Advertisement

ಗ್ರಂಥಾಲಯ ನಿರ್ವಹಣೆ ಬಜೆಟ್‌ ಅನುಮೋದನೆ

04:24 PM Jul 15, 2022 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಗ್ರಂಥಾಲಯಗಳ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳ ಉದ್ದೇಶಕ್ಕಾಗಿ 2022-23ನೇ ಸಾಲಿಗೆ ವಿನಿಯೋಗಿಸಲು 47.77 ಲಕ್ಷ ರೂ. ಮೊತ್ತದ ಖರ್ಚಿನ ಅಂದಾಜು ನಿಗದಿಪಡಿಸ ಲಾಗಿದ್ದು, ಇದಕ್ಕೆ ಅನುಮೋದನೆ ನೀಡಲಾಗಿದೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 25ನೇ ಆಯವ್ಯಯ ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 2022-23ನೇ ಸಾಲಿನ ಮುಂಗಡ ಪತ್ರಕ್ಕೆ ಅನುಮೋದನೆ ನೀಡಲಾಯಿತು.

ಸ್ವೀಕೃತಿಗಳ ಅಂದಾಜು ಪಟ್ಟಿ ಮಂಡನೆ: 2022-23ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ನಿಧಿ ಸ್ವೀಕೃತಿಗಳ ಅಂದಾಜು ಪಟ್ಟಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಆಡಳಿತ ವೆಚ್ಚಗಳು, ಗ್ರಂಥಗಳು ಮತ್ತು ಉಪಕರಣಗಳು ನಿರ್ವಹಣಾ ವೆಚ್ಚ, ಇತರೆ ವೆಚ್ಚಗಳ ಸಂಬಂಧ ವಿವರವನ್ನು ಸಭೆಯಲ್ಲಿ ನೀಡಲಾಯಿತು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಚಾರುಲತಾಸೋಮಲ್‌ ಮಾತನಾಡಿ ಗ್ರಂಥಾಲಯದ ಅಭಿವೃದ್ಧಿ ಹಾಗೂ ಸದಸ್ಯತ್ವ ನೋಂದಣಿ ಸಂಖ್ಯೆ ಹೆಚ್ಚಾಗಲು ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಓದುಗರು ಗ್ರಂಥಾಲಯಕ್ಕೆ ಬರುವಂತಾಗಲು ವಿಶೇಷ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಹೆಚ್ಚು ಪುಸ್ತಕ ಒದಗಿಸಬೇಕು: ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾಗಿರುವ ಪುಸ್ತಕಗಳನ್ನು ಹೆಚ್ಚು ಒದಗಿಸಬೇಕು. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಿ ಪುಸ್ತಕ ಖರೀದಿಗೆ ಮೀಸಲಾದ ಹಣವನ್ನು ವಿನಿಯೋಗಿಸಿ ಪುಸ್ತಕಗಳನ್ನು ಖರೀದಿಸಬಹುದು ಎಂದು ತಿಳಿಸಿದರು.

Advertisement

ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಂಡ್ಲುಪೇಟೆ, ಯಳಂದೂರು, ಹನೂರು ಶಾಖೆಗಳು, ಕೊಳಚೆ ಪ್ರದೇಶದ ಗ್ರಂಥಾಲಯಗಳು, ರೈಲ್ವೆ ಬಡಾವಣೆ, ರಾಮಸಮುದ್ರ, ಉಪ್ಪಲಗೇರಿಮೋಳೆ, ಸೋಮವಾರಪೇಟೆಯ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನಗಳನ್ನು ಗುರುತಿಸಿ ನೀಡಬೇಕು. ಈ ಉದ್ದೇಶಕ್ಕಾಗಿ ಆಯಾ ಭಾಗದ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ಚಾರುಲತಾ ತಿಳಿಸಿದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಹಾಗೂ ನಗರಸಭಾ ಸದಸ್ಯ ಆಗಿರುವ ಎಂ. ಮಹೇಶ್‌ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಧ್ಯಯನ ಮಾಡುವ ಅಭ್ಯರ್ಥಿಗಳಿಗೆ ನೆರವಾಗುವ ಪುಸ್ತಕಗಳನ್ನು ಗ್ರಂಥಾಲಗಳಿಗೆ ಖರೀದಿ ಮಾಡಬೇಕು. ಗ್ರಂಥಾಲಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಓಚರ್‌ ಸಿಬ್ಬಂದಿಗೆ ನೀಡಲಾಗುವ ಗೌರವ ಸಂಭಾವನೆಯನ್ನು ಹೆಚ್ಚಳ ಮಾಡಬೇಕೆಂದು ತಿಳಿಸಿದರು.

ಗ್ರಂಥಾಲಯ ಪ್ರಾಧಿಕಾರದ ಮತ್ತೋರ್ವ ಸದಸ್ಯ ಹಾಗೂ ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ ವಿದ್ಯಾರ್ಥಿಗಳನ್ನು ಓದಿನೆಡೆಗೆ ಹೆಚ್ಚು ಅಸಕ್ತರನ್ನಾಗಿಸಬೇಕಿದೆ. ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಂಥಾಲಯ ಪ್ರಾಧಿಕಾರಿದ ಸದಸ್ಯರಾದ ವೈ.ಬಿ. ಉಮಾಶಂಕರ್‌, ರವಿ, ಬಿ. ಸಿದ್ದಪ್ಪಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌, ನಗರದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪಿ. ದೇವರಾಜು, ಬಿ.ಆರ್‌.ಸಿ ರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next