Advertisement

ಹೆಚ್ಚುವರಿ ಕಾಮಗಾರಿಗೆ ಅನುಮೋದನೆ ಕಡ್ಡಾಯ

05:45 AM Feb 02, 2019 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಅಥವಾ ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕಾದಲ್ಲಿ ಮಂಡಳಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ ಎಂದು ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಅನುಷ್ಠಾನ ಏಜೆನ್ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಎಚ್.ಕೆ.ಆರ್‌.ಡಿ.ಬಿ. ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಹಾಗೂ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ಸಭೆ ನಡೆಸಿದ ಅವರು, ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯಕ್ಕೆ ಅನುಗುಣವಾಗಿ ಇನ್ನಿತರ ವಿಸ್ತರಣೆ ಅಥವಾ ಪೂರಕ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾದಲ್ಲಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ಮಂಡಳಿಗೆ ಕಾರ್ಯಸೂಚಿಯನ್ನು ಅನುಮೋದನೆಗೆ ಸಲ್ಲಿಸಬೇಕು. ಮಂಡಳಿ ಅನುಮೋದನೆ ಪಡೆಯದೆ ಕಾಮಗಾರಿ ಮುಗಿಸಿ ಬಿಲ್ಲು ಸಲ್ಲಿಸಿದಲ್ಲಿ ಹಣ ಪಾವತಿ ಮಾಡುವುದಿಲ್ಲ ಎಂದು ಹೇಳಿದರು.

ಮಂಡಳಿ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿ ಪೂರ್ಣಗೊಂಡ ನಂತರ ಅನುಷ್ಠಾನ ಏಜೆನ್ಸಿಗಳು ವೆಬ್‌ಸೈಟ್ ಮೂಲಕವೇ ಗುತ್ತಿಗೆದಾರರಿಗೆ ಹಣ ಪಾವತಿಸಲು ಬಿಲ್ಲು ಸಲ್ಲಿಸುತ್ತಾರೆ. ಅದರಂತೆ ತ್ವರಿತವಾಗಿ ಅನುದಾನ ಪಾವತಿಸಲು ವ್ಯವಸ್ಥೆ ಮಾಡಲಾಗಿದ್ದು, ವಿಳಂಬಕ್ಕೆ ಯಾವುದೇ ಅವಕಾಶವಿಲ್ಲ. ಕಾಮಗಾರಿ ಹಂಚಿಕೆ ಮೊತ್ತದ ಪೈಕಿ ಶೇ.80ರಷ್ಟು ಮೊತ್ತವನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಉಳಿದ ಶೇ.20ರಷ್ಟು ಹಣವನ್ನು ಭೌತಿಕವಾಗಿ ಸಂಬಂಧಿಸಿದ ಇಲಾಖೆಯಿಂದ ಪ್ರಮಾಣ ಪತ್ರ ಹಾಗೂ ಅಂತಿಮ ಬಿಲ್ಲು ಸಲ್ಲಿಸಿದ ಮೇಲೆ ಪಾವತಿಸಲಾಗುತ್ತದೆ ಎಂದರು.

ಮಂಡಳಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತಡೆಯಾಜ್ಞೆ ನೀಡಿರುವ ಪ್ರಕರಣಗಳಿದ್ದಲಿ ಅಂತಹ ಯೋಜನೆಗಳನ್ನು ಮಂಡಳಿ ಹಿಂದಕ್ಕೆ ಪಡೆಯುತ್ತದೆ. ಯಾವುದೇ ಕಾರಣಕ್ಕೂ ವಿಳಂಬ ಸಹಿಸಲಾಗದು ಎಂದು ಹೇಳಿದರು.

ಮರಳು ಸಮಸ್ಯೆಗೆ ಪ್ರತ್ಯೇಕ ಸಭೆ: ಮಂಡಳಿ ಕಾಮಗಾರಿಗೆ ಜಿಲ್ಲೆಯ ಎಲ್ಲೆಡೆ ಮರಳು ಸಮಸ್ಯೆ ಕಂಡುಬರುತ್ತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗುತ್ತಿಗೆದಾರರಿಗೆ ಅಭಯ ನೀಡಿದರು.

Advertisement

ಸಭೆಯಲ್ಲಿ ಭಾಗವಹಿಸಿದ ಬಹುತೇಕ ಗುತ್ತಿಗೆದಾರರು ಮರಳು ಸಮಸ್ಯೆ, ಕೋರ್ಟ್‌ ತಡೆಯಾಜ್ಞೆಯಿಂದ ಕಾಮಗಾರಿ ವಿಳಂಬವಾಗಿದ್ದಕ್ಕೆ ತಡೆಯಾಜ್ಞೆ ತೆರವುಗೊಳಿಸಲು, ಸಕಾಲದಲ್ಲಿ ಹಣ ಪಾವತಿ ಆಗುವ ಬಗ್ಗೆ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಜಿಪಂ ಸಿಇಒ ಡಾ| ರಾಜಾ ಪಿ. ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಅನುಷ್ಠಾನ ಏಜೆನ್ಸಿಗಳಿಂದ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಆಯಾ ಕಾಮಗಾರಿಯನ್ನು ತಮ್ಮ ಸ್ವಾಧೀನಕ್ಕೆ ಪಡೆಯಬೇಕೆಂದು ನಿರ್ದೇಶನ ನೀಡಲಾಗಿದೆ. ಕೆಲವು ಸಂದರ್ಭದಲ್ಲಿ ಪಿ.ಡಿ.ಒ.ಗಳು ಇದಕ್ಕೆ ಸ್ಪಂದಿಸದಿದ್ದಲ್ಲಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದುಕೊಳ್ಳಬೇಕು ಎಂದರು.

ಮಂಡಳಿ ಉಪ ಕಾರ್ಯದರ್ಶಿ ಡಾ| ಬಿ. ಸುಶೀಲಾ, ಜಂಟಿ ಕಾರ್ಯದರ್ಶಿ ಬಸವರಾಜ ಹಾಗೂ ಜಿಲ್ಲೆಯ ವಿವಿಧ ಅನುಷ್ಠಾನ ಏಜೆನ್ಸಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.

ತಪಾಸಣೆ ವಿಳಂಬಕ್ಕೆ ದಂಡ
ಕಾಮಗಾರಿ ಮುಗಿದ ಕೂಡಲೆ ಅನುಷ್ಠಾನ ಏಜೆನ್ಸಿಗಳು ಇಮೇಲ್‌ ಮೂಲಕ ಕಾಮಗಾರಿ ತಪಾಸಣೆಗೆ ಮೂರನೇ ವ್ಯಕ್ತಿಗೆ ಮಾಹಿತಿ ನೀಡಬೇಕು. ಮೂರನೇ ವ್ಯಕ್ತಿ 10 ದಿನದೊಳಗೆ ತಪಾಸಣೆ ನಡೆಸಿ ವರದಿ ನೀಡಬೇಕೆಂದು ಈಗಾಗಲೆ ನಿರ್ದೇಶನ ನೀಡಲಾಗಿದೆ. ಇದನ್ನು ತಪ್ಪಿದಲ್ಲಿ ಅಂತಹ 3ನೇ ವ್ಯಕ್ತಿ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದ ದಂಡ ಹಾಕಲು ಸೂಚನೆ ನೀಡಲಾಗಿದೆ.
∙ಸುಬೋಧ ಯಾದವ, ಎಚ್ಕೆಆರ್‌ಡಿಬಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next