ಜಗಳೂರು: 7ನೇ ವೇತನ ಆಯೋಗ ರಚನೆಗೆ ರಾಜ್ಯ ಸರ್ಕಾರ ಒಲವು ತೋರಿದ್ದು, ಇನ್ನೇರಡು ತಿಂಗಳಲ್ಲಿ ಅಧ್ಯಕ್ಷರ ನೇಮಕಾತಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆಂದು ನೌಕರರ ಸಂಘದ ಅಧ್ಯಕ್ಷ ಆನಂದಪ್ಪ ಹೇಳಿದರು.
ಪಟ್ಟಣದ ಎನ್‌ಜಿಪ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 6ರಂದು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ 7ನೇ ವೇತನ ಆಯೋಗದ ರಚನೆ ಸೇರಿದಂತೆ ನೌಕರರ ಇತರೇ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ ಅಲ್ಲದೇ 5 ಮತ್ತು 6ನೇ ವೇತನ ಆಯೋಗದಲ್ಲಾದ ವೇತನ ತಾರತಮ್ಯವನ್ನು ಸರಿಪಡಿಸಲಾಗುವುದು ಎಂದಿದೆ ಎಂದು ತಿಳಿಸಿದರು.
ವೇತನ ಆಯೋಗ ರಚಿಸಲು ಈ ಹಿಂದಿನ ಸರ್ಕಾರಗಳ ಆರೇಳು ವರ್ಷಗಳ ಅವಧಿ ತೆಗೆದುಕೊಳ್ಳುತ್ತಿದ್ದವು. ಆದರೆ ಪ್ರಸ್ತುತ ರಾಜ್ಯ ಸರ್ಕಾರ 5ವರ್ಷಕ್ಕೆ ವೇತನ ಆಯೋಗ ರಚನೆ ಮುಂದಾಗಿರುವುದು ಸ್ವಾಗತಾರ್ಹ. ಆಯೋಗ ರಚಿಸಿ ನಾಲ್ಕು ತಿಂಗಳೊಳಗೆ ಸಮಿತಿಯ ವರದಿ ಪಡೆದು 7ನೇ ವೇತನ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕಾಲಮಿತಿ ಬಡ್ತಿ ವೇತನ ಸಮರ್ಪಕವಾಗಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ನೌಕರರಿಗೆ ನೀಡುತ್ತಿರುವ ವೇತನ ಭತ್ಯೆಗಳು ಸೇರಿದಂತೆ ಇತರೇ ಸೌಲಭ್ಯಗಳನ್ನು ರಾಜ್ಯ ಸರ್ಕಾರದ ನೌಕರರಿಗೆ ನೀಡಬೇಕು. 2006ರಿಂದ ನೇಮಕವಾದ ನೌಕರರಿಗೆ ಜಾರಿಗೊಳಿಸಿರುವ ಪಿಂಚಣಿ ರಹಿತ ವ್ಯವಸ್ಥೆಯನ್ನು ಕೈಬಿಟ್ಟು ಪಿಂಚಣಿ ಸಹಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಸಹಕಾರ ಸಂಘ ಸ್ಥಾಪಿಸುವ ಪ್ರಕ್ರಿಯೆ ಮುಂದುವರಿದೆ. ಪತ್ತಿನ ಸಹಕಾರ ಸಂಘ ಒಟ್ಟು 12 ಲಕ್ಷರೂ. ಷೇರು ಇರಬೇಕೆಂಬ ನಿಯಮ ಇರುವುದರಿಂದ ಸದ್ಯದಲ್ಲಿ ನೌಕರರಿಗೆ ಷೇರು ನಿಗದಿಮಾಡಲಾಗುವುದು.
2016ನೇ ಸಾಲಿನಲ್ಲಿ ನಿವೃತ್ತರಾದ ನೌಕರರಿಗೆ ರಾಜ್ಯ ಸಂಘದಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಿವೃತ್ತಿಯಾದ ನೌಕರರು ತಾಲೂಕು ಸಂಘಕ್ಕೆ ಮಾಹಿತಿ ನೀಡುವಂತೆ ಅವರು ಕೋರಿದರು. ಜಿಲ್ಲಾ ಗೌರವಾಧ್ಯಕ್ಷ ನಾಗೇಶ್ ಗೌಡ, ಕಾರ್ಯದರ್ಶಿ ಲಕ್ಷಿಕಾಂತ್, ಖಜಾಂಚಿ ನೇತ್ರಾವತಿ, ನಿರ್ದೇಶಕರಾದ ಸುರೇಶ್‌ಬಾಬು, ಅಜಮತ್ತವುಲ್ಲಾ ಈ ಸಂದರ್ಭದಲ್ಲಿ ಇದ್ದರು.