ಬೆಂಗಳೂರು: “ನಮಸ್ಕಾರ್, ಕೃಷಿ ಪರಿವಾಹನ್ ಕಾಲ್ ಸೆಂಟರ್ ಮೇ ಆಪ್ ಕಾ ಸ್ವಾಗತ್ ಹೈ…’
– ಕೋವಿಡ್ 19 ವೈರಸ್ ಲಕ್ಷಣಗಳಿರುವ ಆರೋಗ್ಯ ಸಂಬಂಧಿ ಸಮಸ್ಯೆಗೆ ಸೂಕ್ತ ಮಾರ್ಗದರ್ಶನ ಪಡೆಯಲು “ಆಪ್ತಮಿತ್ರ’ ಸಹಾಯವಾಣಿಗೆ ಕರೆ ಮಾಡಿದರೆ ನಿಮಗೆ ಕೇಳಿಬರುವ ಉತ್ತರ ಇದು!
ಪ್ರಸ್ತುತ ಜನರಲ್ಲಿ ಜ್ವರ, ನೆಗಡಿ, ಕೆಮ್ಮು ಉಸಿರಾಟ ತೊಂದರೆಗಳು ಕಂಡುಬಂದರೆ ಮಾರ್ಗ ದರ್ಶನ ನೀಡಲು ಸರಕಾರ ಆಪ್ತಮಿತ್ರ ಆರೋಗ್ಯ ಸಹಾಯವಾಣಿ ಆರಂಭಿಸಿದೆ. ಆದರೆ ಇದರ ನೆರವಿಗಾಗಿ ಕರೆ ಮಾಡಿದರೆ ಕೆಲವೊಮ್ಮೆ ಆ ಸಂಖ್ಯೆ ಅಮಾನ್ಯವಾಗಿರುತ್ತದೆ. ಇನ್ನು ಹಲವು ಸಲ ಕೃಷಿ ಟ್ರಾನ್ಸ್ ಪೋರ್ಟ್ ಸಹಾಯವಾಣಿಗೆ ಕರೆ ಹೋಗುತ್ತದೆ.
ಸತತ ಆರೆಂಟು ಬಾರಿ ಕರೆ ಮಾಡಿದರೆ ಒಮ್ಮೆ ಆಪ್ತಮಿತ್ರ ಸಹಾಯವಾಣಿಗೆ ಹೋಗುತ್ತದೆ. ಆದರೆ ತತ್‌ಕ್ಷಣಕ್ಕೆ ಆಪ್ತಮಿತ್ರರು ನಿಮ್ಮ ನೆರವಿಗೆ ಧಾವಿಸುವುದಿಲ್ಲ. ಬದಲಿಗೆ ಅವರ “ಸಹಾಯಕರು’ ಸಂಭಾಷಣೆ ನಡೆಸುತ್ತಾರೆ. ಅನಂತರ ಮೊಬೈಲ್ ನಂಬರ್ ನಮೂದಿಸಿಕೊಂಡು, “ನಮ್ಮ ವೈದ್ಯರು ತಮಗೆ ಕರೆ ಮಾಡಲಿದ್ದಾರೆ. ಅಲ್ಲಿಯವರೆಗೆ ಧೈರ್ಯವಾಗಿರಿ ಏನೂ ಆಗುವುದಿಲ್ಲ’ ಎಂಬ ಭರವಸೆಯ ನುಡಿಗಳು ಸಿಗುತ್ತವೆ.
ಸಹಾಯವಾಣಿ ಉದ್ದೇಶ ಮತ್ತು ಇದಕ್ಕೆ ನೀಡಿರುವ ಮಹತ್ವ ಶ್ಲಾಘನೀಯ. ಆದರೆ ಕೇಂದ್ರದಲ್ಲಿ ಕಾಲ್‌ಡ್ರಾಪ್‌ಗ್ಳ ಸಮಸ್ಯೆ ಇದೆ. ಸ್ವತಃ “ಉದಯವಾಣಿ’ ಪ್ರತಿನಿಧಿ ಕರೆ ಮಾಡಿದಾಗಲೂ ಅದು ಕೃಷಿ ಟ್ರಾನ್ಸ್ ಪೋರ್ಟ್ ಸಹಾಯ ವಾಣಿಗೆ ರವಾನೆಯಾಯಿತು. ಮೂರ್‍ನಾಲ್ಕು ಬಾರಿ ಯತ್ನಿಸಿದಾಗ ಆಪ್ತಮಿತ್ರರು ಸಂಪರ್ಕಕ್ಕೆ ಬಂದರು.
ಬೆಂಗಳೂರಿನಲ್ಲಿ ನಾಲ್ಕು, ಮೈಸೂರು ಮತ್ತು ಮಂಗಳೂರಿನಲ್ಲಿ ತಲಾ ಒಂದು “ಆಪ್ತಮಿತ್ರ ಸಹಾಯವಾಣಿ’ ಇವೆ. ಇದರಲ್ಲಿ ಸುಮಾರು 310 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಶೇ. 80ರಷ್ಟು ಆಯುಷ್ ವಿದ್ಯಾರ್ಥಿಗಳು. ಎರಡು ಪಾಳಿಗಳಲ್ಲಿ ತಲಾ ಇಬ್ಬರು ವೈದ್ಯರಿರುತ್ತಾರೆ. ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಆಪ್ತಮಿತ್ರ ಸಹಾಯ ವಾಣಿಯ ವಿಶೇಷ ಅಧಿಕಾರಿ ಮೀನಾಕ್ಷಿ ನೇಗಿ ತಿಳಿಸಿದ್ದಾರೆ.
ಕರೆ ಕೃಷಿ ಪರಿವಾಹನ್ ಕೇಂದ್ರಕ್ಕೆ ಹೋಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ತತ್‌ಕ್ಷಣ ಪರಿಶೀಲಿಸಿ ಸರಿಪಡಿಸಲಾಗು ವುದು. ಉಳಿದಂತೆ ಕಾಲ್‌ಡ್ರಾಪ್ ಆಗುತ್ತಿವೆ. ಆದರೆ ಆ ಪ್ರಮಾಣ ತುಂಬಾ ಕಡಿಮೆ.
-ಮೀನಾಕ್ಷಿ ನೇಗಿ, “ಆಪ್ತಮಿತ್ರ’ ವಿಶೇಷ ಅಧಿಕಾರಿ.
-ವಿಜಯಕುಮಾರ್ ಚಂದರಗಿ