Advertisement

ಉದಯವಾಣಿ ವಿಶೇಷ : ಏರಿಕೆಯತ್ತ ಅಡಿಕೆ, ಕರಿಮೆಣಸು ಧಾರಣೆ

05:50 AM Jul 27, 2018 | Karthik A |

ಸುಳ್ಯ: ಕೆಲವು ತಿಂಗಳುಗಳಿಂದ ಕುಸಿತ ಕಂಡಿರುವ ಅಡಿಕೆ, ಕರಿಮೆಣಸು ಧಾರಣೆಯೀಗ ತುಸು ಏರಿಕೆ ಕಂಡಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಹೊರ ರಾಜ್ಯದ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಈ ಏರಿಕೆಗೆ ಕಾರಣ. ಆದರೆ ಮಾರ್ಚ್‌ ಕೊನೆಯಲ್ಲಿ ಹೊಸ ಅಡಿಕೆ 220 ರೂ., ಹಳೆ ಅಡಿಕೆ 260 ರೂ.ನಲ್ಲಿ ಖರೀದಿ ಆಗಿತ್ತು. ಎಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿಯೂ ಧಾರಣೆ ಇಳಿ ಹಂತದಲ್ಲೇ ಇತ್ತು. ಜುಲೈ ಆರಂಭದಿಂದ ತುಸು ಏರುಗತಿಯಲ್ಲಿದೆ.

Advertisement

ಧಾರಣೆಯಲ್ಲಿ ಏರಿಕೆ
ಜುಲೈ ಮೊದಲ ವಾರದಿಂದ ಅಡಿಕೆ ಧಾರಣೆ ಪರವಾಗಿಲ್ಲ. ಜು. 26ರಂದು ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 200ರಿಂದ 233 ರೂ. ಒಳಗೆ ಖರೀದಿಯಾಗಿದೆ. ಜು. 23ರಿಂದ 26ರ ಈ ಮೂರು ದಿನಗಳಲ್ಲಿ 3 ರೂ.ಗಳಷ್ಟು ಏರಿಕೆಯಾದಂತಾಗಿದೆ. ಹಳೆ ಅಡಿಕೆ ಗುರುವಾರ 290ರಲ್ಲಿ ಖರೀದಿಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಧಾರಣೆ ಯಥಾಸ್ಥಿತಿಯಲ್ಲಿದೆ.

ಕರಿಮೆಣಸಿನಲ್ಲೂ 15 ರೂ. ಏರಿಕೆ 
ಈ ಹಿಂದಿನ ವರ್ಷ 800 ರೂ. ಸನಿಹಕ್ಕೆ ಬಂದಿದ್ದ ಕರಿಮೆಣಸು ಧಾರಣೆ ಬಳಿಕ ಏಕಾಏಕಿ ಕುಸಿತ ಕಂಡಿತ್ತು. ಅಡಿಕೆ, ತೆಂಗು ಬೆಳೆಗಾರರ ಪಾಲಿಗೆ ಉಪ ಬೆಳೆಯಾಗಿ, ಅಡಿಕೆ ಧಾರಣೆ ಕೈಕೊಡುವ ಸಂದರ್ಭ ಆಸರೆಯಾಗುತ್ತಿದ್ದ ಕರಿಮೆಣಸೂ 285ಕ್ಕೆ ಕುಸಿದಿತ್ತು. ಕೆಲವು ದಿನಗಳಿಂದ ಧಾರಣೆಯಲ್ಲಿ ಏರಿಕೆ ಕಾಣುತ್ತಿದ್ದು, ಜು. 26ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 320ಕ್ಕೆ ಖರೀದಿ ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಮೂರು ದಿನಗಳಲ್ಲಿ 15 ರೂ. ಏರಿಕೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ 322ರ ತನಕವೂ ಇತ್ತು ಅನ್ನುತ್ತಾರೆ ಕೆಲವು ಬೆಳೆಗಾರರು.

ಹೊರ ರಾಜ್ಯದಲ್ಲಿ ಬೇಡಿಕೆ
ಗಣೇಶ ಚತುರ್ಥಿ ಸೇರಿದಂತೆ ನಾನಾ ಹಬ್ಬಗಳು ಬರುತ್ತಿರುವುದರಿಂದ ಹೊರ ರಾಜ್ಯಗಳಲ್ಲಿ ಅಡಿಕೆ ಬೇಡಿಕೆ ಹೆಚ್ಚಿದೆ. ಉತ್ತರ ಭಾರತದಲ್ಲಿ ಪಾನ್‌ ಮಸಾಲಗಳಿಗೆ, ಅಡಿಕೆ ಆಧಾರಿತ ಇತರ ಉತ್ಪನ್ನಗಳಿಗೆ ಮಂಗಳೂರು ಚಾಲಿ ಅಡಿಕೆ ಬಳಸುವುದೂ ಏರಿಕೆಗೆ ಕಾರಣ ಎನ್ನುತ್ತವೆ ಮಾರುಕಟ್ಟೆ ಮೂಲಗಳು.

ಏರು-ಇಳಿಕೆ…!
2017ರ ಜುಲೈಯ ಮಾರುಕಟ್ಟೆಗೆ ಹೋಲಿಸಿದರೆ ಈ ವರ್ಷ ಹಳೆ ಅಡಿಕೆ ಧಾರಣೆ ಹೆಚ್ಚಳವಾಗಿದೆ. ಹೊಸ ಅಡಿಕೆ ಧಾರಣೆ ಕಡಿಮೆ ಇದೆ. 2017 ಜು. 26 ರಂದು ಹಳೆ ಅಡಿಕೆ ಧಾರಣೆ 280ರ ಆಸುಪಾಸಿನಲ್ಲಿತ್ತು. ಈ ಬಾರಿ 290ಕ್ಕೆ ಏರಿದೆ. ಹೊಸ ಅಡಿಕೆ ಧಾರಣೆ ಕಳೆದ ವರ್ಷ 240 ರೂ.ನಲ್ಲಿತ್ತು. ಈ ವರ್ಷ 233 ರೂ. ಗಡಿಯಲ್ಲಿದ್ದು, 7 ರೂ. ಕುಸಿತದಲ್ಲಿದೆ. ಜೂನ್‌ -ಜುಲೈ ಅಡಿಕೆ ಧಾರಣೆ ಗಮನಿಸಿದಾಗ, ಹಳೆ ಅಡಿಕೆಗೆ 2014ರಲ್ಲಿ 222, 2015ರಲ್ಲಿ 330, 2016ರಲ್ಲಿ 300, 2017ರಲ್ಲಿ 285, ಹೊಸ ಅಡಿಕೆಗೆ 200, 250, 235, 240 ರೂ. ಗಳಿತ್ತು.

Advertisement

ಏರಿಕೆ ಕಾಣಲಿದೆ
ಹೊಸ ಅಡಿಕೆ ಧಾರಣೆ ಇನ್ನಷ್ಟು ಏರಿಕೆ ಕಾಣುವ ಅವಕಾಶ ಇದೆ. ಬೇಡಿಕೆ ಹೆಚ್ಚಳದ ಜತೆಗೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದು ಇದಕ್ಕೆ ಕಾರಣ. ಕರಿಮೆಣಸು ಧಾರಣೆ ಏರಿಕೆ ಕಂಡಿದ್ದು, ಇಲ್ಲಿನ ಏರಿಳಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ.
– ಎಸ್‌.ಆರ್‌. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೊ

Advertisement

Udayavani is now on Telegram. Click here to join our channel and stay updated with the latest news.

Next