ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ ನಿರ್ಮಾಣ ಮಾಡುವ ಪ್ರಸ್ತಾವ ಇದ್ದು, ಇದಕ್ಕೆ ಸೂಕ್ತ ಸ್ಥಳ ಗುರುತಿಸಿ ಕೊಡುವಂತೆ ಮೀನುಗಾರಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೀನುಗಾರಿಕಾ ಕಾಲೇಜಿಗೆ ಸೂಚಿಸಿದ್ದಾರೆ.
ಅವರು ಸೋಮವಾರ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮೀನುಗಾರಿಕಾ ಕಾಲೇಜಿನ ಡೀನ್ ಪ್ರೊ| ಸೆಂಥಿಲ್ ವೇಲು ಅವರು ವಿಷಯ ಪ್ರಸ್ತಾಪಿಸಿ, ದೇಶದಲ್ಲಿ 1200 ದ್ವೀಪಗಳು ಇದ್ದು, ಕರ್ನಾಟಕದಲ್ಲಿ 120 ದ್ವೀಪಗಳು ಇವೆ. ಈ ಪೈಕಿ 25 ದ್ವೀಪಗಳು 200 ಕಿ.ಮಿ. ವ್ಯಾಪ್ತಿಯಲ್ಲಿ ಇವೆ. ಇವುಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಅವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ ನಿರ್ಮಾಣ ಮಾಡ ಬಹುದಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕಾರವಾರದಲ್ಲಿ ಈಗಾಗಲೇ 1500 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾದ ಸಾಗರ ಮಾಲಾ ಯೋಜನೆಗೆ ಸ್ಥಳೀಯ ಜನರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ನೆನೆಗುದಿಗೆ ಬಿದ್ದಿವೆ. ಹಾಗಾಗಿ ಜನರ ಅಥವಾ ಯಾರದೇ ಆಕ್ಷೇಪಣೆ ಇಲ್ಲದ, ಸೂಕ್ತ ಜಾಗವನ್ನು ಕರಾವಳಿಯ 3 ಜಿಲ್ಲೆಗಳ ವ್ಯಾಪ್ತಿಯ ಎಲ್ಲಾದರೂ ಒಂದು ಕಡೆ ಹುಡುಕಿ ಕೊಡಿ. ಪಿಪಿಪಿ ಮಾದರಿಯಲ್ಲಿ ಅಕ್ವೇರಿಯಂ ನಿರ್ಮಾಣ ಮಾಡೋಣ. ಉದ್ದೇಶಿತ ಅಕ್ವೇರಿಯಂ ನಿರ್ಮಾಣ ಮಾಡುವ ತಾಣವು ಕರಾವಳಿ ತೀರ ಆಗಿದ್ದು, ಸೂಕ್ತ ರಸ್ತೆ ಸಂಪರ್ಕ ಹೊಂದಿರಬೇಕು. ರೈಲು, ವಿಮಾನ ನಿಲ್ದಾಣ ಹತ್ತಿರ ಇರ ಬೇಕು ಎಂದರು.
ದ್ವೀಪದಲ್ಲಿ ಯಾವುದೇ ಯೋಜನೆ ಕೈಗೆತ್ತಿ ಕೊಳ್ಳುವಾಗ ಅದು ಮೀನುಗಾರರು ಮತ್ತು ಮೀನುಗಾರಿಕೆಗೆ ಪ್ರಯೋಜನ ಆಗುವಂತಿರ ಬೇಕು ಎಂದು ಮೀನುಗಾರ ಮುಖಂಡರಾದ ಶಶಿ ಕುಮಾರ್, ನಿತಿನ್ ಕುಮಾರ್ ಮತ್ತು ಮೋಹನ್ ಬೆಂಗ್ರೆ ಅವರು ಹೇಳಿದರು.
ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ ಹಾಗೂ ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕರು ಸಭೆಯಲ್ಲಿ ಭಾಗವಹಿಸಿದ್ದರು.