಕೆ ಬಹುದೂರದಿಂದ ಆಗಮಿಸಿ ಒಯ್ತುತ್ತಾರೆ. ಈ ವರ್ಷ 45 ಸಾವಿರ ಅಡಿಕೆ ಸಸಿ, 5 ಸಾವಿರ ಕಾಳು ಮೆಣಸಿನ ಸಸಿ, 1 ಸಾವಿರ ನುಗ್ಗೆ ಸಸಿ, 500 ನೇರಳೆ ಸಸಿ, 500 ಮಾವಿನ ಸಸಿ ತಯಾರಿಸಿದ್ದಾರೆ. ಅಡಿಕೆ ಸಸಿಗಳು ತಲಾ ಒಂದಕ್ಕೆ ರೂ.18 ರಂತೆ ಮಾರಾಟ ಮಾಡುತ್ತಿದ್ದಾರೆ.  ಜೂನ್‌ ಮೊದಲವಾರದ ವರೆಗೆ 20 ಸಾವಿರ ಅಡಿಕೆ ಸಸಿಗಳನ್ನು ಮಾರಾಟ ಮಾಡಿ  3 ಲಕ್ಷದ 60 ಸಾವಿರ  ಆದಾಯ ದೊರೆತಿದೆ. ಆಗಸ್ಟ್‌ ವೇಳೆಗೆ ಉಳಿದ 25 ಸಾವಿರ ಸಸ್ಯ ಮಾರಾಟವಾಗುತ್ತದೆ.  ಕಾಳು ಮೆಣಸಿನ ಸಸಿಗಳನ್ನು ಒಂದು ಗಿಡಕ್ಕೆ ತಲಾ ರೂ 30, ಮಾವಿನ ಸಸಿ ತಲಾ ರೂ.20, ನುಗ್ಗೆ ಸಸಿಗಳನ್ನು ರೂ.10 ರಂತೆ ಮಾರಾಟ ಮಾಡಿದ್ದಾರೆ.ಇವುಗಳ ಮಾರಾಟದಿಂದ ಈ ವರ್ಷ ರೂ. ರೂ.1 ಲಕ್ಷದ 70 ಸಾವಿರ ಆದಾಯ ದೊರೆತಿದೆ.  ವರ್ಷದ ಎಲ್ಲಾ ತಿಂಗಳಿನಲ್ಲಿಯೂ ಆಗಾಗ ಗ್ರಾಹಕರು ಆಗಮಿಸಿ ಅಡಿಕೆ ಸಸಿ ಖರೀದಿಸಿ ಒಯ್ಯುತ್ತಾರೆ.ಇದರಿಂದ ಇವರಿಗೆ ವರ್ಷವಿಡೀ ಆದಾಯ ದೊರೆಯುತ್ತಲೇ ಇರುತ್ತದೆ. 

– ಎನ್‌.ಡಿ.ಹೆಗಡೆ ಆನಂದಪುರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next