ಬೆಂಗಳೂರು: ಜೆಡಿಎಸ್ ಪಕ್ಷದ “ಜನತಾ ಜಲಧಾರೆ’ ಕಾರ್ಯಕ್ರಮಕ್ಕೆ ಎ. 16ರಂದು ಚಾಲನೆ ದೊರಕಲಿದೆ. ಈ ಕುರಿತು ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಮಾಜಿ ಮುಖ್ತಮಂತ್ರಿ ಎಚ್.ಡಿ. ಕುಮಾರಸ್ವಾಮಿ, 5 ವರ್ಷ ಪೂರ್ಣ ಅಧಿಕಾರ ಕೊಟ್ಟರೆ 75 ವರ್ಷಗಳಿಂದ ನೀರಾವರಿ ಯೋಜನೆಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು. ಈಗಾಗಲೇ 15 ಗಂಗಾ ರಥಗಳು ಸಿದ್ಧವಾಗಿವೆ. ಈ ತಿಂಗಳ 12ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಈ ರಥಗಳಿಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಹಸುರು ನಿಶಾನೆ ತೋರಲಿದ್ದಾರೆ ಎಂದವರು ಹೇಳಿದರು.
ಎಲ್ಲ ರಥಗಳು ಹನುಮ ಜಯಂತಿ ದಿನ ಎ. 16ಕ್ಕೆ ಜಲ ಸಂಗ್ರಹ ಮಾಡುವ ನಿಗದಿತ ಸ್ಥಳಗಳನ್ನು ತಲುಪಲಿವೆ. 15 ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು. ಎಲ್ಲ ಜಿಲ್ಲೆಗಳಿಗೂ ಜಲ ಸಮಾನತೆ ಹಾಗೂ ಜಲ ಸದ್ಬಳಕೆ ನಿಟ್ಟಿನಲ್ಲಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗುವುದು. ರಾಜ್ಯದಲ್ಲಿ ಕನ್ನಡಿಗರದ್ದೇ ಆದ ಸರಕಾರ ತರಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಅದೇ ಉದ್ದೇಶವನ್ನು ಜಲಧಾರೆ ಹೊಂದಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಮೋಹನ್‌ದಾಸ್ ಪೈ ಟ್ವೀಟ್:ಸರ್ಕಾರದ ಯೋಗ್ಯತೆ ಪ್ರಶ್ನಿಸಿದ ಎಚ್‌ಡಿಕೆ
ಒಟ್ಟು 15 ತಂಡಗಳು; ನಿತ್ಯ ಪೂಜೆ
ಹದಿನೈದು ಗಂಗಾ ರಥಗಳ ಜತೆಗೆ 15 ತಂಡಗಳು ಇರುತ್ತವೆ. ಮೇ 8ರಂದು ಬೆಂಗಳೂರು ನಗರಕ್ಕೆ ಎಲ್ಲ ರಥಗಳು ಜಲ ಸಂಗ್ರಹ ಮಾಡಿಕೊಂಡು ವಾಪಸ್ ಬರುತ್ತವೆ. ಅನಂತರ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿ ಜಾರಿ ಬಗ್ಗೆ ಸಂಕಲ್ಪ ಮಾಡುತ್ತೇವೆ. ಅದೇ ದಿನ ಆ ರಥಗಳ ನೀರನ್ನು ಒಂದು ಬ್ರಹ್ಮ ಕಲಶಕ್ಕೆ ತುಂಬಿ ಪೂಜಿಸಿ ನಂತರ ಅಂದೇ ಜೆಪಿ ಭವನದಲ್ಲಿ ಆ ಕಲಶ ಪ್ರತಿಷ್ಟಾಪನೆ ಮಾಡುತ್ತೇವೆ. ಆ ಕಲಶಕ್ಕೆ ಮುಂದಿನ ಚುನಾವಣೆವರೆಗೆ ನಮ್ಮ ಸಂಪ್ರದಾಯದಂತೆ ನಿತ್ಯ ಗಂಗಾ ಪೂಜೆ ನಡೆಯಲಿದೆ ಎಂದವರು ತಿಳಿಸಿದರು.